ಚಂದ್ರಶೇಖರ ಗಂಧನಹಳ್ಳಿ
ಇಂದಿನ ದಿನಗಳಲ್ಲಿ ಜೈವಿಕ ಇಂಧನವು ಪೆಟ್ರೋಲ್-ಡೀಸೆಲ್ಗೆ ಪರ್ಯಾಯವಷ್ಟೇ ಅಲ್ಲ. ಅದು ಸ್ವಾವಲಂಬಿ ಭಾರತ ಕನಸನ್ನು ನನಸು ಮಾಡುವ ಪ್ರಮುಖ ಅಸ್ತ್ರವಾಗಿದೆ. ಜೈವಿಕ ಇಂಧನ ಉತ್ಪಾದನೆಯು ಭಾರತದಲ್ಲಿ ಬೃಹತ್ ಉದ್ಯಮವಾಗಿ ಬೆಳೆಯುತ್ತಿದೆ. ಜೈವಿಕ ಇಂಧನವು ಕೇವಲ ವಾಹನಗಳನ್ನು ಓಡಿಸುವ ಶಕ್ತಿಯಾಗಿರದೆ, ರೈತರ ಬದುಕನ್ನು ಹಸನಾಗಿಸುವ, ಆರ್ಥಿಕತೆಯನ್ನು ಸ್ವಾವಲಂಬಿಯಾಗಿಸುವ ಮತ್ತು ಪರಿಸರವನ್ನು ರಕ್ಷಿಸುವ ಆತ್ಮನಿರ್ಭರ ಭಾರತದ ಆಶಯಕ್ಕೆ ಪೂರಕವಾಗಿದೆ.
ವಿಶಾಲ ಭೂಪ್ರದೇಶ ಮತ್ತು ಹೆಚ್ಚು ಮಾನವ ಸಂಪತ್ತುಳ್ಳ ಭಾರತವು ಕಚ್ಚಾ ತೈಲಕ್ಕೆ ಬೇರೆ ದೇಶಗಳ ಮೇಲೆ ಅವಲಂಬಿಸಿದ್ದು, ಇದನ್ನು ತಗ್ಗಿಸುವ ಸಲುವಾಗಿಯೇ 2018ರಲ್ಲಿ ರಾಷ್ಟ್ರೀಯ ಜೈವಿಕ ಇಂಧನ ನೀತಿಯನ್ನು ಜಾರಿಗೊಳಿಸಲಾಗಿದೆ. ಪೆಟ್ರೋಲ್ನಲ್ಲಿ ಶೇಕಡ 20ರಷ್ಟು ಎಥೆನಾಲ್ ಮಿಶ್ರಣ ಮಾಡುವ (ಇ20) ಮತ್ತು ಡೀಸೆಲ್ನಲ್ಲಿ ಶೇ.5ರಷ್ಟು ಬಯೋ-ಡೀಸೆಲ್ ಮಿಶ್ರಣ ಮಾಡುವ ಗುರಿಗೆ ವೇಗ ನೀಡಲಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಸಚಿವ ಸಂಪುಟವು (ಆಗಸ್ಟ್ 6) ‘ಗೋಬರ್ಧನ್’ ಯೋಜನೆಗೆ ಅನುಮೋದನೆ ನೀಡಿದೆ. ಕೃಷಿ ತ್ಯಾಜ್ಯ, ಹಸುವಿನ ಸಗಣಿ, ಸಕ್ಕರೆ ಕಾರ್ಖಾನೆಯ ತ್ಯಾಜ್ಯ ಮತ್ತು ನಗರದ ಸಾವಯವ ತ್ಯಾಜ್ಯಗಳನ್ನು ಕಂಪ್ರೆಸ್ಡ್ ಬಯೋಗ್ಯಾಸ್ ಆಗಿ ಪರಿವರ್ತಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ 23,731 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.
ಭಾರತದಲ್ಲಿ 2003ರಲ್ಲಿ ಪ್ರಥಮ ಬಾರಿಗೆ ಜೈವಿಕ ಇಂಧನ ಉತ್ಪಾದನೆ ಆರಂಭಿಸಲಾಯಿತು. ಆದರೆ, ವೇಗ ಪಡೆದದ್ದು 2018ರಲ್ಲಿ ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಜೈವಿಕ ಇಂಧನ ನೀತಿ’ ಜಾರಿಗೆ ತಂದ ನಂತರ. ಆ ಬಳಿಕ ಜೈವಿಕ ಇಂಧನದ ವಾಣಿಜ್ಯಿಕ ಉತ್ಪಾದನೆ ಮತ್ತು ಬಳಕೆ ಬೃಹತ್ ಪ್ರಮಾಣದಲ್ಲಿ ವೇಗ ಪಡೆಯಿತು. ಪ್ರಸ್ತುತ ವಾರ್ಷಿಕ 1,300ರಿಂದ 1,400 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸಲಾಗುತ್ತಿದೆ. ಪೆಟ್ರೋಲ್ನಲ್ಲಿ ಎಥೆನಾಲ್ ಬೆರೆಸುವ ಪ್ರಮಾಣವು ಶೇ.20ಕ್ಕೆ ತಲುಪಿದ್ದು, 2014ರಲ್ಲಿ ಇದು ಕೇವಲ ಶೇ.1.5ರಷ್ಟಿತ್ತು. ಭಾರತವು ಅನ್ಯ ದೇಶಗಳಿಂದ ಕಚ್ಚಾ ತೈಲ ಅಮದು ಪ್ರಮಾಣವನ್ನು ಕಡಿಮೆ ಮಾಡಿ, ದೇಶಿಯ ಜೈವಿಕ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದಲ್ಲಿ ಆರ್ಥಿಕವಾಗಿ ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಲಿದೆ.
ಕಚ್ಚಾ ತೈಲ ಖರೀದಿಗಾಗಿ ಪಾವತಿಸುವ ಅಪಾರ ಮೊತ್ತ ದೇಶದಲ್ಲೇ ಉಳಿಯಲಿದೆ. ಇದು ಸ್ಥಳೀಯ ಅಭಿವೃದ್ಧಿಗೆ ಬಳಕೆ ಮಾಡಬಹುದು. ಆದ್ದರಿಂದಲೇ ಕೇಂದ್ರ ಸರ್ಕಾರ ರಾಷ್ಟ್ರೀಯ ಜೈವಿಕ ಇಂಧನ ನೀತಿ, ಎಥೆನಾಲ್ ಮಿಶ್ರಣ ಕಾರ್ಯಕ್ರಮ, ಪಿಎಂ-ಜೀವನ್ ಯೋಜನೆ, ಸತತ್ ಯೋಜನೆ, ಗೋಬರ್ಧನ್ ಯೋಜನೆ ಸೇರಿ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದೆ. ಭಾರತವು ಪ್ರಸ್ತುತ ತನ್ನ ಒಟ್ಟು ಬೇಡಿಕೆಯ ಶೇಕಡ 88ರಷ್ಟು ಕಚ್ಚಾ ತೈಲವನ್ನು ಅನ್ಯ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ವಾರ್ಷಿಕ ಅಂದಾಜು 11.5ರಿಂದ 12.5 ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ.
ಜೈವಿಕ ಇಂಧನ ಎನ್ನುವುದು ಕೃಷಿ ತ್ಯಾಜ್ಯ, ಸಸ್ಯಜನ್ಯ ಎಣ್ಣೆ, ಪ್ರಾಣಿಗಳ ತ್ಯಾಜ್ಯ (ಸಗಣಿ) ಮತ್ತು ಇತರ ಜೈವಿಕ ವಸ್ತುಗಳಿಂದ ತಯಾರಿಸಲಾದ ನವೀಕರಿಸಬಹುದಾದ ಇಂಧನವಾಗಿದೆ. ಪಳೆಯುಳಿಕೆ ಇಂಧನಗಳಿಗೆ (ಪೆಟ್ರೋಲ್, ಡೀಸೆಲ್) ಹೋಲಿಸಿದರೆ ಜೈವಿಕ ಇಂಧನಗಳು ಕಡಿಮೆ ಇಂಗಾಲದ ಡೈಆಕ್ಸೈಡ್ನ್ನು ಬಿಡುಗಡೆ ಮಾಡುತ್ತವೆ. ಇದು ಪರಿಸರವನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ. 2070ರ ವೇಳೆಗೆ ‘ಶೂನ್ಯ ಇಂಗಾಲದ ಹೊರಸೂಸುವಿಕೆ’ ಸಾಧಿಸುವ ಭಾರತದ ಅಂತಾರಾಷ್ಟ್ರೀಯ ಗುರಿಯನ್ನು ತಲುಪಲು ಜೈವಿಕ ಇಂಧನ ಅತ್ಯಗತ್ಯವಾಗಿದೆ.
ಭಾರತವು ವಾರ್ಷಿಕವಾಗಿ 60 ಸಾವಿರ ಕೋಟಿ ರೂಪಾಯಿಗಳನ್ನು ದೇಶೀಯ ಜೈವಿಕ ಇಂಧನಕ್ಕೆ ವಿನಿಯೋಗಿಸುತ್ತಿದೆ. ಈ ಮೂಲಕ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹರಿದುಹೋಗುತ್ತಿದ್ದ ಹಣವನ್ನು ಉಳಿಸಿ ದೇಶದ ಆರ್ಥಿಕತೆಗೆ ಮರಳಿಸುತ್ತಿದೆ. ತೈಲ ಮಾರಾಟ ಕಂಪನಿಗಳು, ರೈತರು ಹಾಗೂ ಎಥೆನಾಲ್ ಉತ್ಪಾದಕರಿಂದ ಪ್ರತಿ ಲೀಟರ್ ಎಥೆನಾಲ್ ಅನ್ನು ಕಬ್ಬಿನ ಹಾಲಿನಿಂದ ಪಡೆಯುವುದಾದರೆ 65 ರೂ. ಹಾಗೂ ಧಾನ್ಯ/ಮೆಕ್ಕೆಜೋಳದಿಂದ ಪಡೆಯುವುದಾದರೆ 55 ರೂ., 64 ರೂ. ನೀಡುತ್ತವೆ. ಭಾರತ ಸರ್ಕಾರವು ಪೆಟ್ರೋಲ್ನಲ್ಲಿ ಬೆರೆಸಲು ಎಥೆನಾಲ್ ಖರೀದಿಸಲು ವಾರ್ಷಿಕ -ಠಿ;60 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಅಲ್ಲದೆ, ಕಟಾವಿನ ನಂತರ ಉಳಿಯುವ ಕೃಷಿ ತ್ಯಾಜ್ಯವನ್ನು ಸುಡುವ ಬದಲು, ಅದರಿಂದ 2ಜಿ (ಸೆಕೆಂಡ್ ಜೆನರೇಷನ್) ಎಥೆನಾಲ್ ತಯಾರಿಸಲು ಬಳಸುತ್ತಿದ್ದು, ರೈತರಿಗೆ ಹೆಚ್ಚುವರಿ ಆದಾಯ ಸಿಗುತ್ತದೆ.
ನವದೆಹಲಿಯ ಭಾರತ್ ಮಂಟಪಂನಲ್ಲಿ 2023ರಲ್ಲಿ ನಡೆದ 18ನೇ ಜಿ-20 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ‘ಜಾಗತಿಕ ಜೈವಿಕ ಇಂಧನ ಒಕ್ಕೂಟ’ ಪ್ರಾರಂಭಿಸಲಾಯಿತು. ಅಮೆರಿಕ, ಬ್ರೆಜಿಲ್, ಅರ್ಜೆಂಟಿನಾ, ಬಾಂಗ್ಲಾದೇಶ, ಇಟಲಿ, ಮಾರಿಷಸ್, ಸಿಂಗಾಪುರ ಮತ್ತು ಯುಎಇ ದೇಶಗಳ ನಾಯಕರ ಸಮ್ಮುಖದಲ್ಲಿ ಚಾಲನೆ ಪಡೆದ ಈ ಒಕ್ಕೂಟದ ಮುಖ್ಯಗುರಿ ಸುಸ್ಥಿರ ಜೈವಿಕ ಇಂಧನಗಳ ಬಳಕೆ ಹಾಗೂ ಉತ್ಪಾದನೆಯನ್ನು ಉತ್ತೇಜಿಸುವುದು, ಅಂತಾರಾಷ್ಟ್ರೀಯ ಜೈವಿಕ ಇಂಧನ ವ್ಯಾಪಾರವನ್ನು ಸುಲಭಗೊಳಿಸುವುದು ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಡುವ ನಿಟ್ಟಿನಲ್ಲಿ ಈ ಎಲ್ಲ ದೇಶಗಳೂ ಶ್ರಮಿಸುವುದಾಗಿದೆ.
1. ಜೈವಿಕ ಇಂಧನವು ಪಳೆಯುಳಿಕೆ ಇಂಧನಗಳಿಗಿಂತ (ಪೆಟ್ರೋಲ್, ಡೀಸೆಲ್) ಕಡಿಮೆ ಇಂಗಾಲವನ್ನು ಹೊರಸೂಸುತ್ತದೆ. ಇದು 2070ರ ವೇಳೆಗೆ ‘ನೆಟ್ ಜೀರೋ’ ಇಂಗಾಲ ಹೊರಸೂಸುವಿಕೆಯ ಗುರಿಯನ್ನು ತಲುಪಲು ಭಾರತಕ್ಕೆ ಸಹಾಯ ಮಾಡುತ್ತದೆ.
2. ಕಬ್ಬು, ಮೆಕ್ಕೆಜೋಳ, ಮತ್ತು ಕೃಷಿ ತ್ಯಾಜ್ಯಗಳಿಂದ ಎಥೆನಾಲ್ ಉತ್ಪಾದಿಸುವುದರಿಂದ ರೈತರು ಬೆಳೆಯುವ ಈ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆ.
3. ದೇಶಾದ್ಯಂತ ಜೈವಿಕ ಇಂಧನ ಸಂಸ್ಕರಣಾಗಾರಗಳು ಮತ್ತು ಎಥೆನಾಲ್ ಘಟಕಗಳ ಸ್ಥಾಪನೆಯಿಂದ ಗ್ರಾಮೀಣ ಮಟ್ಟದಲ್ಲಿ ಹೊಸ ಉದ್ಯಮಗಳು ಮತ್ತು ಸಾವಿರಾರು ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ.
ಜರ್ಮನ್ ಅವಿಷ್ಕಾರಕ ಸರ್ ರುಡಲ್ಪ್ 1893ರಲ್ಲಿ ಡೀಸೆಲ್ ಕಡಲೆಬೀಜದ ಎಣ್ಣೆಯಲ್ಲಿ ಯಶಸ್ವಿಯಾಗಿ ಡೀಸೆಲ್ ಇಂಜಿನ್ ಚಾಲನೆ ಮಾಡಿದರು. ಈ ಆವಿಷ್ಕಾರದ ಹಿನ್ನೆಲೆಯಲ್ಲಿ ಆಗಸ್ಟ್ 10ನ್ನು ವಿಶ್ವ ಜೈವಿಕ ಇಂಧನ ದಿನವಾಗಿ ಆಚರಿಸಲಾಗುತ್ತಿದೆ. ಈ ಅವಿಷ್ಕಾರವು ಪಳಿಯುಳಿಕೆ ಇಂಧನಕ್ಕೆ ಸುರಕ್ಷಿತ ಸೃಷ್ಟಿ, ನವೀಕರಣ ಮತ್ತು ಸುಸ್ಥಿರ ಪರ್ಯಾಯ ಮಾರ್ಗವನ್ನು ತೆರೆಯಿತು.