ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕೆಂಬ ಬಯಕೆಯಿಂದ ವಿದೇಶಗಳಲ್ಲಿ ಓದು ಮತ್ತು ಉದ್ಯೋಗದಲ್ಲಿ ತೊಡಗಿರುವ ಭಾರತೀಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಆದರೆ, ವಿದೇಶಗಳಲ್ಲಿ ಸೂಕ್ತ ಭದ್ರತೆ ಇಲ್ಲದೆ ಭಾರತೀಯ ವಿದ್ಯಾರ್ಥಿಗಳು ಮತ್ತು ಕಾರ್ವಿುಕರು ಸಾವಿಗೀಡಾಗುತ್ತಿರುವುದು ಕಳವಳದ ವಿಚಾರ. ಕಳೆದ ಐದು ವರ್ಷಗಳಲ್ಲೇ ವಿದೇಶಗಳಲ್ಲಿ ಕಾರ್ಯನಿರ್ವಹಿಸುವ 37,740 ಭಾರತೀಯರು ಮೃತಪಟ್ಟಿದ್ದಾರೆ ಎಂದು ಸರ್ಕಾರ ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದೆ. ಅಂದರೆ ದಿನಕ್ಕೆ ಸರಾಸರಿ 20 ಭಾರತೀಯರು ವಿದೇಶಿ ನೆಲದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದು ಗಂಭೀರ ಮಾನವೀಯ ಮತ್ತು ರಾಜತಾಂತ್ರಿಕ ಸವಾಲಾಗಿದೆ. ಯುಎಇಯಲ್ಲಿ 12,380, ಸೌದಿ ಅರೇಬಿಯಾದಲ್ಲಿ 11,757, ಕುವೈತ್ನಲ್ಲಿ 3,890, ಒಮನ್ನಲ್ಲಿ 2,821, ಮಲೇಷ್ಯಾದಲ್ಲಿ 1,915, ಕತಾರ್ನಲ್ಲಿ 1,760, ಅಮೆರಿಕದಲ್ಲಿ 454, ಸಿಂಗಾಪುರದಲ್ಲಿ 451, ನೈಜೀರಿಯಾದಲ್ಲಿ 210 ಮತ್ತು ಬ್ರಿಟನ್ನಲ್ಲಿ 188 ಭಾರತೀಯ ಉದ್ಯೋಗಿಗಳು ಕಳೆದ ಐದು ವರ್ಷಗಳಲ್ಲಿ ಮರಣ ಹೊಂದಿದ್ದಾರೆ.
ಗಲ್ಪ್ ರಾಷ್ಟ್ರಗಳಲ್ಲಿ ನಿರ್ಮಾಣ ವಲಯದಲ್ಲಿ ಕೆಲಸ ಮಾಡುವ ಕಾರ್ವಿುಕರು ವಿಪರೀತ ಶಾಖ ಮತ್ತು ಅಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದು ಹೃದಯಾಘಾತ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅಲ್ಲದೆ, ಕುಟುಂಬದಿಂದ ದೂರವಿರುವುದು, ಸಾಲದ ಹೊರೆ, ಮತ್ತು ಕೆಲಸದ ಸ್ಥಳದಲ್ಲಿ ಎದುರಾಗುವ ಕಿರುಕುಳದಿಂದಾಗಿ ಅನೇಕರು ಖಿನ್ನತೆಗೆ ಒಳಗಾಗುತ್ತಾರೆ. ಇದು ಆತ್ಮಹತ್ಯೆಗಳಂತಹ ದುರದೃಷ್ಟಕರ ನಿರ್ಧಾರಗಳಿಗೆ ದೂಡುತ್ತದೆ. ಅನೇಕ ಕಾರ್ವಿುಕರು ಅನಧಿಕೃತ ಏಜೆಂಟ್ಗಳ ಮೂಲಕ ವಿದೇಶಕ್ಕೆ ತೆರಳುತ್ತಾರೆ. ಅಲ್ಲಿನ ಕಾನೂನುಗಳು, ವಿಮೆ ಮತ್ತು ಕಾರ್ವಿುಕ ಹಕ್ಕುಗಳ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಕೆಲವು ದೇಶಗಳಲ್ಲಿ ಸಂಚಾರ ನಿಯಮಗಳ ಅರಿವಿಲ್ಲದೆ ಸಂಭವಿಸುವ ಅಪಘಾತಗಳು ಮತ್ತು ಇತ್ತೀಚಿನ ವರ್ಷಗಳಲ್ಲಿ ಕೆಲವು ಮುಂದುವರಿದ ದೇಶಗಳಲ್ಲಿ ಹೆಚ್ಚುತ್ತಿರುವ ‘ದ್ವೇಷದ ಅಪರಾಧಗಳು’ ಭಾರತೀಯರ ಸಾವಿಗೆ ಕಾರಣವಾಗುತ್ತಿರುವುದು ಶೋಚನೀಯ. ಕಡಿಮೆ ವೇತನ ಪಡೆಯುವ ಕಾರ್ವಿುಕರಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಸುಲಭವಾಗಿ ಲಭ್ಯವಿರುವುದಿಲ್ಲ, ಇದು ಸಣ್ಣ ಕಾಯಿಲೆಗಳೂ ಜೀವಕ್ಕೆ ಕಂಟಕವಾಗುವಂತೆ ಮಾಡುತ್ತದೆ.
ಈ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ಮತ್ತು ವೈಯಕ್ತಿಕ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ. ಕೇಂದ್ರ ಸರ್ಕಾರವು ವಲಸೆ ಪ್ರಕ್ರಿಯೆಯನ್ನು ಇನ್ನಷ್ಟು ಸುರಕ್ಷಿತಗೊಳಿಸಬೇಕು. ಮಾನ್ಯತೆ ಪಡೆದ ಏಜೆಂಟ್ಗಳ ಮೂಲಕವೇ ಜನರು ವಿದೇಶಕ್ಕೆ ಹೋಗುವಂತೆ ಉತ್ತೇಜಿಸಬೇಕು. ಭಾರತೀಯ ರಾಯಭಾರ ಕಚೇರಿಗಳು ವಿದೇಶಗಳಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆ ಹೆಚ್ಚು ಸಕ್ರಿಯವಾಗಿರಬೇಕು. ಸ್ಥಳೀಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ ಕಾರ್ವಿುಕರ ಕೆಲಸದ ಅವಧಿ ಮತ್ತು ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಬೇಕು. ರಾಯಭಾರ ಕಚೇರಿಗಳ ಮೂಲಕ 24/7 ಸಹಾಯವಾಣಿಗಳನ್ನು ಆರಂಭಿಸಿ, ಸಂಕಷ್ಟದಲ್ಲಿರುವವರಿಗೆ ಮಾನಸಿಕ ಸಮಾಲೋಚನೆ ಮತ್ತು ಕಾನೂನು ನೆರವು ನೀಡಬೇಕು.
ವಿದೇಶಕ್ಕೆ ಹೋಗುವ ಮುನ್ನ ಪ್ರತಿಯೊಬ್ಬರಿಗೂ ಸಮಗ್ರ ಜೀವ ವಿಮೆ ಮತ್ತು ಆರೋಗ್ಯ ವಿಮೆಯನ್ನು ಕಡ್ಡಾಯಗೊಳಿಸಬೇಕು. ಇದರಿಂದ ತುರ್ತು ಸಂದರ್ಭದಲ್ಲಿ ಆರ್ಥಿಕ ನೆರವು ಸಿಗುತ್ತದೆ. ಮುಖ್ಯವಾಗಿ, ವಿದೇಶಕ್ಕೆ ತೆರಳುವ ಮುನ್ನ ಅಲ್ಲಿನ ಕಾನೂನು, ಸಂಸ್ಕೃತಿ ಮತ್ತು ತುರ್ತು ಪರಿಸ್ಥಿತಿಯಲ್ಲಿ ಯಾರನ್ನು ಸಂರ್ಪಸಬೇಕು ಎಂಬ ಬಗ್ಗೆ ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನೂ ಹೆಚ್ಚಿಸಬೇಕು. ಓದು ಅಥವಾ ಉದ್ಯೋಗಕ್ಕೆ ವಿದೇಶಕ್ಕೆ ತೆರಳುವವರು, ಅದಕ್ಕೂ ಮುಂಚೆ ಆ ದೇಶದ ಭದ್ರತೆ, ಉದ್ಯೋಗದಾತರ ವಿಶ್ವಾಸಾರ್ಹತೆ ಮತ್ತು ಕಾನೂನುಬದ್ಧ ದಾಖಲೆಗಳ ಬಗ್ಗೆ ಪೂರ್ಣ ಮಾಹಿತಿ ಪಡೆಯುವುದು ಅತ್ಯಗತ್ಯ.