RSS-BJP Praise| ಸಂಸದ ರಾಹುಲ್ ಗಾಂಧಿ ಮತ್ತು ದಿಗ್ವಿಜಯ್ ಸಿಂಗ್ ( ಚಿತ್ರ ಕೃಪೆ-ಎಕ್ಸ್)
ದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೂ ಮುನ್ನ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಂಘಟನಾತ್ಮಕ ಬಲವನ್ನು (RSS-BJP Praise) ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಬೆಂಬಲಿಸಿದ್ದ ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ ಸಿಂಗ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಸ್ಯ ದಾಟಿಯ ಮೂಲಕ ತಿವಿದಿದ್ದಾರೆ.
ದಿಗ್ವಿಜಯ ಸಿಂಗ್ ಹೇಳಿಕೆ ದೇಶ್ಯಾದ್ಯಂತ ರಾಜಕೀಯ ಬಿರುಗಾಳಿ ಎಬ್ಬಿಸಿದ್ದು, ಪಕ್ಷದಲ್ಲೂ ಕೂಡ ಅಸಮಾಧಾನದ ಹೊಗೆಯಾಡುವಂತೆ ಮಾಡಿದೆ. ಈ ವಿಷಯವಾಗಿ ಸಿಂಗ್ ಕಾಂಗ್ರೆಸ್ ಬಗೆಗಿನ ತಮ್ಮ ಬದ್ಧತೆಯನ್ನು ಸ್ಪಷ್ಟಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಸಿದ್ಧಾಂತದ ಪ್ರಬಲ ವಿರೋಧಿಯಾಗಿಯೇ ಉಳಿಯುತ್ತೇನೆ ಎಂದಿದ್ದಾರೆ.
ಪಕ್ಷದ ಸಂಸ್ಥಾಪನಾ ದಿನಾಚರಣೆಯಂದು ನಡೆದ ಕಾರ್ಯಕ್ರಮದಲ್ಲಿ ಸಂಸದ ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್ರನ್ನು ಉದ್ದೇಶಿಸಿ ನೀವು ಕಿಡಿಗೇಡಿತನ ಮಾಡಿದ್ದೀರಿ ಎಂದು ಹಾಸ್ಯಮಯವಾಗಿ ಟೀಕಿಸಿದರು.
ಏನಿದು ವಿವಾದ
ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಳೆಯ ಫೋಟೋವನ್ನು ಹಂಚಿಕೊಂಡಿರುವ ದಿಗ್ವಿಜಯ್ ಸಿಂಗ್, ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನಾ ಶಕ್ತಿಯನ್ನು ಶ್ಲಾಘಿಸಿದ್ದಾರೆ. ಈ ಬೆಳವಣಿಗೆಯನ್ನು ಅನೇಕರು ಕಾಂಗ್ರೆಸ್ ನಾಯಕತ್ವಕ್ಕೆ ನೀಡಿದ ಸಂದೇಶವೆಂದು ವ್ಯಾಖ್ಯಾನಿಸುತ್ತಿದ್ದಾರೆ. 1990 ರ ಸಮಯದಲ್ಲಿ ಮೋದಿ ಸಾಮಾನ್ಯ ಕಾರ್ಯಕರ್ತನಾಗಿದ್ದಾಗ ತೆಗೆದಿರುವ ಫೋಟೋವನ್ನು ಹಿರಿಯ ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದು, ಚಿತ್ರದಲ್ಲಿ, ಕುರ್ಚಿಯ ಮೇಲೆ ಕುಳಿತಿರುವ ಬಿಜೆಪಿ ಹಿರಿಯ ಎಲ್.ಕೆ. ಅಡ್ವಾಣಿ ಬಳಿ ನೆಲದ ಮೇಲೆ ಕುಳಿತಿರುವ ಮೋದಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಫೋಟೋವನ್ನು ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತೆಗೆಯಲಾಗಿದೆ.
ದಿಗ್ವಿಜಯ್ ಸಿಂಗ್ ಈ ಪೋಸ್ಟ್ ಹಂಚಿಕೊಂಡ ಕೆಲ ಗಂಟೆಗಳ ಬಳಿಕ ದೆಹಲಿಯಲ್ಲಿ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಮಾತನಾಡಿದ ಸಿಂಗ್, ನೆಲದ ಮೇಲೆ ಕುಳಿತುಕೊಳ್ಳುವ ತಳಮಟ್ಟದ ಕಾರ್ಯಕರ್ತರು ಬಿಜೆಪಿ-ಆರ್‌ಎಸ್‌ಎಸ್ ಪರಿಸರ ವ್ಯವಸ್ಥೆಯಲ್ಲಿ ಬೆಳೆದು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಬಹುದು ಎಂದು ಹೇಳಿದರು. ಸಿಂಗ್ ತಮ್ಮ ಪೋಸ್ಟ್ನಲ್ಲಿ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಜೈರಾಮ್ ರಮೇಶ್ ಅವರ ಅಧಿಕೃತ ಖಾತೆಗಳನ್ನು ಟ್ಯಾಗ್ ಮಾಡಿದ್ದಾರೆ.
ನಾನು ಈ ಚಿತ್ರವನ್ನು Quoraದಲ್ಲಿ ಕಂಡುಕೊಂಡೆ. ಇದು ತುಂಬಾ ಪ್ರಭಾವಶಾಲಿಯಾಗಿದೆ ಎಂದು ಸಿಂಗ್ ಹೇಳಿದರು. ಆರ್‌ಎಸ್‌ಎಸ್‌ನ ತಳಮಟ್ಟದ ಸ್ವಯಂಸೇವಕರು (ಕಾರ್ಯಕರ್ತರು) ಮತ್ತು ಜನಸಂಘ ಬಿಜೆಪಿಯ ಕಾರ್ಯಕರ್ತರು ನಾಯಕರ ಪಾದಗಳ ಮೇಲೆ ನೆಲದ ಮೇಲೆ ಕುಳಿತು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿಯಾಗುವ ರೀತಿಯಲ್ಲಿ. ಇದು ಸಂಘಟನೆಯ ಶಕ್ತಿ. ಜೈ ಸಿಯಾ ರಾಮ್ ಎಂದು ಬರೆದುಕೊಂಡಿದ್ದಾರೆ.
ಸ್ಪಷ್ಟಿಕರಣ
ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಪಷ್ಟಿಕರಣ ನೀಡಿರುವ ಕಾಂಗ್ರೆಸ್ನ ಹಿರಿಯ ನಾಯಕ, ನನ್ನ ಎಕ್ಸ್ ಪೋಸ್ಟ್ನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ನಾನು ಸಂಘಟನೆಯನ್ನು ಬೆಂಬಲಿಸುತ್ತೇನೆ. ಆರ್‌ಎಸ್‌ಎಸ್ ಮತ್ತು ಮೋದಿಜಿ ವಿರುದ್ಧ, ಸಂಘಟನೆಯನ್ನು ಬಲಪಡಿಸುವುದು ಮತ್ತು ಹೊಗಳುವುದು ಕೆಟ್ಟ ವಿಷಯವೇ ಎಂದು ಪ್ರಶ್ನಿಸಿದರು(ಏಜೆನ್ಸೀಸ್).