ಅಸ್ಸಾಂನಲ್ಲಿ IVF ಮೂಲಕ ಸ್ಥಳೀಯ ತಳಿಯ ಕರು ಜನನ
- ಅಸ್ಸಾಂನಲ್ಲಿ IVF ಮೂಲಕ ಸ್ಥಳೀಯ ತಳಿಯ ಕರು ಜನನ
- ವಿಶ್ವದಲ್ಲೇ ಲಖಿಮಿ ತಳಿಯ ಮೊದಲ IVF ಹೆಣ್ಣು ಕರು
- ಅಸ್ಸಾಂ ಪಶುವೈದ್ಯ-ಮೀನುಗಾರಿಕಾ ವಿಶ್ವವಿದ್ಯಾಲಯದ ಸಾಧನೆ
Local breed calf from IVF: ಜಾನುವಾರು ಸಾಕಾಣಿಕೆ ಕ್ಷೇತ್ರದಲ್ಲಿ ಅಸ್ಸಾಂ ಹೊಸ ಮೈಲಿಗಲ್ಲು ಸಾಧಿಸಿದೆ. ಸ್ಥಳೀಯ ಲಖಿಮಿ ತಳಿಯ ಹೆಣ್ಣು ಕರುವೊಂದು IVF ಅಂದರೆ ಇನ್-ವಿಟ್ರೋ ಫರ್ಟಿಲೈಸೇಶನ್ ತಂತ್ರಜ್ಞಾನದ ಮೂಲಕ ಜನಿಸಿದೆ. ಇದು ವಿಶ್ವದಲ್ಲೇ ಲಖಿಮಿ ತಳಿಯ ಮೊದಲ ಐವಿಎಫ್ ಹೆಣ್ಣು ಕರು ಎಂಬುದು ವಿಶೇಷ.
ಇನ್ನು, ಈ ಮಹತ್ವದ ಸಾಧನೆ ಗುವಾಹಟಿಯ ಅಸ್ಸಾಂ ವೆಟರಿನರಿ ಅಂಡ್ ಫಿಶರೀಸ್ ಯೂನಿವರ್ಸಿಟಿಯಲ್ಲಿ ನಡೆದಿದೆ. ಅಸ್ಸಾಂನ ಸ್ಥಳೀಯ ಜಾನುವಾರು ತಳಿಗಳನ್ನು ಉಳಿಸಿ, ಅವುಗಳ ಗುಣಮಟ್ಟವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಸಾಧನೆ ಮಹತ್ವ ಪಡೆದುಕೊಂಡಿದೆ. ಈ ಹೆಣ್ಣು ಕರುವನ್ನು ಶುದ್ಧ ಲಖಿಮಿ ತಳಿಯ ಹಸುವಿನ ಭ್ರೂಣವನ್ನು ಬಳಸಿ ಐವಿಎಫ್ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಬಳಸಲಾದ ಪ್ರಯೋಗಾಲಯಕ್ಕೆ ರಾಷ್ಟ್ರೀಯ ಗೋಕುಲ್ ಮಿಷನ್ (RGM)ನ ಹಣಕಾಸಿನ ನೆರವು ಸಿಕ್ಕಿದೆ..
ಮನುಷ್ಯರಂತೆ ಹಸುಗಳಿಗೂ ಐವಿಎಫ್
ಸಾಮಾನ್ಯವಾಗಿ ಐವಿಎಫ್ ತಂತ್ರಜ್ಞಾನವನ್ನು ಮಾನವರ ಚಿಕಿತ್ಸೆಯಲ್ಲಿ ಕೇಳಿರುತ್ತೇವೆ. ಆದರೆ ಇದೇ ರೀತಿಯ ತಂತ್ರಜ್ಞಾನವನ್ನು ಜಾನುವಾರುಗಳ ಸಂತಾನೋತ್ಪತ್ತಿಯಲ್ಲೂ ಬಳಸಲಾಗುತ್ತದೆ. ಉತ್ತಮ ಗುಣಮಟ್ಟದ ತಳಿಗಳನ್ನು ಹೆಚ್ಚಿಸುವುದು ಮತ್ತು ಸ್ಥಳೀಯ ತಳಿಗಳನ್ನು ಸಂರಕ್ಷಿಸುವುದು ಇದರ ಪ್ರಮುಖ ಉದ್ದೇಶ.
ರೈತರಿಗೆ ಏನೂ ಲಾಭ?
ಈ ಸಾಧನೆಯಿಂದ ಸ್ಥಳೀಯ ಜಾನುವಾರು ತಳಿಗಳ ಸಂರಕ್ಷಣೆಗೆ ಅವಕಾಶ ಸಿಗಲಿದೆ. ಜೊತೆಗೆ ರೋಗ ನಿಯಂತ್ರಣ, ಹಾಲಿನ ಉತ್ಪಾದನೆ ಹೆಚ್ಚಳ ಹಾಗೂ ಉತ್ತಮ ಗುಣಮಟ್ಟ, ಜಾನುವಾರುಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲೂ ಇದು ಸಹಾಯಕವಾಗಬಹುದು. ಇದರಿಂದ ಮುಂದಿನ ದಿನಗಳಲ್ಲಿ ಹೈನುಗಾರಿಕೆ ಕ್ಷೇತ್ರ ಬಲಗೊಳ್ಳುವುದರ ಜೊತೆಗೆ ರೈತರ ಆದಾಯ ಹೆಚ್ಚಿಸಲು ಸಹ ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಐತಿಹಾಸಿಕ ಸಾಧನೆ ಎಂದ ಸಿಎಂ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೂಡ ಈ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ. ‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಅಸ್ಸಾಂಗೆ ಇದು ಐತಿಹಾಸಿಕ ದಿನ. ಲಖಿಮಿ ತಳಿ ಅಸ್ಸಾಂಗೆ ಸ್ಥಳೀಯವಾದ ತಳಿಯಾಗಿದ್ದು, ಅದರ ಮೊದಲ ಐವಿಎಫ್ ಹೆಣ್ಣು ಕರು ಜನಿಸಿದೆ. ಇದು ಜಾನುವಾರು ಮತ್ತು ಹೈನುಗಾರಿಕೆ ಕ್ಷೇತ್ರಕ್ಕೆ ಹೊಸ ದಾರಿ ತೆರೆದಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಸ್ಥಳೀಯ ಲಖಿಮಿ ತಳಿಯ ಐವಿಎಫ್ ಹೆಣ್ಣು ಕರುವಿನ ಜನನ ಅಸ್ಸಾಂನ ಜಾನುವಾರು ಸಾಕಾಣಿಕೆ ಕ್ಷೇತ್ರದಲ್ಲಿ ಮಾತ್ರವಲ್ಲ, ದೇಶದ ಪಶುಸಂಗೋಪನಾ ಕ್ಷೇತ್ರದಲ್ಲೂ ಗಮನ ಸೆಳೆಯುವ ಸಾಧನೆಯಾಗಿದೆ,(ಏಜೆನ್ಸೀಸ್).