ಚೆನ್ನೈಗೆ ಹಾರಿದ ರಾಹುಲ್‌ ಬಗ್ಗೆ ಬಿಜೆಪಿ ವ್ಯಂಗ್ಯ  
ದೇಶ

ಭಾನುವಾರವೂ ಇಷ್ಟೊಂದು ಕಷ್ಟದ ಕೆಲಸವೇಕೆ? ರಹಸ್ಯ ಪ್ರವಾಸಕ್ಕೆ ಹೋಗುವುದೇ ಓಕೆ! ಚೆನ್ನೈಗೆ ಹಾರಿದ ರಾಹುಲ್‌ ಬಗ್ಗೆ ಬಿಜೆಪಿ ವ್ಯಂಗ್ಯ | BJP Mocks Rahul

ನವದೆಹಲಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಬೆಂಬಲ ಸೂಚಿಸಿದ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇತರ ಇಂಡಿಯಾ ಒಕ್ಕೂಟದ ನಾಯಕರೊಂದಿಗೆ ಇಂದು (ಭಾನುವಾರ) ದಿಢೀರ್ ಚೆನ್ನೈಗೆ ಹಾರಿದ್ದಾರೆ. ರಾಹುಲ್ ಗಾಂಧಿ ದಿಢೀರ್ ಪ್ರವಾಸದ ಕುರಿತು ಬಿಜೆಪಿ ವ್ಯಂಗ್ಯವಾಡಿದ್ದು (BJP Mocks Rahul), ಭಾನುವಾರವೂ ಇಷ್ಟೊಂದು ಕಷ್ಟಪಟ್ಟು ಕೆಲಸ ಮಾಡುವ ಬದಲು ರಹಸ್ಯ ಪ್ರವಾಸಕ್ಕೆ ಹೋಗುವುದು ಉತ್ತಮ ಎಂದು ಲೇವಡಿ ಮಾಡಿದೆ.

ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ವಿಷಯದಲ್ಲಿ ಇಂಡಿಯಾ ಒಕ್ಕೂಟವು ಅಗ್ನಿಪರೀಕ್ಷೆಯನ್ನು ಎದುರಿಸುತ್ತಿರುವ ನಡುವೆಯೇ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರಂತಹ ಇತರ ಇಂಡಿಯಾ ಮೈತ್ರಿಕೂಟದ ನಾಯಕರು ಚೆನ್ನೈಗೆ ತಲುಪಿದ್ದಾರೆ.

ರಾಹುಲ್ ಗಾಂಧಿ ಅವರ ಭಾನುವಾರದ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ತುಹಿನ್ ಸಿನ್ಹಾ, ಭಾನುವಾರದಂದು ಇಷ್ಟೊಂದು ಕಷ್ಟಪಟ್ಟು ಕೆಲಸ ಮಾಡುವ ಬದಲು, ವಿರೋಧ ಪಕ್ಷದ ನಾಯಕರಿಗೆ ಮತ್ತೊಂದು ನಿಗೂಢ ರಜೆಯ ಪ್ರವಾಸಕ್ಕೆ ತೆರಳಿ, ಮಸೂದೆ ಅಂಗೀಕಾರವಾದ ನಂತರ ಹಿಂತಿರುಗುವುದೇ ಉತ್ತಮ ಆಯ್ಕೆಯಾಗಿದೆ. ಕಾಂಗ್ರೆಸ್ ಪಕ್ಷವು ಯುವಕರು ಮತ್ತು ಮಹಿಳೆಯರಿಗೆ ಇದಕ್ಕಿಂತ ಹೆಚ್ಚಿನ ದ್ರೋಹ ಮಾಡಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಡಿಎಂಕೆ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಶರದ್ ಬಣ) ಇಂಡಿಯಾ ಒಕ್ಕೂಟದ ವಿರುದ್ಧದ ನಿಲುವು ತಳೆದಿದ್ದು, ಎನ್‌ಡಿಎ ನೇತೃತ್ವದ ಪ್ರಸ್ತಾವಿತ ಸಂವಿಧಾನ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಲು ಸಮ್ಮತಿಸಿ ಸೂಚಿಸಿವೆ. ಈ ಮಸೂದೆಯು ಲೋಕಸಭೆಯ ಗರಿಷ್ಠ ಸದಸ್ಯ ಬಲವನ್ನು 850ಕ್ಕೆ ಹೆಚ್ಚಿಸಲು (ರಾಜ್ಯಗಳಿಂದ 815 ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35 ಸದಸ್ಯರು) ಉದ್ದೇಶಿಸಿದೆ. ಜೊತೆಗೆ ರಾಜ್ಯ ವಿಧಾನಸಭೆಗಳ ಗರಿಷ್ಠ ಮಿತಿಯನ್ನು 500 ರಿಂದ 650ಕ್ಕೆ ಏರಿಸಲು ಪ್ರಸ್ತಾಪಿಸಿದೆ.

2029ರ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಕಲ್ಪಿಸಲು ಈ ಚೌಕಟ್ಟು ದಾರಿ ಮಾಡಿಕೊಡುತ್ತದೆ ಮತ್ತು ವಿಶಾಲ ಸಂಸದೀಯ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಅಲ್ಲದೆ, ರಾಜ್ಯಗಳ ಪ್ರಸ್ತುತ ಪ್ರಾತಿನಿಧ್ಯದ ಪಾಲನ್ನು ಉಳಿಸಿಕೊಂಡೇ ಎಲ್ಲಾ ರಾಜ್ಯಗಳ ಸ್ಥಾನಗಳನ್ನು ಸಮಾನವಾಗಿ ಶೇ. 50 ರಷ್ಟು ಹೆಚ್ಚಿಸುವ ಮೂಲಕ ರಾಜ್ಯಗಳ ಆತಂಕಗಳನ್ನು ನಿವಾರಿಸಲು ಸರ್ಕಾರ ಪ್ರಯತ್ನಿಸಿದೆ.

ಹಿಂದೆ ಸರಿಯುವ ಮಾತೇ ಇಲ್ಲ 'ಬ್ರದರ್​' ಎಂದ ಸ್ಟಾಲಿನ್!

ಇದಕ್ಕೂ ಮುನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಎಂ ಕೆ ಸ್ಟಾಲಿನ್ ಅವರನ್ನು ಬ್ರದರ್​ ಸ್ಟಾಲಿನ್ ಎಂದು ಸಂಬೋಧಿಸಿದ್ದ ರಾಹುಲ್ ಗಾಂಧಿ, ಲೋಕಸಭೆಯನ್ನು 850 ಸ್ಥಾನಗಳಿಗೆ ವಿಸ್ತರಿಸುವುದರಿಂದ ಪ್ರಜಾಪ್ರಭುತ್ವಕ್ಕೆ ಹಾನಿಯಾಗುತ್ತದೆ ಮತ್ತು ಬಿಜೆಪಿ-ಆರ್‌ಎಸ್‌ಎಸ್‌ಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಚುನಾವಣಾ ನಕ್ಷೆಯನ್ನು ಮರುರೂಪಿಸಲು ಅವಕಾಶ ಸಿಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಟಾಲಿನ್, ತಮಿಳುನಾಡಿನ ಹಿತಾಸಕ್ತಿಗಳು ಯಾವಾಗಲೂ ನಮ್ಮ ಮೊದಲ ಆದ್ಯತೆಯಾಗಿರುತ್ತವೆ, ಆದ್ದರಿಂದ ಈಗಾಗಲೇ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಮಸೂದೆಯ ಕುರಿತು ಮಿತ್ರಪಕ್ಷಗಳ ನಡುವೆ ಉಂಟಾಗಿರುವ ಈ ಭಿನ್ನಮತವು ಸಂಸತ್ತಿನ ವಿಶೇಷ ಅಧಿವೇಶನದ ಮುನ್ನ ವಿರೋಧ ಪಕ್ಷಗಳ ಒಗ್ಗಟ್ಟನ್ನು ಪರೀಕ್ಷೆಗೆ ಒಡ್ಡಿದೆ, ಮುಂದಿನ ಎರಡು ದಿನಗಳಲ್ಲಿ ಏನಾಗಲಿದೆಯೋ ಕಾದು ನೋಡಬೇಕು(ಏಜೆನ್ಸೀಸ್​).