ಜೆನ್ ಜೀಗಳಿಗೆ ಪ್ರಧಾನಿ ಮೋದಿ ಕಿವಿಮಾತು!  
ದೇಶ

ಜಗತ್ತಿಗೆ ಅವಶ್ಯವಿರುವ ಪರಿಹಾರಗಳು ನಿಮ್ಮಲ್ಲೇ ಇವೆ: ಜೆನ್ ಜೀಗಳಿಗೆ ಪ್ರಧಾನಿ ಮೋದಿ ಕಿವಿಮಾತು! | Narendra Modi

ಚೆನ್ನೈ: ದೇಶದ ಭವಿಷ್ಯಕ್ಕೆ ಯುವಶಕ್ತಿಯೇ ದಿಕ್ಸೂಚಿ ಎಂದಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಜಗತ್ತಿಗೆ ತುರ್ತಾಗಿ ಬೇಕಾಗಿರುವ ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಸಾಮರ್ಥ್ಯ ಇಂದಿನ ಜೆನ್ ಜೀ ಯುವಕರಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಪ್ರತಿಯೊಬ್ಬ ಯುವಕನೂ ತನ್ನ ಭವಿಷ್ಯವನ್ನು ಅತ್ಯಂತ ದೊಡ್ಡ ಪರದೆಯಲ್ಲಿ ನೋಡುವ ಮೂಲಕ ಸಾಹಸಕ್ಕೆ ಧುಮುಕಬೇಕು ಎಂದು ಕರೆ ನೀಡಿದ್ದಾರೆ.

ಚೆನ್ನೈ: ದೇಶದ ಭವಿಷ್ಯಕ್ಕೆ ಯುವಶಕ್ತಿಯೇ ದಿಕ್ಸೂಚಿ ಎಂದಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಜಗತ್ತಿಗೆ ತುರ್ತಾಗಿ ಬೇಕಾಗಿರುವ ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಸಾಮರ್ಥ್ಯ ಇಂದಿನ ಜೆನ್ ಜೀ ಯುವಕರಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಪ್ರತಿಯೊಬ್ಬ ಯುವಕನೂ ತನ್ನ ಭವಿಷ್ಯವನ್ನು ಅತ್ಯಂತ ದೊಡ್ಡ ಪರದೆಯಲ್ಲಿ ನೋಡುವ ಮೂಲಕ ಸಾಹಸಕ್ಕೆ ಧುಮುಕಬೇಕು ಎಂದು ಕರೆ ನೀಡಿದ್ದಾರೆ.

ನಂದಂಬಾಕಂನ ಚೆನ್ನೈ ಟ್ರೇಡ್ ಸೆಂಟರ್‌ನಲ್ಲಿ ಜೈಗೋಪಾಲ್ ಗರೋಡಿಯಾ ಹಿಂದೂ ವಿದ್ಯಾಲಯ ಮ್ಯಾಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿಕಸಿತ ಭಾರತಕ್ಕೆ ಅಗತ್ಯವಿರುವ ಹೊಸ ಆಲೋಚನೆಗಳು ಮತ್ತು ಪರಿಹಾರಗಳು ದೇಶಕ್ಕೆ ಭವಿಷ್ಯವನ್ನು ಮಾತ್ರವಲ್ಲದೆ ಇಡೀ ಜಗತ್ತಿನ ಭವಿಷ್ಯವನ್ನೂ ರೂಪಿಸುತ್ತವೆ ಎಂದಿದ್ದಾರೆ.

ಈ ವೇಳೆ ತಮ್ಮ ರಾಜಕೀಯ ಹಾಗೂ ಸಾಂಸ್ಕೃತಿಕ ನಂಟು ಕುರಿತು ಮಾತನಾಡುತ್ತಾ ಪ್ರಧಾನಿ, ನಾನು ಕಾಶಿಯ ಪ್ರತಿನಿಧಿ ಎಂದು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯನ್ನು ಹೆಮ್ಮೆಯಿಂದ ಉಲ್ಲೇಖಿಸಿದರು. ಮುಂದುವರಿದು, ನಿರ್ಭಯವಾಗಿರಲು ಸ್ಫೂರ್ತಿ ನೀಡುವ ಮಹಾನ್ ಕವಿ ಭಾರತಿಯಾರ್ ಅವರ ನುಡಿಗಳನ್ನು ನೆನಪಿಸುತ್ತಾ, ಇಲ್ಲಿರುವ ನಿಮ್ಮೆಲ್ಲರಿಗೂ ಧೈರ್ಯದಿಂದ ಮುನ್ನಡೆಯಲು ನೀವೇ ಒಂದು ಅವಕಾಶ ಮಾಡಿಕೊಳ್ಳಿ ಎಂದು ಒತ್ತಾಯಿಸಿದರು. ಯುವಕರು ತಮ್ಮ ಹೊಸ ಆಲೋಚನೆಗಳ ಮೇಲೆ ಶ್ರಮಿಸಬೇಕು, ದೊಡ್ಡ ಕನಸುಗಳನ್ನು ಕಾಣಬೇಕು, ಎಂದಿಗಿಂತಲೂ ವಿಭಿನ್ನವಾಗಿ ಯೋಚಿಸಬೇಕು ಮತ್ತು ಯಾವುದೇ ಭಯವಿಲ್ಲದೆ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ:ನೀವು ಭಾರತ, ಇಸ್ರೇಲ್ ಹಾಗೂ ಜಗತ್ತಿನ ನೈಜ ಹೀರೋ!...ಮಚ್ಚಾರ್​​ ಸ್ವಾಗತಕ್ಕೆ ಜೆರುಸಲೆಮ್‌ ಎದುರು ನೋಡುತ್ತಿದೆ ಎಂದ ಇಸ್ರೇಲ್ ಅಧ್ಯಕ್ಷ | Smit Machchhar

ಕಾರ್ಯಕ್ರಮದ ಮುಕ್ತಾಯದ ಹಂತದಲ್ಲಿ ದೇಶದ ಯುವ ಸಮುದಾಯಕ್ಕೆ ಭರವಸೆ ತುಂಬಿದ ಪ್ರಧಾನಿ ಮೋದಿ, ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ, ಇದು ಸಂಪೂರ್ಣವಾಗಿ ನಿಮ್ಮದೇ ಸಮಯ ಮತ್ತು ನಿಮ್ಮದೇ ಆದ ಸುವರ್ಣ ಅವಕಾಶವಾಗಿದ್ದು, ನಾವೆಲ್ಲರೂ ಒಟ್ಟಾಗಿ ಇದನ್ನು ಸಾಧಿಸೋಣ ಎಂದು ಯುವಕರನ್ನು ಹುರಿದುಂಬಿಸಿದರು.

ವಿಜಯ್​ ಜೊತೆ ಹೆಜ್ಜೆಗೆ ಹೆಜ್ಜೆ ಹಾಕುತ್ತೇನೆ ಎಂದ ನಮೋ!

ಇದಕ್ಕೂ ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಮೋ​, ತಮಿಳುನಾಡಿನ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಜೊತೆಗೆ ಹೆಜ್ಜೆಹಾಕಲಿದೆ, ರಾಜ್ಯಗಳ ನಿರೀಕ್ಷೆ ಮತ್ತು ಆಕಾಂಕ್ಷೆಗಳನ್ನು ಮುಖ್ಯಮಂತ್ರಿಯಾಗಿದ್ದಾಗ ತಾವು ಹತ್ತಿರದಿಂದ ಅರಿತಿರುವುದಾಗಿ ತಿಳಿಸುತ್ತಾ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರಗತಿಯ ಗುರಿಗಳನ್ನು ತಲುಪಲು ಕೇಂದ್ರದಿಂದ ಸಂಪೂರ್ಣ ನೆರವು ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದ ಉತ್ಪಾದನಾ ವಲಯದ ಬೆಳವಣಿಗೆಗೆ ತಮಿಳುನಾಡು ನೀಡುತ್ತಿರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಕೊಡುಗೆಯನ್ನು ಕೊಂಡಾಡಿರುವ ಪ್ರಧಾನಿ ಮೋದಿ, 2014ರಿಂದ ನಮ್ಮ ಎಲೆಕ್ಟ್ರಾನಿಕ್ಸ್ ರಫ್ತು 11 ಪಟ್ಟು ಹೆಚ್ಚಾಗಿದೆ ಮತ್ತು ಇಂದು ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ತಯಾರಕರಾಗಿದ್ದೇವೆ, ರಕ್ಷಣಾ ರಫ್ತು 50 ಪಟ್ಟು ಹೆಚ್ಚಾಗಿದೆ. ನಮ್ಮ ಎಂಜಿನಿಯರಿಂಗ್ ರಫ್ತು ಕೂಡ ಹೊಸ ದಾಖಲೆ ಸೃಷ್ಟಿಸಿದ್ದು, ಇದರಿಂದಾಗಿ ದೇಶದ ಯುವಕರಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದಿದ್ದಾರೆ.

ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ಸುಮಾರು 17,000 ಕೋಟಿ ರೂ. ಹೂಡಿಕೆಯೊಂದಿಗೆ ತೂತ್ತುಕುಡಿಯಲ್ಲಿರುವ ಚಿದಂಬರನಾರ್ ಬಂದರನ್ನು ವಿಶ್ವದರ್ಜೆಯ ಮೆಗಾ ಕಂಟೈನರ್ ಮತ್ತು ಹಸಿರು ಇಂಧನ ಹಬ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಇದು ಪೂರ್ಣಗೊಂಡ ನಂತರ ವಿಶ್ವದ ಅತಿ ದೊಡ್ಡ ಕಂಟೈನರ್ ನೌಕೆಗಳಿಗೆ ಅವಕಾಶ ಕಲ್ಪಿಸಲಿದ್ದು, ತಮಿಳುನಾಡನ್ನು ಕೈಗಾರಿಕೆ ಮತ್ತು ಸಾರಿಗೆಯ ಜಾಗತಿಕ ಕೇಂದ್ರವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದರು(ಏಜೆನ್ಸೀಸ್​).