Yoga  
ದೇಶ

ಮಾನವ ಕುಲದ ಅಮೂಲ್ಯ ಸಂಪತ್ತು ಯೋಗ

ಬಾಬುಪ್ರಸಾದ್​ ಮೋಡಿಸ್​
ಪರಿಚಯದವರೊಬ್ಬರು ನನ್ನೊಂದಿಗೆ ಮಾತನಾಡುತ್ತಿದ್ದಾಗ ಅವರು ಮನೆ ಕಟ್ಟಿಸುತ್ತಿದ್ದ ವಿಚಾರವನ್ನು ಹಂಚಿಕೊಂಡರು. 1200 ಚದರ ಅಡಿಯ ಮನೆಯಲ್ಲಿ ಹಾಲ್, ಅಡುಗೆ ಕೋಣೆ, ದೈವ ಮತ್ತು ದೇವರ ಕೋಣೆ ಮತ್ತು ಎರಡು ಕೋಣೆಗಳ ಅಟ್ಯಾಚ್​ಡ್ ಬಾತ್​ರೂಂ ಎಂದೆಲ್ಲ ವಿವರಿಸಿದರು. ಮಾತನ್ನು ಮುಂದುವರಿಸುತ್ತ ಮನೆಗೆ ಮುಖ್ಯದ್ವಾರ ಮತ್ತು ಹಿಂದಿನ ದ್ವಾರ ಹೊರತುಪಡಿಸಿ ಯಾವುದಕ್ಕೂ ಹೊಸ್ತಿಲು ಬೇಡ, ಬಾತ್​ರೂಂಗಳಲ್ಲಿ ವೆಸ್ಟರ್ನ್ ಕಮೋಡ್​ಗಳನ್ನು ಹಾಕಿ, ನೆಲಕ್ಕೆ ನುಣುಪಾದ ಟೈಲ್ಸ್ ಅಥವಾ ಗ್ರಾನೈಟ್​ನ ಬದಲು ಗ್ರಿಪ್ ಇರುವಂತಹ ನೆಲಹಾಸು ಹಾಕಿದರೆ ಒಳ್ಳೆಯದು. ಈಗ ನಮಗೆ ಶಕ್ತಿ ಇದೆ. ಓಡಾಡುತ್ತೇವೆ. ವಯಸ್ಸಾದ ಮೇಲೆ ಹೊಸ್ತಿಲು ದಾಟಿ ನಡೆಯಲು, ಟಾಯ್ಲೆಟ್​ಗೆ ಹೋಗಲು ಸಹಜವಾಗಿ ಕಷ್ಟವಾಗುತ್ತದೆ. ಅದಕ್ಕಾಗಿ ಮನೆ ಕಟ್ಟುವಾಗಲೇ ಮುಂದಾಲೋಚನೆ ಮಾಡಿಕೊಂಡಲ್ಲಿ ಆಮೇಲೆ ಹೀಗೆ ಮಾಡಬೇಕಿತ್ತು, ಹಾಗೆ ಮಾಡಬಹುದಿತ್ತು ಎಂದು ಕೊರಗಬೇಕಿಲ್ಲ ಎಂದು ಇಂಜಿನಿಯರ್ ನೀಡಿದ ಸಲಹೆಯನ್ನು ತಿಳಿಸಿದರು.

ಅವರ ಮಾತು ಮೆಚ್ಚುವಂಥದ್ದು. ಯಾವುದೇ ಕೆಲಸ ಕಾರ್ಯಗಳಿರಲಿ ನಾವು ಸಾಕಷ್ಟು ಮುಂದಾಲೋಚನೆ ಮಾಡಿ, ಅಗತ್ಯ ಸಲಹೆ ಸೂಚನೆ ಪಡೆದು ಮುಂದುವರಿಯುವುದು ಸೂಕ್ತ. ನಾನು ಕೂಡ ಯೋಚಿಸಿದೆ, ಬದುಕಿ ಬಾಳುವ ಮನೆಯ ವಾಸ್ತು, ವಿನ್ಯಾಸ, ಸೌಕರ್ಯಗಳ ಬಗ್ಗೆ ಸಾಕಷ್ಟು ಯೋಚನೆ ಮಾಡುವ ನಾವು, ಬಾಲ್ಯದಿಂದ ಮುಪ್ಪಿನವರೆಗೂ ಉತ್ತಮ ಬಾಳನ್ನು ಹೊಂದಲು ಕಾರಣವಾದ ಈ ದೇಹವನ್ನು ಕೂಡ ಅಷ್ಟೇ ಜತನದಿಂದ ಕಾಪಾಡಿಕೊಳ್ಳುವುದು ಮುಖ್ಯವೆನಿಸಿತು. ಅದೆಷ್ಟೋ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ, ಬಾಯಿಗೆ ರುಚಿ ಎನಿಸಿದನ್ನು ತಿನ್ನುತ್ತಾರೆ, ನಿದ್ದೆಗೆಡುತ್ತಾರೆ, ಹೊತ್ತು-ಹೊತ್ತಿಗೆ ತಿನ್ನದೆ, ಉಣ್ಣದೆ, ವಿಶ್ರಾಂತಿ ಪಡೆಯದೆ, ಒಂದು ದಿನ ಅನಾರೋಗ್ಯ ಬೀಳುತ್ತಾರೆ. ದೀರ್ಘಕಾಲದ ಇಂತಹ ದಿನಚರಿಯಿಂದ ಗಂಭೀರ ಆರೋಗ್ಯ ಸಮಸ್ಯೆಗಳೂ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.
ನನಗೆ ಬಾಲ್ಯದಿಂದಲೂ ಭಾರತದ ವೈದ್ಯ ಪದ್ಧತಿ, ಯೋಗಗಳ ಬಗ್ಗೆ ವಿಶೇಷ ಆಸಕ್ತಿ. ಕ್ಷೇತ್ರದ ಧರ್ವಧಿಕಾರಿಗಳಾಗಿದ್ದ ದಿ| ಮಂಜಯ್ಯ ಹೆಗ್ಗಡೆಯವರಿಗೆ ಆಯುರ್ವೆದ ವೈದ್ಯ ಪದ್ಧತಿಯ ಬಗ್ಗೆ ಜ್ಞಾನವಿತ್ತು, ತಾವೇ ಸ್ವತಃ ಕೆಲವೊಂದು ಔಷಧ ನೀಡುತ್ತಿದ್ದರು. ಜೊತೆಗೆ ಗುರುಕುಲ ಪದ್ಧತಿಯ ಬಗ್ಗೆ ಅವರಿಗೆ ಅಪಾರ ಒಲವು ಇತ್ತು. ನನಗೂ ಅವುಗಳ ಬಗ್ಗೆ ಆಸಕ್ತಿಯಿದ್ದರೂ ಏನು? ಹೇಗೆ? ಎಂಬ ಸ್ಪಷ್ಟ ಅರಿವು ಉಂಟಾಗಿರಲಿಲ್ಲ. ಒಮ್ಮೆ 1983ರಲ್ಲಿ ಸ್ವಿಜ್ಜರ್​ಲ್ಯಾಂಡ್​ಗೆ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಅಲ್ಲಿದ್ದ ಭಾರತೀಯ ಮೂಲದ ಮಹರ್ಷಿ ಮಹೇಶ ಯೋಗಿಗಳ ಧ್ಯಾನಕೇಂದ್ರಕ್ಕೆ ಭೇಟಿ ನೀಡಿದ್ದೆ. ಅವರು ವಿದೇಶಿ ನೆಲದಲ್ಲಿ ಭಾರತದ ಯೋಗ ಸಾಧನೆಯನ್ನು ಪ್ರಸಾರ ಮಾಡಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದೆ. ಆ ಬಳಿಕ ಅವರ ವಿದೇಶಿ ಶಿಷ್ಯರಿಬ್ಬರು ಶ್ರೀಕ್ಷೇತ್ರಕ್ಕೆ ಬಂದು ಧ್ಯಾನ ಯೋಗ ಶಿಬಿರವನ್ನೂ ಏರ್ಪಡಿಸಿದ್ದರು. ಹಾಗೆಯೇ ಒಮ್ಮೆ ಬೆಂಗಳೂರಿನಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಭಾರತೀಯ ಚಿಕಿತ್ಸಾ ಪದ್ಧತಿಗಳನ್ನು ಕಂಡಿದ್ದೆ. ಬೆಂಗಳೂರಿನ ವಿವೇಕಾನಂದ ಕೇಂದ್ರದ ಯೋಗ ಶಿಕ್ಷಣ ಶಿಬಿರ, ಯೋಗ ಚಿಕಿತ್ಸಾ ಶಿಬಿರಗಳನ್ನೆಲ್ಲ ಕಂಡಾಗ, ಈ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಳು ಜನಸಾಮಾನ್ಯರಿಗೂ ದೊರೆಯಬೇಕು, ಬದುಕಿನಲ್ಲಿ ಅಳವಡಿಕೆಯಾಗಬೇಕು ಎಂಬ ಆಕಾಂಕ್ಷೆ ಮನದಲ್ಲಿ ಮೂಡಿತು. ಈ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ ಬಳಿಕ ನಾವು 1987ರಲ್ಲಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಾಂತಿವನ ಟ್ರಸ್ಟ್​ನ ಮೂಲಕ ಪ್ರಕೃತಿ ಚಿಕಿತ್ಸೆಯನ್ನು ಆರಂಭ ಮಾಡಿದೆವು.
ಶಾಂತಿವನದ ಪ್ರಕೃತಿ ಚಿಕಿತ್ಸಾಲಯದಲ್ಲಿ ಯಾವುದೇ ಕಾಯಿಲೆಗಳಿಗೆ ಔಷಧಗಳನ್ನು ನೀಡುವುದಿಲ್ಲ, ಮಾತ್ರೆ, ಟಾನಿಕ್, ಇಂಜೆಕ್ಷನ್ ನೀಡಲಾಗುವುದಿಲ್ಲ. ಬದಲಾಗಿ ಪಂಚಭೂತಗಳಿಂದ ಸೃಷ್ಟಿಯಾಗಿರುವ ಈ ಶರೀರಕ್ಕೆ ಪಂಚ ಭೂತಗಳಾದ ಭೂಮಿ (ಮಣ್ಣು), ಬೆಂಕಿ, ಆಕಾಶ, ನೀರು, ಗಾಳಿ ಇವನ್ನು ಬಳಸಿಕೊಂಡು ರೋಗವನ್ನು ದೂರಮಾಡುವ ನಿಸರ್ಗ ಚಿಕಿತ್ಸ ಕ್ರಮವಾಗಿದೆ. ಈ ನಿರೌಷಧ ಪದ್ಧತಿಯ ಜೊತೆಗೆ ‘ಯೋಗ’ವನ್ನು ಬಳಸಿಕೊಂಡು ಶರೀರ, ಮನಸ್ಸುಗಳ ಸಮತೋಲನವನ್ನು ಸಾಧಿಸುವ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುತ್ತಿದೆ.
ಇತ್ತೀಚೆಗೆ ಹೃದಯಾಘಾತದಿಂದ ನಿಧನವಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಒಂದನೇ ತರಗತಿಯ ಮಗುವೊಂದು ಹೃದಯಾಘಾತದಿಂದ ಮೃತಪಟ್ಟಿರುವ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದೆ. ಸಣ್ಣ-ಪುಟ್ಟ ಜ್ವರ, ಶೀತ ಎಂದು ಆಸ್ಪತ್ರೆಗೆ ದಾಖಲಾದವರೂ ಅಚಾನಕ್ ಆಗಿ ಮೃತರಾಗುತ್ತಿರುವುದು ಆತಂಕ ಉಂಟುಮಾಡುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಹಾರ ಕ್ರಮಗಳ ಬಗ್ಗೆ ವೈದ್ಯಕೀಯ ಮತ್ತು ವಿಜ್ಞಾನ ಕ್ಷೇತ್ರವು ಹೆಚ್ಚಿನ ಅಧ್ಯಯನ ಮಾಡಬೇಕಿದೆ. ನಾವು ತಿನ್ನುವ ಆಹಾರಪದಾರ್ಥಗಳೂ ಪರಿಸರ ಮಾಲಿನ್ಯದ ಪರಿಣಾಮದಿಂದ ಕಲುಷಿತವಾಗುತ್ತಿವೆ. ರಾಸಾಯನಿಕಯುಕ್ತ ಹಣ್ಣು, ತರಕಾರಿ, ಬೇಳೆ-ಕಾಳುಗಳನ್ನು ತಿನ್ನುವುದರಿಂದ ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ.
ಆದರೆ ನಮ್ಮ ಹಿರಿಯರೆಲ್ಲ ಈಗಿನಂತೆ ಯಾವುದೇ ಕಾಯಿಲೆ, ರೋಗಗಳಿಂದ ಬಳಲಿದವರಲ್ಲ. ವಯಸ್ಸು ತೊಂಬತ್ತಾದರೂ ಗಟ್ಟಿಮುಟ್ಟಾಗಿರುತ್ತಿದ್ದರು. ಈಗ ಅಷ್ಟು ವಯಸ್ಸಿನವರೆಗೆ ಬದುಕುವುದೇ ಕಷ್ಟ. ಆದರೆ ನಮ್ಮದೇ ನೆಲದ ಯೋಗ ಜೀವನ ವಿಧಾನವನ್ನು ಅಳವಡಿಸಿಕೊಂಡರೆ ಆರೋಗ್ಯಯುತವಾಗಿ ನೆಮ್ಮದಿಯ ಜೀವನ ನಡೆಸಲು ಖಂಡಿತ ಸಾಧ್ಯವಿದೆ. ಯೋಗದ ಮಹತ್ವವನ್ನು ಅರಿತ ಅನೇಕ ವಿದೇಶಿಯರು ಭಾರತಕ್ಕೆ ಬಂದು ಯೋಗಾಭ್ಯಾಸಗಳನ್ನು ಕಲಿಯುತ್ತಿದ್ದಾರೆ. 80ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯೋಗ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಎಸ್​ಡಿಎಂ ಯೋಗ ಮತ್ತು ವಿಜ್ಞಾನ ಕಾಲೇಜ್​ಗಳಲ್ಲಿ ಕಲಿತ ವಿದ್ಯಾರ್ಥಿಗಳು 35ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಗವು ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಹೊಂದುತ್ತಿರುವುದರ ಜೊತೆಗೆ ಜನರ ಜೀವನ ವಿಧಾನದಲ್ಲಿ ಅಳವಡಿಕೆಯಾಗುತ್ತಿರುವುದು ಸಂತಸದ ಸಂಗತಿ.
ವಿಶ್ವಸಂಸ್ಥೆಯೂ ಭಾರತ ಮೂಲಕ ಯೋಗಕ್ಕೆ ಮಾನ್ಯತೆ ನೀಡಿದ್ದು, ವಿಶ್ವದ ಅನೇಕ ರಾಷ್ಟ್ರಗಳು ಯೋಗದ ಮೂಲಕ ಹೊಸ ಜೀವನ ವಿಧಾನವನ್ನು ಅನುಸರಿಸುತ್ತಿದ್ದಾರೆ. ಭಾರತ ಮೂಲದ ಅದೆಷ್ಟೋ ಯೋಗ ಶಿಕ್ಷಕರು ದೇಶ-ವಿದೇಶಗಳಲ್ಲಿ ತರಬೇತಿ ನೀಡುತ್ತಿದ್ದು, (ಆನ್​ಲೈನ್ ಮೂಲಕವೂ ಇದೆ) ಯೋಗದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ. ಅನೇಕರು ತೆಳ್ಳಗಾಗಲು, ಫಿಟ್ ಫೈನ್ ಆಗಿ ಕಾಣಲು ಯೋಗ ಮಾಡುವುದು ಉತ್ತಮ ಎಂಬ ಭಾವನೆ ಹೊಂದಿದ್ದಾರೆ. ಆದರೆ ಯೋಗವು ಕೇವಲ ದೈಹಿಕ ವ್ಯಾಯಾಮದಂತೆ ಅಲ್ಲ. ಅದು ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಮನ್ವಯ ಸಾಧಿಸುವ ಜೀವನ ಪದ್ಧತಿ. ದೈಹಿಕ ಆರೋಗ್ಯ ವೃದ್ಧಿಸುವುದರ ಜೊತೆಗೆ ಮಾನಸಿಕ ಶಾಂತಿ, ಸ್ಥಿರತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೂ ಪೂರಕವಾಗಿದೆ. ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ವ್ಯಕ್ತಿಯು ತನ್ನ ಅಂತರಂಗದ ಶಕ್ತಿಯನ್ನು ಅರಿತುಕೊಂಡು, ಒತ್ತಡಮುಕ್ತ ಹಾಗೂ ಸಮತೋಲನಯುತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಅನೇಕ ಜನರಿಗೆ ಸರಿಯಾದ ಮಾಹಿತಿಯಿಲ್ಲ. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್(ರಿ)ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಅಡಿಯಲ್ಲಿ ಯೋಗ ಶಿಕ್ಷಣ ಪಡೆದ ಯೋಗ ಶಿಕ್ಷಕರ ಸಹಕಾರದಲ್ಲಿ ಶಾಲಾ-ಕಾಲೇಜ್​ಗಳ ಅಕ್ಟೋಬರ್ ರಜಾ ದಿನಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಯಾವುದೇ ಊರಿನ ಸಂಘ ಸಂಸ್ಥೆಗಳಾಗಲೀ, ಊರಿನ ಆಸಕ್ತರಾಗಲೀ ಯೋಗಾಸಕ್ತರನ್ನು ಕೂಡಿಸಿ ಕಲಿಯಲು ಹಂಬಲ ತೋರಿಸಿದರೆ ‘ಸಂಚಾರಿ ಯೋಗ ಘಟಕ’ದ ಮೂಲಕ ಯೋಗವನ್ನು ಕಲಿಸಿಕೊಡುವ ಕಾರ್ಯ ಮಾಡಲಾಗುತ್ತದೆ. ಈ ರೀತಿ ಹಲವಾರು ಊರಿನ ಸಂಘ ಸಂಸ್ಥೆಗಳು ಈವರೆಗೆ ಹಮ್ಮಿಕೊಂಡ ಶಿಬಿರಗಳ ಸಂಖ್ಯೆ ಸಾವಿರಾರು. ಯೋಗ ತರಬೇತಿ ಪಡೆದವರ ಸಂಖ್ಯೆ ಸಹಸ್ರಾರು. ಹೀಗೆ ಯೋಗ ಶಿಕ್ಷಣ ಪಡೆದವರು ಶ್ರೀ ಗುರು ಯೋಗ ಸಂಘ ಎಂಬ ಸಂಘಟನೆಯ ಮೂಲಕ ಶಾಲಾ-ಕಾಲೇಜ್​ಗಳ ವಿದ್ಯಾರ್ಥಿಗಳಲ್ಲಿ ಯೋಗದ ಬಗ್ಗೆ ಆಸಕ್ತಿಯನ್ನು ಮೂಡಿಸುವಲ್ಲಿ ನಿರತರಾಗಿದ್ದಾರೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಬೇಕು.
ಉತ್ತಮ ಮನೆ ಕಟ್ಟುವಾಗ ಭವಿಷ್ಯದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುವಂತೆ, ನಮ್ಮ ಜೀವನ ಮತ್ತು ಆರೋಗ್ಯದ ಬಗ್ಗೆಯೂ ಮೊದಲೇ ಯೋಚಿಸುವುದು ಅತ್ಯಗತ್ಯ. ಆರೋಗ್ಯವಾಗಿರುವುದು ಎಂದರೆ ರೋಗ ಇಲ್ಲದಿರುವುದು ಎಂಬುದು ಮಾತ್ರ ಅಲ್ಲ. ಅದು ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಮತೋಲನ ಹೊಂದುವುದು. ಈ ಸಮತೋಲನವನ್ನು ಸಾಧಿಸಲು ಯೋಗವು ಪರಿಣಾಮಕಾರಿ ಹಾಗೂ ಸುಲಭವಾಗಿದ್ದು ಎಲ್ಲರೂ ಬದುಕಿನಲ್ಲಿ ಅಳವಡಿಕೊಳ್ಳಬಹುದಾಗಿದೆ.
ಇಂದಿನ ಆಧುನಿಕ-ತಂತ್ರಜ್ಞಾನ ಯುಗದಲ್ಲಿ ಜನರು ಮೊಬೈಲ್ ಫೋನ್, ಕಂಪ್ಯೂಟರ್ ಹಾಗೂ ಯಾಂತ್ರಿಕ ಜೀವನಕ್ಕೆ ಹೆಚ್ಚು ಒಗ್ಗಿಕೊಂಡಿರುವುದರಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಇದರ ಪರಿಣಾಮವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ದಿನನಿತ್ಯ ಕನಿಷ್ಠ ಸ್ವಲ್ಪ ಸಮಯವನ್ನು ಯೋಗ, ಪ್ರಾಣಾಯಾಮ ಮತ್ತು ಧ್ಯಾನಕ್ಕಾಗಿ ಮೀಸಲಿಡುವುದು ಅವಶ್ಯಕವಾಗಿದೆ. ಇದರಿಂದ ದೇಹಕ್ಕೆ ಚೈತನ್ಯ, ಮನಸ್ಸಿಗೆ ನೆಮ್ಮದಿ ಹಾಗೂ ಬದುಕಿಗೆ ಹೊಸ ಉತ್ಸಾಹ ದೊರೆಯುತ್ತದೆ.
ಯೋಗವು ಯಾವುದೇ ಜಾತಿ, ಧರ್ಮ, ಭಾಷೆ ಅಥವಾ ದೇಶದ ಮಿತಿಯಲ್ಲಿರುವ ವಿದ್ಯೆಯಲ್ಲ. ಅದು ಮಾನವಕುಲದ ಅಮೂಲ್ಯ ಸಂಪತ್ತು. ಅದು ಆರೋಗ್ಯಕರ ಮತ್ತು ಸಂತೋಷಕರ ಬದುಕಿಗೆ ಮಾರ್ಗದರ್ಶಿ. ಇಂದು ವಿಶ್ವದಾದ್ಯಂತ ಯೋಗದ ಬಗ್ಗೆ ಪ್ರಚಾರವಿದ್ದರೂ, ಭಾರತದಲ್ಲಿ ಅದಕ್ಕೆ ಇನ್ನೂ ಹೆಚ್ಚಿನ ಪ್ರಾಧಾನ್ಯ ದೊರೆಯಬೇಕಿದೆ. ಜನಸಾಮಾನ್ಯರಿಗೂ ತಲುಪಬೇಕು. ಹಳ್ಳಿ-ಹಳ್ಳಿಗಳಲ್ಲಿ ಯೋಗದ ಪ್ರಚಾರವಾಗಬೇಕು. ಅಬಾಲವೃದ್ಧರಾದಿಯಾಗಿ ಎಲ್ಲರೂ ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡರೆ, ಆರೋಗ್ಯವಂತ ವ್ಯಕ್ತಿಗಳು, ಸದೃಢ ಕುಟುಂಬಗಳು ಹಾಗೂ ಸುಸ್ಥಿರ ಸಮಾಜ ತನ್ನಿಂದ ತಾನೇ ನಿರ್ವಣವಾಗುವುದು.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)