Worrying fact 
ದೇಶ

ಸಂಪಾದಕೀಯ: ಆತಂಕಕಾರಿ ಸಂಗತಿ

ಬಾಬುಪ್ರಸಾದ್​ ಮೋಡಿಸ್​
ಸಾಮಾಜಿಕ ಮಾಧ್ಯಮವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ, ಅದರ ವ್ಯಸನಕ್ಕೆ ಬಿದ್ದು ಎಡವುತ್ತಿರುವವರೇ ಜಾಸ್ತಿ. ಈ ಸಂಬಂಧದ ಅಪಸವ್ಯಗಳು ಹೊರಬರುತ್ತಲೇ ಇದ್ದು, ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 
ಇತ್ತೀಚೆಗೆ ಅಶ್ಲೀಲ ವಿಡಿಯೋಗಳ ವೀಕ್ಷಣೆಯ ಗೀಳು ಹೆಚ್ಚಿದ್ದು, ಇದರಿಂದ ವ್ಯಕ್ತಿತ್ವಕ್ಕೆ ಧಕ್ಕೆಯಲ್ಲದೆ, ಸಾಮಾಜಿಕ ಸ್ವಾಸ್ಥ್ಯಕ್ಕೂ ಮಾರಕ. ವಯಸ್ಕರಲ್ಲಿ ಅಶ್ಲೀಲ ವಿಡಿಯೋಗಳ ವೀಕ್ಷಣೆಯಿಂದಾಗಿ ಆತಂಕ, ಖಿನ್ನತೆ ಸೇರಿ ಮಾನಸಿಕ ಸಮಸ್ಯೆಗಳು ಹೆಚ್ಚಳವಾಗಿವೆ ಎಂದು ನಿಮ್ಹಾನ್ಸ್ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ. 18ರಿಂದ 46 ವರ್ಷದೊಳಗಿನ 112 ಜನರ ಅಧ್ಯಯನ ಮಾಡಿ, ಈ ಸಮೀಕ್ಷೆ ಸಿದ್ಧಪಡಿಸಲಾಗಿದೆ. ಅಲ್ಲದೆ, ಅಶ್ಲೀಲ ವಿಡಿಯೋ ವೀಕ್ಷಣೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಜಾಸ್ತಿ ಇರುವುದು ಕಳವಳಕಾರಿ ವಿಚಾರ.
ಕೆಲವರು ಅತಿಯಾದ ದಣಿವು, ಮಾನಸಿಕ ಗೊಂದಲದಿಂದ ಹೊರಬರಲು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿದ್ದು, ಇದು ವ್ಯಕ್ತಿಯನ್ನು ಮತ್ತಷ್ಟು ಪ್ರಪಾತಕ್ಕೆ ತಳ್ಳುತ್ತಿದೆ. ಅಶ್ಲೀಲ ವಿಡಿಯೋಗಳನ್ನು ನಿಯಮಿತವಾಗಿ ನೋಡುವುದರಿಂದ ನಕಾರಾತ್ಮಕ ಚಿಂತನೆಗಳೇ ಆವರಿಸಿಕೊಳ್ಳುತ್ತವೆ. ಅಲ್ಲದೆ, ಹದಿಹರೆಯದ ವಯಸ್ಸಿನವರು ಇಂಥ ವೀಕ್ಷಣೆಯಲ್ಲಿ ತೊಡಗುವುದರಿಂದ ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚು. ಇತ್ತೀಚಿನ ದಿನಗಳಲ್ಲಿ 15-16 ವರ್ಷದೊಳಗಿನ ಬಾಲಕಿಯರು ಗರ್ಭಧಾರಣೆ ಮಾಡುತ್ತಿರುವ, ಶಿಶುವಿಗೆ ಜನ್ಮ ನೀಡುತ್ತಿರುವ ಅನೇಕ ಆಘಾತಕಾರಿ ಘಟನೆಗಳು ವರದಿಯಾಗಿವೆ. ಆಶ್ಲೀಲ ಕಂಟೆಂಟ್​ನ್ನು ನೋಡಿ ವಿಚಲಿತರಾಗುವ ಹದಿಹರೆಯದವರು ಇಂಥ ಕುಕೃತ್ಯಗಳಿಗೆ ಮುಂದಾಗುತ್ತಿದ್ದಾರೆ ಎಂಬುದು ಆಘಾತಕಾರಿ ಸಂಗತಿ.
ಸ್ಮಾರ್ಟ್ ಫೋನ್ ಬಳಕೆ ಮತ್ತು ಸಾಮಾಜಿಕ ಮಾಧ್ಯಮಗಳ ಅತಿಯಾದ ಅವಲಂಬನೆಯ ಬಳಿಕ ದೇಶದಲ್ಲಿ ಮಾನಸಿಕ ಆರೋಗ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸ್ಮಾರ್ಟ್ ಫೋನ್​ನ ಅತಿಯಾದ ಬಳಕೆ ಮಿದುಳಿಗೆ ಹಾನಿ ಮಾಡುವುದಲ್ಲದೆ, ಏಕಾಗ್ರತೆಯನ್ನು ಕಿತ್ತುಕೊಳ್ಳುತ್ತದೆ. ಚಂಚಲತೆ ಹೆಚ್ಚಿಸುತ್ತದೆ. ಸಿಟ್ಟು, ಉದ್ವೇಗ ಹೆಚ್ಚುತ್ತದೆ. ಅದರಲ್ಲೂ, ಅಶ್ಲೀಲ ವಿಡಿಯೋಗಳ ವೀಕ್ಷಣೆ ಇನ್ನೂ ಹೆಚ್ಚಿನ ಹಾನಿಯನ್ನು ಮಾಡುತ್ತಿದೆ. ಇದು ನೈಜ ಸಂಬಂಧಗಳಲ್ಲಿ ಬಿರುಕು ಸೃಷ್ಟಿಸುವ ಜತೆಗೆ, ಒಂಟಿತನವನ್ನೂ ಹೆಚ್ಚಿಸುತ್ತಿದೆ. ಇಂಥ ವ್ಯಸನದಲ್ಲಿ ತೊಡಗಿರುವವರು ಗಂಭೀರ ಮಾನಸಿಕ ಖಿನ್ನತೆ ಎದುರಿಸುತ್ತಿದ್ದಾರೆ ಮತ್ತು ಅದರಿಂದ ಹೊರತರಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಈ ವಿಷಯದಲ್ಲಿ ಪಾಲಕರ ಮೇಲೂ ಬಹುದೊಡ್ಡ ಜವಾಬ್ದಾರಿ ಇದೆ. ಮಕ್ಕಳು ಏನನ್ನು ನೋಡುತ್ತಿದ್ದಾರೆ, ಸಾಮಾಜಿಕ ಮಾಧ್ಯಮದಲ್ಲಿ ಯಾರನ್ನು ಅಥವಾ ಯಾವ ಸಂಗತಿಗಳನ್ನು ಫಾಲೋ ಮಾಡುತ್ತಿದ್ದಾರೆ, ಅವರ ವರ್ತನೆಯಲ್ಲಿ ಆಗುತ್ತಿರುವ ಬದಲಾವಣೆ ಸೇರಿದಂತೆ ಇತರ ಅಂಶಗಳ ಬಗ್ಗೆ ಗಮನಹರಿಸಬೇಕು. ಶಾಲೆಗಳಲ್ಲೂ ನೈತಿಕ ಮೌಲ್ಯಗಳನ್ನು ಬಿತ್ತುವ ಜತೆಗೆ ಓದಿನ ಹವ್ಯಾಸ ಬೆಳೆಸಲು ಉತ್ತೇಜನ ಸಿಗಬೇಕು. 
ಆಗ ಸ್ಮಾರ್ಟ್ ಫೋನ್ ಮತ್ತು ಆಕ್ಷೇಪಾರ್ಹ ಕಂಟೆಂಟ್ ವೀಕ್ಷಣೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ವಯಸ್ಕರು ಕೂಡ ಈ ವಿಷಯದಲ್ಲಿ ಎಡವುತ್ತಿರುವುದು ಆತಂಕಕಾರಿ. ಮನಸ್ಸನ್ನು ಒಳ್ಳೆಯ ಸಂಗತಿಗಳಿಂದ ಮಾತ್ರ ಸಾಂತ್ವನಿಸಬಹುದೆ ಹೊರತು ಕೆಟ್ಟ ಅಥವಾ ಆಕ್ಷೇಪಾರ್ಹ ಸಂಗತಿಗಳಿಂದ ಅಲ್ಲ ಎಂಬ ವಾಸ್ತವವನ್ನು ಅರಿತರೆ, ಪರಿಹಾರದ ದಾರಿ ಕಂಡುಕೊಳ್ಳಬಹುದು.