ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್
ನವದೆಹಲಿ: ಮಧ್ಯಪ್ರದೇಶದ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದನ್ನು ಖಂಡಿಸಿ ಬುಧವಾರ(ಜೂ. 10) ಚುನಾವಣೆ ಆಯೋಗವನ್ನು ಭೇಟಿ ಮಾಡಿದ ಕಾಂಗ್ರೆಸ್ನ(Congress) ಉನ್ನತ ನಾಯಕರು, ನಾಮಪತ್ರವನ್ನು ತಪ್ಪಾಗಿ ತಿರಸ್ಕರಿಸಲಾಗಿದೆ, ನಿರ್ಧಾರವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಜೈರಾಮ್ ರಮೇಶ್, ದೀಪಾ ದಾಸ್ಮುನ್ಷಿ, ವಿವೇಕ್ ತಂಖಾ ಹಾಗೂ ಅಭಿಷೇಕ್ ಸಿಂಘ್ವಿ ಸೇರಿದಂತೆ ಪಕ್ಷದ ಉನ್ನತ ನಾಯಕರ ನಿಯೋಗವು ಮೀನಾಕ್ಷಿ ನಟರಾಜನ್ ಅವರೊಂದಿಗೆ ಚು. ಆಯೋಗವನ್ನು ಭೇಟಿ ಮಾಡಿ ಆಕ್ಷೇಪಣೆ ಸಲ್ಲಿಸಿದ್ದಾರೆ.
ನಟರಾಜನ್ ವಿರುದ್ಧ ದಾಖಲಾಗಿರುವ ಖಾಸಗಿ ದೂರನ್ನು ಯಾವುದೇ ನ್ಯಾಯಾಲಯ ಇನ್ನೂ ವಿಚಾರಣೆಗೆ ತೆಗೆದುಕೊಂಡಿಲ್ಲವಾದ್ದರಿಂದ ಅವರ ವಿರುದ್ಧ ಯಾವುದೇ ಪ್ರಕರಣ ಬಾಕಿ ಇಲ್ಲ ಎಂದು ಆಯೋಗದ ಮುಂದೆ ವಾದಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನುಸಿಂಘ್ವಿ, ರಿಟರ್ನಿಂಗ್ ಆಫೀಸರ್ ನಿರ್ಧಾರ ನಿಜಕ್ಕೂ ಕಳಪೆ ಮತ್ತು ಸಂಪೂರ್ಣವಾಗಿ ಪಕ್ಷಪಾತಿಯಾಗಿದೆ. ಇದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾನೂನುಬಾಹಿರವಾಗಿದೆ ಎಂದು ಕಿಡಿಕಾರಿದ್ದಾರೆ.
ಕಾನೂನಿನ ದೃಷ್ಟಿಯಲ್ಲಿ ಶ್ರೀಮತಿ ನಟರಾಜನ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಅಸ್ತಿತ್ವದಲ್ಲಿಲ್ಲ. ಯಾರ ವಿರುದ್ಧವಾದರೂ ಸಲ್ಲಿಸಬಹುದಾದ ಖಾಸಗಿ ದೂರಿನಲ್ಲಿ, ಮ್ಯಾಜಿಸ್ಟ್ರೇಟ್ ಅಥವಾ ಸಂಬಂಧಪಟ್ಟ ನ್ಯಾಯಾಧೀಶರು ಗಮನಕ್ಕೆ ಬರುವವರೆಗೆ ಯಾವುದೇ ಕ್ರಿಮಿನಲ್ ಪ್ರಕರಣ ಅಸ್ತಿತ್ವಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
ನಾಮಪತ್ರ ತಿರಸ್ಕೃತವಾದದ್ದು ಯಾಕೆ?
ಮಧ್ಯಪ್ರದೇಶದ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೀನಾಕ್ಷಿ ನಟರಾಜನ್ ಅವರು, ಅಫಿಡವಿಟ್‌ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ದೂರು ನೀಡಿದೆ.
ದೂರಿನ ವಿಚಾರಣೆ ನಡೆಸಿದ್ದ ಚುನಾವಣಾಧಿಕಾರಿ, ಹೈದರಾಬಾದ್ ನ್ಯಾಯಾಲಯದಲ್ಲಿ ಅವರ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಸಂಪೂರ್ಣ ತಿಳಿದಿದೆ. ಆದರೂ ಅಫಿಡವಿಟ್‌ನಲ್ಲಿ ಅದನ್ನು ಉಲ್ಲೇಖಿಸಲು ವಿಫಲರಾಗಿದ್ದಾರೆ ಎಂದು ಮಂಗಳವಾರ ರಾತ್ರಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದಾರೆ (ಏಜೆನ್ಸೀಸ್).