Rahul Gandhi | ಇಂಡಿಯಾ ಒಕ್ಕೂಟದ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಮಿತ್ರಪಕ್ಷಗಳ ನಾಯಕರು
ನವದೆಹಲಿ: ಜೂನ್ 8 ರಂದು ನಡೆದ ಇಂಡಿಯಾ (INDIA) ಮೈತ್ರಿಕೂಟದ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸೇರಿದಂತೆ ಮೈತ್ರಿಕೂಟದ ಇತರ ಪಾಲುದಾರರನ್ನು ಗೊಂದಲದಲ್ಲಿದ್ದಾರೆ ಎಂದು ಕರೆದಿದ್ದಾರೆ. ಸಮಾಜವಾದಿ ಪಕ್ಷ (SP), ತೃಣಮೂಲ ಕಾಂಗ್ರೆಸ್ (TMC) ಮತ್ತು ರಾಷ್ಟ್ರೀಯ ಜನತಾ ದಳ (RJD) ಪಕ್ಷಗಳು ತಾವು ಇದುವರೆಗೆ ಬಳಸುತ್ತಾ ಬಂದಿರುವ ಸಾಂಪ್ರದಾಯಿಕ ರಾಜಕೀಯ ತಂತ್ರಗಳು ಮುಂದೆಯೂ ಕೆಲಸ ಮಾಡುತ್ತವೆ ಎಂದು ನಂಬಿರುವುದು ಅವರ ಗೊಂದಲಕ್ಕೆ ಕಾರಣ ಎಂದು ರಾಹುಲ್ ಗಾಂಧಿ ತಿಳಿಸಿರುವುದಾಗಿ ವರದಿಯಾಗಿದೆ.
ದೇಶದ ಆಡಳಿತ ವ್ಯವಸ್ಥೆಯು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಮುಕ್ತ ಅವಕಾಶ ನೀಡಿದಾಗ ಮಾತ್ರ ಈ ಹಳೆಯ ತಂತ್ರಗಳು ಯಶಸ್ವಿಯಾಗುತ್ತಿದ್ದವು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯು ದೇಶದ ಕಾನೂನು ವ್ಯವಸ್ಥೆ, ಅಧಿಕಾರಶಾಹಿ, ಗುಪ್ತಚರ ಸಂಸ್ಥೆಗಳು ಮತ್ತು ಚುನಾವಣಾ ಆಯೋಗ ಸೇರಿದಂತೆ ಸರ್ಕಾರದ ಎಲ್ಲಾ ಪ್ರಮುಖ ಸಾಂಸ್ಥಿಕ ವ್ಯವಸ್ಥೆಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ ಎಂದು ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ. ಈ ಮೈತ್ರಿಕೂಟದಲ್ಲಿ ಒಂದು ರೀತಿಯ ಗೊಂದಲ ಇರುವುದಕ್ಕೆ ವಿಷಾದಿಸಿದ ಅವರು, ಬಿಜೆಪಿ ಎಲ್ಲವನ್ನೂ ನಿಯಂತ್ರಿಸುತ್ತಿರುವುದರಿಂದ ಹಳೆಯ ರಾಜಕೀಯ ಲೆಕ್ಕಾಚಾರ ಈಗ ಫಲ ನೀಡುತ್ತಿಲ್ಲ ಎಂದಿದ್ದಾರೆ.
ಟಿಎಂಸಿ ಪಕ್ಷದಲ್ಲಿ ತಮಗೆ ಅನೇಕ ಸ್ನೇಹಿತರಿದ್ದು, ತಾವು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಲಿದ್ದೇವೆ ಎಂಬ ಭ್ರಮೆಯಲ್ಲಿದ್ದ ಅವರಿಗೆ, ನೀವೆಲ್ಲ ಕನಸಿನ ಲೋಕದಲ್ಲಿದ್ದೀರಿ ಎಂದು ತಾವು ಮೊದಲೇ ಎಚ್ಚರಿಸಿದ್ದಾಗಿ ರಾಹುಲ್ ನೆನಪಿಸಿಕೊಂಡಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಹರಿಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಏನಾಯಿತು ಎಂಬುದನ್ನು ತಾವು ಕಣ್ಣಾರೆ ಕಂಡಿರುವುದಾಗಿ ಹೇಳಿದ ಅವರು, ಆದರೂ ಮೈತ್ರಿಕೂಟದ ಅನೇಕ ನಾಯಕರು ಇನ್ನು ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಷಕಂಠನಾಗಲು ಸಿದ್ಧ ಎಂದ ರಾಹುಲ್
ಕಾಂಗ್ರೆಸ್ ಪಕ್ಷವು ಕೇವಲ ರಾಜಕೀಯ ಮಾಡಲು ಇಲ್ಲ, ಅದು ಜನರ ಹಕ್ಕುಗಳಿಗಾಗಿ ಹೋರಾಡುವ ಒಂದು ಚಳವಳಿ, ಬಿಜೆಪಿಯವರು ಸರ್ಕಾರಿ ಸಂಸ್ಥೆಗಳನ್ನು ಎಷ್ಟು ಹತ್ತಿಕ್ಕುತ್ತಾರೋ, ಕಾಂಗ್ರೆಸ್ ಅಷ್ಟೇ ಜೋರಾಗಿ ಸಂವಿಧಾನದ ರಕ್ಷಣೆಗಾಗಿ ಹೋರಾಡಲಿದೆ, ನಮ್ಮ ಪಕ್ಷ ತನ್ನ ಮೇಲೆ ಬರುವ ಎಲ್ಲಾ ಟೀಕೆಗಳನ್ನು ವಿಷಕಂಠನಂತೆ ನುಂಗಲು ಸಿದ್ಧವಿದ್ದು, ಎಲ್ಲವನ್ನೂ ನಗುಮುಖದಿಂದಲೇ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ತಮಗೆ ಮೈತ್ರಿಕೂಟದ ಸ್ನೇಹಿತರ ಜೊತೆ ಜಗಳವಾಡುವ ಯಾವುದೇ ಆಸೆ ಇಲ್ಲ ಮತ್ತು ಬಿಹಾರ ಮಾಜಿ ಸಿಎಂ ನಿತೀಶ್ ಕುಮಾರ್ ಅವರು ಮೈತ್ರಿಕೂಟ ತೊರೆದಿದ್ದಕ್ಕೆ ಕಾಂಗ್ರೆಸ್ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಅಂದ್ರೆ ಪ್ರತಿರೋಧದ ಚಳವಳಿ
2024 ರ ಚುನಾವಣೆಯಲ್ಲಿ ನಾವು ಸೋತಿಲ್ಲ, ಗೆದ್ದಿದ್ದೇವೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದಿರುವ ರಾಹುಲ್, ಭವಿಷ್ಯದಲ್ಲಿ ಆರ್‌ಎಸ್ಎಸ್ ಮತ್ತು ಬಿಜೆಪಿ ದೇಶದ ವ್ಯವಸ್ಥೆಯ ಮೇಲಿನ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲಿದ್ದು, ಈಗ ಕೆಲಸ ಮಾಡುತ್ತಿರುವ ಕೆಲವು ರಾಜಕೀಯ ತಂತ್ರಗಳು ಕೂಡ ಮುಂದೆ ನಿಂತುಹೋಗಲಿವೆ ಎಂದು ಅವರು ಎಚ್ಚರಿಸಿದ್ದಾರೆ. ನೂರು ವರ್ಷಗಳ ಹಿಂದೆ, ಅಂದರೆ 1927 ಕ್ಕಿಂತ ಮುನ್ನ ಕಾಂಗ್ರೆಸ್ ಕೇವಲ ರಾಜಕೀಯ ಸಂಘಟನೆಯಾಗಿತ್ತು. ಆದರೆ ಗಾಂಧೀಜಿಯವರು ಸ್ವಾತಂತ್ರ್ಯದ ಕರೆ ನೀಡಿದ ದಿನದಿಂದ ಅದು ಪ್ರತಿರೋಧದ ಚಳವಳಿಯಾಗಿ ರೂಪಾಂತರಗೊಂಡಿತು ಎಂದು ಇತಿಹಾಸವನ್ನು ನೆನಪಿಸಿದ್ದಾರೆ.
ಮುಂದಿನ ಚುನಾವಣೆಯನ್ನು ಗೆಲ್ಲುವುದೇ ದೊಡ್ಡ ಸವಾಲು ಎಂದು ಮೈತ್ರಿಕೂಟದ ನಾಯಕರು ಭಾವಿಸುತ್ತಿದ್ದಾರೆ, ಆದರೆ ದೇಶದ ಜನರಲ್ಲಿ ಸದ್ಯ ಇರುವ ಆಕ್ರೋಶವನ್ನು ನೋಡಿದರೆ ಮುಂದಿನ ಚುನಾವಣೆ ಈಗಾಗಲೇ ಮುಗಿದುಹೋಗಿದೆ ಮತ್ತು ನಾವು ಗೆದ್ದಾಗಿದೆ ಎಂದು ರಾಹುಲ್ ಭವಿಷ್ಯ ನುಡಿದಿದ್ದಾರೆ. ನಿಜವಾದ ಸಮಸ್ಯೆ ಇರುವುದು ಆರ್‌ಎಸ್‌ಎಸ್ ದೇಶದ ಎಲ್ಲಾ ಸಾಂಸ್ಥಿಕ ವ್ಯವಸ್ಥೆಗಳನ್ನು ವಶಪಡಿಸಿಕೊಂಡಿರುವುದರಲ್ಲಿ ಅಡಗಿದೆ. ಹೀಗಾಗಿ ಮುಂದೆ ನಮಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎದುರಿಸಲು ಸಿಗುವುದೇ ಕಷ್ಟ ಎಂಬುದು ಅಸಲಿ ಸವಾಲಾಗಿದೆ ಎಂದಿದ್ದಾರೆ.
ಪಿಣರಾಯಿ ವಿಜಯನ್ ಜೊತೆ ಹಸ್ತಲಾಘವ ಸಾಧ್ಯವಿಲ್ಲ!
ವಿರೋಧ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಕೇವಲ ಬಿಜೆಪಿಯ ಅಪಪ್ರಚಾರವಾಗಿದ್ದು, ತಮಿಳುನಾಡಿನ ಡಿಎಂಕೆ ಸೇರಿದಂತೆ ಇಡೀ ಮೈತ್ರಿಕೂಟವು ಭಾರತದ ಅಸ್ಮಿತೆಯನ್ನು ರಕ್ಷಿಸಲು ಒಂದಾಗಿ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ರಾಜಕೀಯ ಹೋರಾಟ ಮುಂದುವರಿದಿರುವುದರಿಂದ ಅವರ ಜೊತೆ ತಾವೀಗ ಹಸ್ತಲಾಘವ ಮಾಡಲು ಸಾಧ್ಯವಿಲ್ಲ ಎಂದ ಅವರು, ಪರಿಸ್ಥಿತಿಗೆ ತಕ್ಕಂತೆ ನಾವು ನಮ್ಯತೆಯನ್ನು ಹೊಂದಿರಬೇಕು ಮತ್ತು ವಿರೋಧ ಪಕ್ಷಗಳು ದುರ್ಬಲವಾಗಿವೆ ಎಂದು ಬಿಂಬಿಸಲು ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ(ಏಜೆನ್ಸೀಸ್).