Subhash Chandra | ಮುಕೇಶ್ ಅಂಬಾನಿಗೆ ಎಚ್ಚರಿಕೆ ನೀಡಿದ ಸುಭಾಷ್ ಚಂದ್ರ!  
ದೇಶ

ನಿಮ್ಮ ಕಬೋರ್ಡ್‌ನಲ್ಲೇ ಅನೇಕ ಅಸ್ತಿಪಂಜರಗಳಿವೆ, ಕೊಳಕು ಆಟ ಬಂದ್ ಮಾಡಿ!...ಮುಕೇಶ್ ಅಂಬಾನಿಗೆ ಎಚ್ಚರಿಕೆ ನೀಡಿದ ಸುಭಾಷ್ ಚಂದ್ರ! | Subhash Chandra

ನನ್ನ ಬಳಿ ಕಳೆದುಕೊಳ್ಳಲು ಈಗ ಏನೂ ಬಾಕಿ ಉಳಿದಿಲ್ಲ. ಆದರೆ ನಿಮ್ಮ ಕಬೋರ್ಡ್‌ನಲ್ಲಿ ಅನೇಕ ಅಸ್ತಿಪಂಜರಗಳಿವೆ ಮರೆಯಬೇಡಿ ಎಂದು ಎಸೆಲ್ ಗ್ರೂಪ್ ಹಾಗೂ ಜೀ ಸಂಸ್ಥೆಯ ಸಂಸ್ಥಾಪಕ ಡಾ. ಸುಭಾಷ್ ಚಂದ್ರ, ಉದ್ಯಮಿ ಮುಕೇಶ್ ಅಂಬಾನಿ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಎನ್‌ಸಿಎಲ್‌ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ 22,000 ಕೋಟಿ ರೂಪಾಯಿ ಸಾಲದ ಮೊತ್ತವನ್ನು ಕೇವಲ 6.5 ಕೋಟಿ ರೂಪಾಯಿಗೆ ಇಳಿಸಲಾಗಿದೆ ಎಂದು ರಿಲಯನ್ಸ್ ಸಂಸ್ಥೆಗೆ ಸೇರಿದ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ಸುಭಾಷ್ ಚಂದ್ರ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಮಾಧ್ಯಮ ಅಪಪ್ರಚಾರ ಮತ್ತು ತೇಜೋವಧೆ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಇದನ್ನೆಲ್ಲಾ ತಕ್ಷಣವೇ ನಿಲ್ಲಿಸುವಂತೆ ಮುಕೇಶ್ ಅಂಬಾನಿಗೆ ಸ್ಪಷ್ಟವಾಗಿ ಹೇಳಿದ್ದಾರೆ.

ಡಾ. ಸುಭಾಷ್ ಚಂದ್ರ ಮಾಡಿರುವ ಈ ಎಲ್ಲಾ ಆರೋಪಗಳನ್ನು ರಿಲಯನ್ಸ್ ಗ್ರೂಪ್ ಸಂಪೂರ್ಣವಾಗಿ ತಳ್ಳಿಹಾಕಿದ್ದು, ಈ ಹೇಳಿಕೆಗಳು ಆಧಾರರಹಿತ ಹಾಗೂ ನಿರಾಧಾರವಾಗಿದ್ದು, ತಮ್ಮ ಮಾಧ್ಯಮ ನೆಟ್‌ವರ್ಕ್‌ಗಳನ್ನು ಎಂದಿಗೂ ಯಾರ ವಿರುದ್ಧವೂ ವೈಯಕ್ತಿಕ ದಾಳಿಗೆ ಬಳಸಿಕೊಂಡಿಲ್ಲ ಮತ್ತು ಮುಂದೆಯೂ ಬಳಸುವುದಿಲ್ಲ ಎಂದು ರಿಲಯನ್ಸ್ ಸ್ಪಷ್ಟಪಡಿಸಿದೆ.

ಏನಿದು ವಿವಾದ...?

ಮುಕೇಶ್ ಅಂಬಾನಿ ಹಾಗೂ ಅವರ ಒಡೆತನದ ಮಾಧ್ಯಮ ನೆಟ್‌ವರ್ಕ್‌ಗಳು(TV18/CNBC/News18) 22,000 ಕೋಟಿ ರೂಪಾಯಿ ಸಾಲದ ಸುಳ್ಳು ಅಂಕಿ-ಅಂಶಗಳನ್ನು ಹರಡುವ ಮೂಲಕ ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡುತ್ತಿವೆ ಮತ್ತು ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿವೆ ಎಂದು ಸುಭಾಷ್ ಚಂದ್ರ ಆರೋಪಿಸಿದ್ದಾರೆ. ಈ ತಪ್ಪು ಮಾಹಿತಿ ಪ್ರಸಾರವಾದ ನಂತರ ತಾವು ಸ್ವತಃ ಮುಕೇಶ್ ಅಂಬಾನಿ ಅವರಿಗೆ ಕರೆ ಮಾಡಲು ಯತ್ನಿಸಿ ಪತ್ರವನ್ನೂ ಬರೆದಿದ್ದಾಗಿ ಚಂದ್ರ ಬಹಿರಂಗಪಡಿಸಿದ್ದಾರೆ. ಈ ವಿಷಯವಾಗಿ ಸಂಪಾದಕರಿಗೆ ದೂರು ನೀಡಿದಾಗ, ತಮಗೆ ಮೇಲಿನಿಂದ ಬಂದಿರುವ ಸೂಚನೆಯಂತೆ ನಡೆಯುತ್ತಿರುವುದಾಗಿ ಸಂಪಾದಕರು ತಿಳಿಸಿದ್ದರು. ಹೀಗಾಗಿ ಸಾರ್ವಜನಿಕರಿಗೆ ಸತ್ಯ ತಿಳಿಸಲು ತಾವು ಮುಕ್ತವಾಗಿ ಮಾತನಾಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
2019ರ ಜೀ ಸಂಸ್ಥೆಯ ಹಣಕಾಸಿನ ಬಿಕ್ಕಟ್ಟನ್ನು ಉಲ್ಲೇಖಿಸಿದ ಅವರು, ಶೇಲ್ ಕಂಪನಿಗಳಿಂದಾಗಿ ಷೇರುಗಳು ಒಂದೇ ದಿನ ಶೇ. 40ರಷ್ಟು ಪತನಗೊಂಡಿದ್ದವು ಎಂದಿದ್ದಾರೆ. ಸಾಲ ತೀರಿಸಲು ಜೀ ಮಾರಾಟದ ಪ್ರಸ್ತಾಪದೊಂದಿಗೆ ಅಂಬಾನಿ ಬಳಿ ಹೋದಾಗ, ಬ್ಯಾಂಕ್ ಹಣವನ್ನು ಬಡ್ಡಿ ಸಮೇತ ಏಕೆ ಮರಳಿಸುತ್ತೀರಿ ಎಂದು ಅಂಬಾನಿ ಸಲಹೆ ನೀಡಿದ್ದರು. ನಂತರ ಇನ್ವೆಸ್ಕೋ ಮೂಲಕ ಸಂಸ್ಥೆಯನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ, ಸಣ್ಣ ಶೇರುದಾರರ ಹಿತಾಸಕ್ತಿಗೆ ವಿರುದ್ಧವಾಗಿದ್ದ ಆ ಆಫರ್ ತಿರಸ್ಕರಿಸಿ ಸೋನಿ ಜೊತೆ ವಿಲೀನಕ್ಕೆ ನಿರ್ಧರಿಸಿದ್ದಾಗಿ ಹೇಳಿದ್ದಾರೆ.
ತಾವು ದೇಶ ಬಿಟ್ಟು ಓಡಿಹೋಗದ ಹೆಮ್ಮೆಯ ಕಾರ್ಪೊರೇಟ್ ಪ್ರಜೆ ಎಂದು ಹೇಳಿದ ಸುಭಾಷ್ ಚಂದ್ರ, ಸಂಸ್ಥೆಯ ಒಟ್ಟು 45,000 ಕೋಟಿ ಸಾಲದಲ್ಲಿ 43,000 ಕೋಟಿಯನ್ನು ಆಸ್ತಿ ಹಾಗೂ ಷೇರು ಮಾರಿ ಚುಕ್ತಾ ಮಾಡಲಾಗಿದೆ ಎಂದಿದ್ದಾರೆ. ವೃತ್ತಿಜೀವನದಲ್ಲಿ ಬ್ಯಾಂಕುಗಳಿಗೆ 60,000 ದಿಂದ 70,000 ಕೋಟಿ ಬಡ್ಡಿಯನ್ನೇ ಪಾವತಿಸಿದ್ದು, ಪ್ರಸ್ತುತ ಬಾಕಿ ಇರುವ ಎರಡು ಖಾತೆಗಳಿಗೂ ಪೂರ್ಣ ಆಸ್ತಿ ಭದ್ರತೆ ಲಭ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಧೀರೂಭಾಯಿ ತತ್ವ ಅವರಿಗೆ ಗೊತ್ತೇ ಇಲ್ಲ!..

ತಂದೆ ಧೀರೂಭಾಯಿ ಅಂಬಾನಿಯವರ ತತ್ವಗಳನ್ನು ಮುಕೇಶ್ ಅಂಬಾನಿ ಅಳವಡಿಸಿಕೊಂಡಿಲ್ಲ ಎಂದಿರುವ ಸುಭಾಷ್ ಚಂದ್ರ, ಕಳೆದುಕೊಳ್ಳಲು ಏನೂ ಇಲ್ಲದ ವ್ಯಕ್ತಿಯನ್ನು ಮುಗಿಸಲು ನೋಡಬೇಡಿ ಎಂದು ಎಚ್ಚರಿಸಿದ್ದಾರೆ. ಮನೋಜ್ ಮೋದಿ ಅವರಂತಹ ನಾಯಕರಿಗೆ ಅಪಪ್ರಚಾರ ನಿಲ್ಲಿಸಲು ತಿಳಿಸಬೇಕು, ಇಲ್ಲದಿದ್ದರೆ ತಾವು ಸುಮ್ಮನಿರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಶಿವಸೇನೆ ಸಂಸದರ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಸುಭಾಷ್ ಚಂದ್ರ, 2014ರಲ್ಲಿ ಜೀ ನ್ಯೂಸ್ ಪ್ರಧಾನಿ ಮೋದಿಯವರನ್ನು ಬೆಂಬಲಿಸಿತ್ತಾದರೂ, ಕಷ್ಟದ ಸಮಯದಲ್ಲಿ ಸರ್ಕಾರದಿಂದ ಯಾವುದೇ ನೆರವು ಪಡೆಯಲಿಲ್ಲ ಎಂದಿದ್ದಾರೆ. ಕೆಲವು ಸಂಸದರು ಕಾರ್ಪೊರೇಟ್ ಸಂಸ್ಥೆಗಳ ನಿರ್ದೇಶನದಂತೆ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದ ಅವರು, ಅಂಬಾನಿ ಇಂತಹ ಕೊಳಕು ಆಟಗಳನ್ನು ನಿಲ್ಲಿಸಲಿ ಎಂದು ಆಗ್ರಹಿಸಿದ್ದಾರೆ(ಏಜೆನ್ಸೀಸ್​).