ಗಿನ್ನೆಸ್ ದಾಖಲೆ ಬರೆದ ಲಕ್ಷ್ಮಣನ್ ಮೆಯ್ಯಪ್ಪನ್ 
ದೇಶ

16 ನೇ ವಯಸ್ಸಿನಲ್ಲಿ ವಿಶ್ವದ ಕಿರಿಯ ಚಾರ್ಟರ್ಡ್​ ಅಕೌಂಟೆಡ್​​: ಗಿನ್ನೆಸ್​ ದಾಖಲೆ ಬರೆದ ಲಕ್ಷ್ಮಣನ್​ ಮೆಯ್ಯಪ್ಪನ್​! Lakshmanan Meyyappan

ಪ್ರಮುಖ ಮುಖ್ಯಾಂಶಗಳು

  • ಕೇವಲ 16ನೇ ವಯಸ್ಸಿಗೆ ವಿಶ್ವದ ಕಿರಿಯ ಚಾರ್ಟರ್ಡ್ ಅಕೌಂಟೆಂಟ್ (
  • ಗಿನ್ನೆಸ್ ದಾಖಲೆ ಬರೆದ ಲಕ್ಷ್ಮಣನ್ ಮೆಯ್ಯಪ್ಪನ್
ದುಬೈ: ಸಾಮಾನ್ಯವಾಗಿ 15-16 ವರ್ಷದ ಹುಡುಗರು, 10ನೇ ತರಗತಿ ಪರೀಕ್ಷೆ ಮುಗಿಸಿ, ಪಿಯುಸಿಯಲ್ಲಿ ಸೈನ್ಸ್ ತಗೋಬೇಕಾ? ಕಾಮರ್ಸ್ ತಗೋಬೇಕಾ? ಎಂಬ ದ್ವಂದದಲ್ಲಿರುತ್ತಾರೆ. ಇಲ್ಲವೇ ಮೊಬೈಲ್‌ನಲ್ಲಿ ವಿಡಿಯೋ ಗೇಮ್, ಸೋಷಿಯಲ್ ಮೀಡಿಯಾ ಎಂದು ಟೈಮ್ ಪಾಸ್ ಮಾಡ್ತಿರ್ತಾರೆ.
ಆದರೆ, ಇಲ್ಲೊಬ್ಬ ಬಾಲಕ ಕೇವಲ 16ನೇ ವಯಸ್ಸಿನಲ್ಲಿ ಇಡೀ ಜಗತ್ತೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾನೆ. ಹೌದು, ಲಕ್ಷ್ಮಣನ್ ಮೆಯ್ಯಪ್ಪನ್ (Lakshmanan Meyyappan) ಎಂಬ ಹುಡುಗ ಈಗ ವಿಶ್ವದ ಅತ್ಯಂತ ಕಿರಿಯ 'ಚಾರ್ಟರ್ಡ್ ಅಕೌಂಟೆಂಟ್' (CA) ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದು, ಪ್ರತಿಷ್ಠಿತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಸಿದ್ದಾನೆ.
ದುಬೈನಲ್ಲಿ ನೆಲೆಸಿರುವ ಮೆಯ್ಯಪ್ಪನ್, ಕೇವಲ 16 ವರ್ಷ ಮತ್ತು 141 ದಿನಗಳ ವಯಸ್ಸಿನಲ್ಲೇ ಈ ಸಾಧನೆ ಮಾಡಿದ್ದಾನೆ. ಸಾಮಾನ್ಯವಾಗಿ ಸಿಎ (CA) ಪಾಸ್ ಮಾಡುವುದು ಎಷ್ಟು ಕಷ್ಟ ಅಂತ ಎಲ್ಲರಿಗೂ ಗೊತ್ತೇ ಇದೆ. ಡಿಗ್ರಿ ಮುಗಿಸಿ, ವರ್ಷಗಟ್ಟಲೆ ಓದಿ, ಹಗಲಿರುಳು ನಿದ್ದೆಗೆಟ್ಟರೂ ಸಿಎ ಪಾಸ್ ಮಾಡಲಾಗದೆ ಎಷ್ಟೋ ಜನ ಕೈಚೆಲ್ಲುತ್ತಾರೆ. ಅಂಥದ್ದರಲ್ಲಿ 10ನೇ ಕ್ಲಾಸ್ ಮುಗಿಸಿದ ಹುಡುಗ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಶ್ಲಾಘನಾರ್ಹವಾಗಿದೆ.

ತಾಯಿಯೇ ಮೊದಲ ಗುರು: ಲಾಕ್‌ಡೌನ್ ಸದುಪಯೋಗ

ಕರೋನಾ ಟೈಮ್‌ನಲ್ಲಿ ನಾವೆಲ್ಲರೂ ಮನೆಯಲ್ಲಿ ಕೂತು ಬೇಜಾರು ಮಾಡಿಕೊಳ್ಳುತ್ತಿದ್ದಾಗ, ಮೆಯ್ಯಪ್ಪನ್ ಸುಮ್ಮನೆ ಕೂರಲಿಲ್ಲ. ಆತನ ತಾಯಿ ಕೂಡ ವೃತ್ತಿಯಲ್ಲಿ ಎಸಿಸಿಎ (ACCA) ಆಗಿದ್ದರು. ಬಿಡುವಿನ ವೇಳೆಯಲ್ಲಿ ಮಗನಿಗೆ ಅಕೌಂಟಿಂಗ್‌ನ ಮೂಲಭೂತ ವಿಷಯಗಳನ್ನು ಮನೆಯಲ್ಲೇ ಹೇಳಿಕೊಡಲು ಶುರುಮಾಡಿದರು.

ಆಟದ ವಯಸ್ಸಿನಲ್ಲಿ ಅಕೌಂಟಿಂಗ್ ಯಾಕೆ ಅಂತ ಆತ ಬೇಸರ ಮಾಡಿಕೊಳ್ಳದೆ, ಅದರ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡ ಮೆಯ್ಯಪ್ಪನ್, ಕೇವಲ 15ನೇ ವಯಸ್ಸಿಗೆ ಆತ ಎಸಿಸಿಎ (ACCA) ಓದಲು ಶುರುಮಾಡಿದ. ನಂತರ, ಅತ್ಯಂತ ಕಠಿಣವಾದ ಈ ಕೋರ್ಸ್ ಅನ್ನು ಬರೀ ಒಂದೇ ವರ್ಷದಲ್ಲಿ ಪಾಸ್ ಈಗ ದಾಖಲೆ ಬರೆದಿದ್ದಾನೆ.


ಉನ್ನತ ಹುದ್ದೆ, ದೊಡ್ಡ ಜವಾಬ್ದಾರಿ

ಇಷ್ಟಕ್ಕೇ ಸುಮ್ಮನಾಗದ ಈತ, ಅದಾದ ಮೇಲೆ ಪ್ರತಿಷ್ಠಿತ CFA (Chartered Financial Analyst) ಅರ್ಹತೆಯನ್ನೂ ಪಡೆದುಕೊಂಡ. ಈಗ ಫೈನಾನ್ಸ್‌ನಲ್ಲಿ ಎಂಎಸ್‌ಸಿ (MSc) ಉನ್ನತ ವ್ಯಾಸಂಗ ಮಾಡುತ್ತಿದ್ದಾನೆ. ಅಷ್ಟೇ ಅಲ್ಲ, ಪ್ರಸ್ತುತ ದುಬೈನ ಪ್ರತಿಷ್ಠಿತ ಸೆಂಚುರಿ ಫೈನಾನ್ಷಿಯಲ್ ಎಂಬ ಕಂಪನಿಯಲ್ಲಿ ಹಿರಿಯ ಸಂಶೋಧನಾ ವಿಶ್ಲೇಷಕನಾಗಿ ಕೆಲಸ ಮಾಡುತ್ತಿದ್ದಾನೆ.

ಇಷ್ಟು ಚಿಕ್ಕ ವಯಸ್ಸಿಗೆ ಫೈನಾನ್ಷಿಯಲ್ ಮಾರ್ಕೆಟ್, ಷೇರುಪೇಟೆ ಹೂಡಿಕೆ ಹಾಗೂ ರಿಸರ್ಚ್ ಬಗ್ಗೆ ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಟ್ಟಕ್ಕೆ ಈ ಯುವಕ ಬೆಳೆದು ನಿಂತಿದ್ದಾನೆ.

ಕುತೂಹಲವೇ ಗೆಲುವಿನ ಗುಟ್ಟು!

ತನ್ನ ಗಿನ್ನೆಸ್ ದಾಖಲೆಯ ಬಗ್ಗೆ ಮಾತನಾಡುವ ಮೆಯ್ಯಪ್ಪನ್, ಈ ಗಿನ್ನೆಸ್ ದಾಖಲೆ ನನಗೆ ಖುಷಿ ಕೊಟ್ಟಿದೆ. ಆದರೆ ನಾನೆಂದೂ ಡಿಗ್ರಿ ಅಥವಾ ಸರ್ಟಿಫಿಕೇಟ್‌ಗಳನ್ನು ಒಂದು ರೇಸ್ ತರಹ ನೋಡಿಲ್ಲ. ಹಣಕಾಸಿನ ವಿಚಾರಗಳು ನಿಜ ಜೀವನದಲ್ಲಿ ಹೇಗೆ ಕೆಲಸ ಮಾಡುತ್ತವೆ, ಭವಿಷ್ಯಕ್ಕೆ ಯಾವ ಕೌಶಲ್ಯಗಳು ಬೇಕು ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ನನಗಿತ್ತು.
ನಾವು ಕಲಿಯುವ ವಿಷಯಗಳು ನಮ್ಮ ಕುತೂಹಲದಿಂದ ಕೂಡಿರಬೇಕೇ ಹೊರತು, ಯಾರಿಗೋ ಮುಂಚೆ ಪಾಸ್ ಮಾಡಬೇಕು ಎಂಬ ವೇಗದಿಂದಲ್ಲ. ಆಗ ಮಾತ್ರ ನಾವು ಕಲಿಯುವುದಕ್ಕೆ ಒಂದು ಅರ್ಥ ಸಿಗುತ್ತದೆ ಎನ್ನುತ್ತಾನೆ, (ಏಜನ್ಸೀಸ್​).