ಹನಿಮೂನ್‌ನಲ್ಲಿ ಏನ್ ಮಾಡಿದ್ರಿ? ಗಂಡನ ಜತೆ ಅಡ್ಜಸ್ಟ್ ಆಗದಿದ್ರೆ ಹೇಳಿ...TCS ಕಿರುಕುಳ, ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ! TCS Nashik Harassment Case
- ಟಿಸಿಎಸ್ ನಾಸಿಕ್ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ಚುರುಕು
- ಈಗಾಗಲೇ ಓರ್ವ ಮಹಿಳೆ ಸೇರಿದಂತೆ 8 ಆರೋಪಿಗಳನ್ನು ಬಂಧಿಸಿದ್ದು, ಎಫ್ಐಆರ್ ಕೂಡ ದಾಖಲಿಸಲಾಗಿದೆ
- ಇದರೊಂದಿಗೆ ಆರೋಪಿತ ಉದ್ಯೋಗಿಗಳನ್ನು ಟಿಸಿಎಸ್ ಕಂಪನಿ ಕೆಲಸದಿಂದ ಅಮಾನತುಗೊಳಿಸಿದೆ
- ಕಂಪನಿಯ ಮಹಿಳಾ ಉದ್ಯೋಗಿಗಳು ತಾವು ಅನುಭವಿಸಿದ ಕಹಿ ಘಟನೆಗಳನ್ನು ಒಬ್ಬೊಬ್ಬರಾಗಿ ಬಿಚ್ಚಿಡುತ್ತಿದ್ದಾರೆ
TCS Nashik Harassment Case : ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯ ನಾಸಿಕ್ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣ ಪ್ರಸ್ತುತ ದೇಶದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಈ ಕಂಪನಿಯ ಮಹಿಳಾ ಉದ್ಯೋಗಿಗಳು ತಾವು ಅನುಭವಿಸಿದ ಕಹಿ ಘಟನೆಗಳನ್ನು ಒಬ್ಬೊಬ್ಬರಾಗಿ ಬಿಚ್ಚಿಡುತ್ತಿದ್ದಾರೆ. ಇದೀಗ ಮತ್ತೊಬ್ಬ ವಿವಾಹಿತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸಂತ್ರಸ್ತ ಮಹಿಳೆ ಐಟಿ ದಿಗ್ಗಜ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ನಾಸಿಕ್ ಘಟಕಕ್ಕೆ ಅಸೋಸಿಯೇಟ್ ಆಗಿ ಕೆಲಸಕ್ಕೆ ಸೇರಿದ್ದರು. ಹೊಸದಾಗಿ ಮದುವೆಯಾಗಿದ್ದ ಆಕೆಗೆ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ತೀವ್ರ ಕಿರುಕುಳ ಎದುರಾಗಿತ್ತು. ತಮ್ಮನ್ನು "ಪ್ಲೇಯರ್", "ಜೀರೋ ಫಿಗರ್" ಎಂದೆಲ್ಲ ಅಣಕಿಸುತ್ತಿದ್ದರು ಮತ್ತು ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರು ಹಾಗೂ ಅಸಭ್ಯ ಕಾಮೆಂಟ್‌ಗಳ ಮೂಲಕ ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.
ತನಿಖೆ ನಡೆಯುತ್ತಿದೆ
ತನ್ನ ಪುರುಷ ಸಹೋದ್ಯೋಗಿಗಳ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪಗಳನ್ನು ಹೊರಿಸಿರುವ ಅರ್ಧ ಡಜನ್‌ಗಿಂತಲೂ ಹೆಚ್ಚು ಮಹಿಳೆಯರಲ್ಲಿ ಈಕೆಯು ಕೂಡ ಒಬ್ಬರು. ಈ ಪ್ರಕರಣದಲ್ಲಿ ನಾಸಿಕ್‌ನ ವಿಶೇಷ ತನಿಖಾ ಸಂಸ್ಥೆ ಈಗಾಗಲೇ ಓರ್ವ ಮಹಿಳೆ ಸೇರಿದಂತೆ 8 ಆರೋಪಿಗಳನ್ನು ಬಂಧಿಸಿದ್ದು, ಎಫ್ಐಆರ್ ಕೂಡ ದಾಖಲಿಸಿದೆ. ಇದರೊಂದಿಗೆ ಆರೋಪಿತ ಉದ್ಯೋಗಿಗಳನ್ನು ಟಿಸಿಎಸ್ ಕಂಪನಿ ಕೆಲಸದಿಂದ ಅಮಾನತುಗೊಳಿಸಿದೆ. ಅಲ್ಲದೆ, ಆಂತರಿಕ ತನಿಖೆಗೂ ಕೂಡ ಆದೇಶಿಸಿದೆ. ಈ ಘಟನೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು 'ಕಾರ್ಪೊರೇಟ್ ಜಿಹಾದ್' ಎಂದು ಕರೆದು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದೆ. ಇದರ ನಡುವೆ ಸಂತ್ರಸ್ತರು ತಮಗಾದ ಕರಾಳ ಅನುಭವನ್ನು ಹೊರ ಜಗತ್ತಿನ ಮುಂದೆ ತೆರೆದಿಡುತ್ತಿದ್ದಾರೆ.
ವೈಯಕ್ತಿಕ ಜೀವನದ ಬಗ್ಗೆ ವಿಚಾರಣೆ
2025, ಜೂನ್ 20ರಂದು ವಿವಾಹವಾದ ನಂತರ, ಸಂತ್ರಸ್ತ ಮಹಿಳೆಯು ನಾಸಿಕ್‌ನ ಟಿಸಿಎಸ್ (TCS) ಶಾಖೆಯಲ್ಲಿ 'ಅಸೋಸಿಯೇಟ್' ಆಗಿ ಕೆಲಸಕ್ಕೆ ಸೇರಿದ್ದರು. ಜೂನ್ 24 ರಿಂದ ಶಾರುಖ್ ಖುರೇಷಿ ಮತ್ತು ಜಯೇಶ್ ಗುಂಜಾಲ್ ಅವರ ನೇತೃತ್ವದಲ್ಲಿ ಅವರಿಗೆ ಮೂರು ತಿಂಗಳ ತರಬೇತಿ ಆರಂಭವಾಗಿತ್ತು. ಈ ಸಮಯದಲ್ಲಿ, ತರಬೇತಿಗೆ ಸಂಬಂಧವಿಲ್ಲದ ಲೋನ್ ವಿಭಾಗದ ಟೀಮ್ ಲೀಡ್ ರಜಾ ಮೆನನ್ ಎಂಬಾತ ಪದೇಪದೆ ತರಬೇತಿ ಕೊಠಡಿಗೆ ಬಂದು, ಆಕೆಯ ವೈಯಕ್ತಿಕ ಜೀವನದ ಬಗ್ಗೆ ವಿಚಾರಿಸುತ್ತಾ ಕಿರುಕುಳ ನೀಡಲು ಆರಂಭಿಸಿದ್ದನು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಹನಿಮೂನ್‌ಗೆ ಎಲ್ಲಿಗೆ ಹೋಗಿದ್ರಿ?
ಆಕೆಗೆ ಮದುವೆಯಾಗಿ ಕೇವಲ ಒಂದು ತಿಂಗಳಾಗಿದ್ದರೂ ಸಹ, ರಜಾ ಮೆನನ್ ಆಕೆಯ ವೈಯಕ್ತಿಕ ವಿಷಯಗಳ ಬಗ್ಗೆ ಅಸಭ್ಯವಾಗಿ ಪ್ರಶ್ನಿಸುತ್ತಿದ್ದನು. ನಿಮ್ಮ ಗಂಡ ದೂರ ಇರುವುದರಿಂದ ನೀವು ಎಲ್ಲವನ್ನೂ ಹೇಗೆ ನಿಭಾಯಿಸುತ್ತೀರಿ? ನಿಮಗೆ ಭಯವಾಗುವುದಿಲ್ಲವೇ? ಹನಿಮೂನ್‌ಗೆ ಎಲ್ಲಿಗೆ ಹೋಗಿದ್ರಿ, ಅಲ್ಲಿ ಏನು ಮಾಡಿದ್ರಿ? ಎಂದು ಕೇಳುತ್ತಿದ್ದನು. ಈ ಸಂದರ್ಭದಲ್ಲಿ ಆಕೆಯ ಟೀಮ್ ಲೀಡರ್ ಶಾರುಖ್ ಖುರೇಷಿ, ಇದನ್ನು ತಡೆಯುವ ಬದಲು, ರಜಾನಿಗೆ ಸಾಥ್ ನೀಡುತ್ತಾ ಆಕೆಯ ಮದುವೆಯ ಬಗ್ಗೆ ಕುಚೋದ್ಯದ ಪ್ರಶ್ನೆಗಳನ್ನು ಕೇಳುತ್ತಿದ್ದನು ಎಂದು ಸಂತ್ರಸ್ತೆ ದೂರಿದ್ದಾರೆ.
ಪತಿಯೊಂದಿಗೆ ಹೊಂದಾಣಿಕೆಯಾಗದಿದ್ರೆ ನಮಗೆ ಹೇಳಿ
ಆರೋಪಿಗಳು ಆಕೆಯ ಹಳೆಯ ಸಂಬಂಧಗಳ ಬಗ್ಗೆ ಮತ್ತು ಪತಿಯೊಂದಿಗಿನ ಬಾಂಧವ್ಯದ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡುತ್ತಿದ್ದರು. ನಿಮ್ಮ ಪತಿಯೊಂದಿಗೆ ಹೊಂದಾಣಿಕೆಯಾಗದಿದ್ದರೆ ನಮಗೆ ತಿಳಿಸಿ, ನಾವು ನಿಮಗೆ ಏನು ಮಾಡಬೇಕೆಂದು ಕಲಿಸುತ್ತೇವೆ. ನಿಮಗೆ ಮದುವೆಗೂ ಮೊದಲು ಅನೇಕ ಬಾಯ್‌ಫ್ರೆಂಡ್‌ಗಳಿದ್ದಿರಬಹುದು, ಅವರನ್ನು ಬಿಟ್ಟು ಹೇಗೆ ಮದುವೆಯಾದಿರಿ? ಒಂದು ವೇಳೆ ಅವರು ಈಗಲೂ ನಿಮ್ಮನ್ನು ಹಿಂಬಾಲಿಸುತ್ತಿದ್ದರೆ ಮತ್ತು ಈ ವಿಷಯ ನಿಮ್ಮ ಪತಿಗೆ ತಿಳಿದರೆ ನಿಮ್ಮ ಪರಿಸ್ಥಿತಿ ಏನಾಗಬಹುದು? ಎಂದು ಕೇಳುವ ಮೂಲಕ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಸೀರೆ ಸೆರಗು ಎಳೆದು ಅಸಭ್ಯ ವರ್ತನೆ
ರಜಾ ಮೆಮನ್ ಎಂಬುವವರು ನನಗೆ "ಪ್ಲೇಯರ್" ಎಂದು ಅಡ್ಡಹೆಸರಿಟ್ಟು ಕರೆದು, ಕೆಲಸದ ವಿಷಯದಲ್ಲಿ ಲೇವಡಿ ಮಾಡುತ್ತಿದ್ದರು ಮತ್ತು ಅನುಚಿತವಾಗಿ ವರ್ತಿಸುತ್ತಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ನಡೆದ ಗುಡಿ ಪಾಡ್ವಾ ಹಬ್ಬದ ದಿನದಂದು, ಕಚೇರಿಯ ಲಾಬಿಯಲ್ಲಿ ರಜಾ, ತನ್ನ ಸೀರೆಯ ಸೆರಗನ್ನು ಎಳೆದು ಅಸಭ್ಯವಾಗಿ ನಡೆದುಕೊಂಡಿದ್ದಾಗಿ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಆರೋಪಗಳೆಲ್ಲ ಸುಳ್ಳೆಂದ ರಜಾ ಕುಟುಂಬ
ಮತ್ತೊಂದೆಡೆ, ರಜಾ ಮೆಮನ್ ಅವರ ಕುಟುಂಬದವರು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ರಜಾ ಒಬ್ಬ ಉತ್ತಮ ಕೆಲಸಗಾರನಾಗಿದ್ದು, ಕಚೇರಿಯಲ್ಲಿನ ವೃತ್ತಿಪರ ಮತ್ಸರ ಮತ್ತು ರಾಜಕೀಯದಿಂದಾಗಿ ಅವರ ಮೇಲೆ ಸುಳ್ಳು ಲೈಂಗಿಕ ಕಿರುಕುಳ ಹಾಗೂ ಮತಾಂತರದ ಆರೋಪಗಳನ್ನು ಹೊರಿಸಲಾಗಿದೆ ಎಂದು ರಜಾ ಅವರ ಚಿಕ್ಕಪ್ಪ ಅಯಾಜ್ ಕಾಜಿ ತಿಳಿಸಿದ್ದಾರೆ. ಇದು ಅವರ ಯಶಸ್ಸನ್ನು ಸಹಿಸದೆ ಮಾಡಿದ ಸಂಚು ಎಂದು ಅವರು ಪ್ರತಿಪಾದಿಸಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಜಾ ಮೆಮನ್ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದು ಕೋಮು ತಾರತಮ್ಯದಿಂದ ಕೂಡಿದ ಪ್ರಕರಣವಾಗಿದೆ ಎಂದು ಕುಟುಂಬಸ್ಥರು ಆಪಾದಿಸಿದ್ದು, ಉನ್ನತ ಹುದ್ದೆಯಲ್ಲಿರುವ ಇತರ ಧರ್ಮದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರಂಭದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಿಂದ ಮೌನವಾಗಿದ್ದ ಮಹಿಳೆ, ಆತನ ಕಿರುಕುಳ ಸಾಮಾಜಿಕ ಜಾಲತಾಣಗಳಿಗೂ (ಇನ್‌ಸ್ಟಾಗ್ರಾಮ್ ಮತ್ತು ಲಿಂಕ್ಡ್‌ಇನ್) ವ್ಯಾಪಿಸಿದಾಗ ಮತ್ತು ಹಿಂದೂ ದೇವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದಾಗ ಆ ಮಹಿಳೆ ಧ್ವನಿ ಎತ್ತಿದ್ದಾರೆ. ಸದ್ಯ ಈ ಗಂಭೀರ ಪ್ರಕರಣವನ್ನು ಎದುರಿಸಲು TCS ಸಂಸ್ಥೆಯು ಆಂತರಿಕ ತನಿಖೆಗಾಗಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದ್ದು, ಹೊರಗಿನ ತಜ್ಞರ ನೆರವಿನೊಂದಿಗೆ ಸಮಗ್ರ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಇನ್ನೂ ಏನೆಲ್ಲ ಬೆಳವಣಿಗೆ ಸಂಭವಿಸಲಿವೆ ಎಂದು ಕಾದು ನೋಡಬೇಕಿದೆ, (ಏಜೆನ್ಸೀಸ್).