Supreme Court | ಬಂಗಾಳ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್ 
ದೇಶ

ನಿಮ್ಮದೇ ಸರ್ಕಾರ ಕೇಂದ್ರದಲ್ಲಿದ್ದರೆ ಹೀಗೆ ಮಾಡುತ್ತೀರಾ..? ಬಂಗಾಳ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್ | Supreme Court

ನವದೆಹಲಿ: ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ವಿರುದ್ಧ ಜಾರಿ ನಿರ್ದೇಶನಾಲಯ ನಡೆಸಿದ ತನಿಖೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಗಂಭೀರ ಆರೋಪದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ನಡೆಸಿದ್ದು, ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಕೆಲ ಪ್ರಶ್ನೆಗಳನ್ನು ಕೇಳಿರುವ ನ್ಯಾಯಾಲಯ, ಒಕ್ಕೂಟ ವ್ಯವಸ್ಥೆಯ ಜವಾಬ್ದಾರಿಯನ್ನು ನೆನಪಿಸಿದೆ.
ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಎನ್‌.ವಿ. ಅಂಜಾರಿಯಾ ಅವರಿದ್ದ ಪೀಠವು ಬಂಗಾಳ ಸರ್ಕಾರವನ್ನು ಉದ್ದೇಶಿಸಿ, ಒಂದು ವೇಳೆ ಕೇಂದ್ರದಲ್ಲಿ ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದು, ರಾಜ್ಯದಲ್ಲಿ ಬೇರೆ ಯಾವುದಾದರೂ ರಾಜಕೀಯ ಪಕ್ಷದ ಆಡಳಿತವಿದ್ದಾಗ ಅವರು ನಿಮ್ಮ ತನಿಖಾ ಸಂಸ್ಥೆಯ ಕೆಲಸಕ್ಕೆ ಇದೇ ರೀತಿ ಅಡ್ಡಿಪಡಿಸಿದರೆ ಏನಾಗುತ್ತದೆ? ಎಂದು ಪ್ರಶ್ನಿಸಿದೆ.
 ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಜನವರಿ ತಿಂಗಳಿನಲ್ಲಿ ಐ-ಪ್ಯಾಕ್ ಕಚೇರಿಗಳ ಮೇಲೆ ನಡೆದ ದಾಳಿಗೆ ರಾಜ್ಯ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ ಎಂಬ ಇಡಿ ಆರೋಪವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.
ಇಡಿ ಅಧಿಕಾರಿಗಳಾಗಿರುವುದರಿಂದ ಅವರು ಭಾರತದ ನಾಗರಿಕರಾಗುವುದನ್ನು ನಿಲ್ಲಿಸುತ್ತಾರೆಯೇ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಮಿಶ್ರಾ ಅವರು, ಕರ್ತವ್ಯ ನಿರ್ವಹಿಸುವಾಗ ದೈಹಿಕವಾಗಿ ಅಥವಾ ಮಾನಸಿಕವಾಗಿ ಹಲ್ಲೆಗೊಳಗಾದ ಅಧಿಕಾರಿಗಳ ವೈಯಕ್ತಿಕ ಮೂಲಭೂತ ಹಕ್ಕುಗಳ ಬಗ್ಗೆ ಗಮನಹರಿಸುವಂತೆ ಸೂಚಿಸಿದರು. ಕೇವಲ ಇಡಿ ಎಂಬ ಸಂಸ್ಥೆಯನ್ನು ನೋಡಬೇಡಿ, ಬದಲಾಗಿ ಅಪರಾಧದ ಸಂತ್ರಸ್ತರಾದ ಅಧಿಕಾರಿಗಳ ಹಕ್ಕುಗಳನ್ನು ಗಮನಿಸಿ ಎಂದು ಕಿವಿಮಾತು ಹೇಳಿದರು.

ಕಪಿಲ್ ಸಿಬಲ್ ಪ್ರತಿವಾದ

ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ತನಿಖೆ ನಡೆಸುವುದು ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕಲ್ಲ, ಅದು ಕೇವಲ ಕಾನೂನುಬದ್ಧ ಹಕ್ಕು ಎಂದು ವಾದಿಸಿದರು. ಒಬ್ಬ ಪೊಲೀಸ್ ಅಧಿಕಾರಿಯ ಕೆಲಸಕ್ಕೆ ಯಾರಾದರೂ ಅಡ್ಡಿಪಡಿಸಿದರೆ, ಅವರು ನೇರವಾಗಿ ಸಂವಿಧಾನದ ವಿಧಿ 32ರ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಅದಕ್ಕೆ ಶಾಸನಬದ್ಧ ಪರಿಹಾರಗಳಿವೆ. ಇಲ್ಲದಿದ್ದರೆ ಪ್ರತಿಯೊಬ್ಬ ಅಧಿಕಾರಿಯೂ ಸುಪ್ರೀಂ ಕೋರ್ಟ್ ಬಾಗಿಲು ತಟ್ಟುತ್ತಾರೆ ಎಂದು ವಾದಿಸಿದರು.

ಚುನಾವಣಾ ನೆಪಕ್ಕೆ ಸೊಪ್ಪು ಹಾಕದ ನ್ಯಾಯಾಲಯ

ಬಂಗಾಳದ ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕೆಂಬ ವಕೀಲ ಕಲ್ಯಾಣ್ ಬಂಡೋಪಾಧ್ಯಾಯ ಸಲಹೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ನಾವು ಚುನಾವಣೆಯಲ್ಲಾಗಲಿ ಅಥವಾ ಯಾವುದೇ ಅಪರಾಧದಲ್ಲಾಗಲಿ ಪಕ್ಷಪಾತಿಯಾಗಲು ಬಯಸುವುದಿಲ್ಲ. ನ್ಯಾಯಾಲಯಕ್ಕೆ ತನ್ನದೇ ಆದ ಸಮಯದ ಪ್ರಜ್ಞೆಯಿದೆ ಮತ್ತು ಯಾವಾಗ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದರ ಅರಿವಿದೆ ಎಂದು ನ್ಯಾಯಮೂರ್ತಿ ಮಿಶ್ರಾ ತಿಳಿಸಿದ್ದಾರೆ(ಏಜೆನ್ಸೀಸ್​).