India win | ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇಯ ಏಕದಿನ ಪಂದ್ಯದಲ್ಲಿ ಭಾರತ(India win) 9 ವಿಕೆಟ್ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ರಿಂದ ಗೆದ್ದುಕೊಂಡಿದೆ.
ಹರಿಣಗಳು ನೀಡಿದ 271 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಅಮೋಘ 155 ರನ್ಗಳ ಜತೆಯಾಟ ಆಡಿತು. ಯುವ ಆಟಗಾರ ಜೈಸ್ವಾಲ್ 121 ಎಸೆತಗಳಲ್ಲಿ 116ರನ್ ಸಿಡಿಸುವ ಮೂಲಕ ತಮ್ಮ ಮೊದಲ ಏಕದಿನ ಶತಕ ಬಾರಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಕಿಂಗ್ ಕೊಹ್ಲಿ ತಮ್ಮ 45 ಎಸೆತಗಳಲ್ಲಿ 65 ರನ್ ಗಳಿಸುವ ಮೂಲಕ 76ನೇ ಏಕದಿನ ಅರ್ಧಶತಕ ಪೂರೈಸಿದ್ದಾರೆ. ಇದಕ್ಕೆ ಮೊದಲು ಮಾಜಿ ನಾಯಕ ರೋಹಿತ್ 73 ಬಾಲ್ಗಳಲ್ಲಿ 75 ರನ್ಗಳಿಸಿ ಕೇಶವ ಮಹಾರಾಜ್ ವಿಕೆಟ್ ಒಪ್ಪಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಬಂದ ಹರಿಣಗಳ ಆರಂಭಿಕ ಆಟಗಾರ ರಯಾನ್ ರಿಕೆಲ್ಟನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ನಂತರ ಜತೆಯಾದ ನಾಯಕ ಟೆಂಬಾ ಬವುಮ ಮತ್ತು ಆಫ್ರಿಕಾ ಸ್ಟಾರ್ ಓಪನರ್ ಕ್ವಿಂಟನ್ ಡಿ ಕಾಕ್ ಸೇರಿ 113 ರನ್ಗಳ ಉತ್ತಮ ಜತೆಯಾಟವಾಡಿದರು. ನಾಯಕ 48 ರನ್ಗಳಿಸಿ ರವೀಂದ್ರ ಜಡೇಜಾಗೆ ತಮ್ಮ ವಿಕೆಟ್ ಒಪ್ಪಿಸಿದರು.
ಹರಿಣಗಳ ಪರ ಏಕಾಂಗಿ ಹೋರಾಟ ನಡೆಸಿದ ಡಿ ಕಾಕ್(106ರನ್,89 ಬಾಲ್) ಅದ್ಬುತ ಶತಕ ಸಿಡಿಸಿ ಸಂಭ್ರಮಿಸಿದರು. ನಂತರ ಬಂದ ಮ್ಯಾಥ್ಯೂ ಬ್ರೀಟ್ಜ್ಕೆ(24 ರನ್) ಮತ್ತು ಐಡೆನ್ ಮಾರ್ಕ್ರಾಮ್(01) ರನ್ಗಳಿಸಿ ಬಹುಬೇಗ ಪೆವಿಲಿಯನ್ ಸೇರಿದರು. ನಂತರ ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಡೆವಾಲ್ಡ್ ಬ್ರೆವಿಸ್ (29ರನ್) ಹಾಗೂ ಮಾರ್ಕೊ ಜಾನ್ಸೆನ್ (17ರನ್) ಗಳಿಸಿ ನಿರಾಸೆ ಪ್ರದರ್ಶನ ನೀಡಿದರು.
ಭಾರತ ಪರವಾಗಿ ಕುಲದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 4 ವಿಕೆಟ್ ಕಿತ್ತು ಹರಿಣಗಳ ಸರ್ವಪತನಕ್ಕೆ ಕಾರಣರಾದರು. ಅಲ್ಲದೆ, ಅರ್ಶ್ದೀಪ್ ಸಿಂಗ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು,(ಏಜೆನ್ಸೀಸ್).