ಸಾಂದರ್ಭಿಕ ಚಿತ್ರ 
ದೇಶ

ಸಂಕ್ರಾಂತಿಗೆ ಎಳ್ಳು-ಬೆಲ್ಲದ ಜೊತೆ ರಜೆಯ ಸಿಹಿ ನೀಡಿದ ಯೋಗಿ ಸರ್ಕಾರ! Yogi government

ಲಖನೌ: ಉತ್ತರ ಪ್ರದೇಶದಲ್ಲಿ ಮಕರ ಸಂಕ್ರಾಂತಿ ಹಬ್ಬದಂದು ಸಾರ್ವಜನಿಕ ರಜೆ ಘೋಷಿಸುವ ಮೂಲಕ ರಾಜ್ಯ ಸರ್ಕಾರ (Yogi government) ಜನತೆಗೆ ಹಬ್ಬದ ಉಡುಗೊರೆ ನೀಡಿದೆ.
ಸಿಎಂ ಯೋಗಿ ಆದಿತ್ಯನಾಥ್​ ಸೂಚನೆಯ ಮೇರೆಗೆ ಆದೇಶ ಹೊರಡಿಸಲಾಗಿದ್ದು, ಇದು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಅನ್ವಯವಾಗುತ್ತದೆ.

ಪವಿತ್ರ ಸ್ನಾನಕ್ಕೆ ಹರಿದು ಬರಲಿದೆ ಭಕ್ತಸಾಗರ!

ಮಕರ ಸಂಕ್ರಾಂತಿ ಹಿನ್ನಲೆ, ಪ್ರಯಾಗ್‌ರಾಜ್, ಕಾನ್ಪುರ, ವಾರಣಾಸಿ, ಉನ್ನಾವ್, ಮೀರತ್ ಮತ್ತು ಬಿಜ್ನೋರ್ ಸೇರಿದಂತೆ ಉತ್ತರ ಪ್ರದೇಶದಾದ್ಯಂತ ಪ್ರಮುಖ ಗಂಗಾ ಘಾಟ್‌ಗಳಲ್ಲಿ ಭಕ್ತರ ದಂಡು ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಯಾತ್ರಿಕರು ಗಂಗಾ ಮತ್ತು ಸರಯು ಮುಂತಾದ ನದಿಗಳಲ್ಲಿ ಸ್ನಾನ ಮಾಡಿ ದೇಣಿಗೆ ನೀಡುತ್ತಾರೆ. ಹಾಗಾಗಿ ಅವರುಗಳಿಗೆ ಅನುಕೂಲವಾಗುವಂತೆ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಮಕರ ಸಂಕ್ರಾಂತಿ 2026

ಮಕರ ಸಂಕ್ರಾಂತಿ ಭಾರತದಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುವ ಪ್ರಮುಖ ಸುಗ್ಗಿ ಹಬ್ಬವಾಗಿದೆ. ಇದನ್ನು ಖಿಚಡಿ ಎಂದು ಕರೆಯಲಾಗುತ್ತದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಕಾಲವನ್ನೇ 'ಮಕರ ಸಂಕ್ರಾಂತಿ' ಎಂದು ಹೇಳಲಾಗುತ್ತದೆ. ಈ ದಿನದಂದು ಸೂರ್ಯನ ಪಥವು ಉತ್ತರಕ್ಕೆ ಚಲಿಸುವುದರಿಂದ ಇದನ್ನು ಉತ್ತರಾಯಣ ಪುಣ್ಯಕಾಲದ ಆರಂಭ ಎಂದು ಕರೆಯಲಾಗುತ್ತದೆ.

ವಿವಿಧ ಪ್ರದೇಶದಲ್ಲಿ ಈ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆ?

ಕರ್ನಾಟಕದಲ್ಲಿ ಈ ಹಬ್ಬವು ರೈತರ ಪಾಲಿಗೆ ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಈ ಸಮಯದಲ್ಲಿ ಪ್ರತಿಯೊಬ್ಬರು ಎಳ್ಳು- ಬೆಲ್ಲವನ್ನು ಪರಸ್ಪರ ಹಂಚಿಕೊಳ್ಳುವುದರ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ರೈತರು ತಮ್ಮ ಜಾನುವಾರಗಳಿಗೆ ಸಿಂಗಾರ ಮಾಡಿ, ಕಿಚ್ಚು ಹಾಯಿಸುತ್ತಾರೆ. ಹಾಗೆಯೇ ತಾವು ಬೆಳೆದ ಹೊಸ ಅಕ್ಕಿಯಿಂದ ಪೊಂಗಲ್​ ಸಿದ್ಧ ಪಡಿಸಿ ಮನೆಮಂದಿ ಕೂತು ಊಟ ಮಾಡುತ್ತಾರೆ.
ಆದಾಗ್ಯೂ, ಉತ್ತರ ಪ್ರದೇಶದಲ್ಲಿ ಈ ಹಬ್ಬದಂದು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ಗಾಳಿಪಟ ಹಾರಿಸುತ್ತಾರೆ. ತಮಿಳುನಾಡಿನ ಜನರು ಈ ಹಬ್ಬವನ್ನು ಪೊಂಗಲ್​ ಎಂದು 4 ದಿನಗಳ ಕಾಲ ಆಚರಿಸುತ್ತಾರೆ. ಪಂಜಾಬ್​ನಲ್ಲಿ ಲೋಹ್ರಿ ಎಂಬ ಹೆಸರಿನಲ್ಲಿ ಅಗ್ನಿ ಕುಂಡದ ಸುತ್ತ ನೃತ್ಯ ಮಾಡಿ ಹಬ್ಬವನ್ನು ಆಚರಿಸುತ್ತಾರೆ (ಏಜೆನ್ಸೀಸ್​).