Prashant Kishor | ಪ್ರಶಾಂತ್ ಕಿಶೋರ್ (ಸಂಗ್ರಹ ಚಿತ್ರ)
ಪಟನಾ: ಇತ್ತೀಚಿನ ಬಿಹಾರ ಚುನಾವಣೆಯಲ್ಲಿ ಪಕ್ಷದ ಸೋಲು ದೊಡ್ಡ ಆಘಾತ ನೀಡಿದೆ ಎಂದಿರುವ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಫಲಿತಾಂಶ ಪ್ರಕಟವಾದಾಗಿನಿಂದ ಸರಿಯಾಗಿ ನಿದ್ದೆ ಮಾಡಿಲ್ಲ ಎಂದು ಹೇಳಿದರು.
ಎನ್ಡಿಟಿವಿಯೊಂದಿಗೆ ಮಾತನಾಡಿರುವ ಕಿಶೋರ್, ಬಿಹಾರದ ರಾಜಕಾರಣದಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.
ಜನ ಜಾತಿ, ಧರ್ಮ ಮೀರಿ ಯೋಚಿಸಿದ್ದಾರೆ
ಫಲಿತಾಂಶದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಕಿಶೋರ್, ಈ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಸಾಕಷ್ಟು ಪರಿಶ್ರಮಪಟ್ಟಿದ್ದು, ನಮ್ಮ ಪ್ರಯತ್ನ ಚುನಾವಣೆಯಲ್ಲಿ ಯಶಸ್ಸು ನೀಡದಿದ್ದರೂ, ಬಿಹಾರದಲ್ಲಿ ರಾಜಕೀಯ ಚರ್ಚೆಯನ್ನು ಜಾತಿ ಮತ್ತು ಧರ್ಮದಿಂದ ದೂರವಿಟ್ಟು ಉದ್ಯೋಗ ಮತ್ತು ವಲಸೆಯಂತಹ ವಿಷಯಗಳವರೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಮತ ನೀಡುವವರಲ್ಲಿ ನಾಲ್ಕು ಗುಂಪು
ಬಿಹಾರದ ಜನತೆ ನಾಲ್ಕು ದೃಷ್ಟಿಕೋನದಲ್ಲಿ ಮತ ಚಲಾಯಿಸಲಿದ್ದು, ಜಾತಿ,ಧರ್ಮ, ಲಾಲು ಯಾದವ್ ಕುಟುಂಬದ ಮರಳುವಿಕೆಯ ಆತಂಕ, ಬಿಜೆಪಿಗೆ ಹೆದರಿ ವಿರೋಧ ಪಕ್ಷಕ್ಕೆ ಮತ ಹಾಕುವವರು ಸೇರಿದ್ದಾರೆ ಎಂದರು. ಈ ಚುನಾವಣೆಯಲ್ಲಿ ನಮ್ಮ ಪಕ್ಷ ಮೊದಲ ಮತ್ತು ಎರಡನೇ ಗುಂಪುಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿದ್ದು, ಮೂರನೇ ಮತ್ತು ನಾಲ್ಕನೇ ಗುಂಪುಗಳ ಮೇಲೆ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಬಿಜೆಪಿಗೆ ಇದ್ದಿದ್ದು ಇಬ್ಬರೇ ಸಂಸದರು..
ಈ ಹಿಂದೆ ಬಿಜೆಪಿ ಕೂಡ ಕೇವಲ ಇಬ್ಬರು ಸಂಸದರನ್ನು ಹೊಂದಿತ್ತು. ಯಾರೇ ಆಗಲಿ ಹೊಸ ಪಕ್ಷ ಕಟ್ಟಿದಾಗ ಈ ರೀತಿಯ ಫಲಿತಾಂಶಗಳು ಬರವುದು ಸಹಜ. ನಾವು ಜಾತಿ ಮತ್ತು ಧರ್ಮದ ವಿಷವನ್ನು ಜನರಲ್ಲಿ ಹರಡಲಿಲ್ಲ. ನಾವು ನಮ್ಮ ಗೆಲುವಿಗಾಗಿ ಮತ್ತೆ ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ನಾನು ಬಿಹಾರದಲ್ಲಿ 10 ವರ್ಷಗಳನ್ನು ಮೀಸಲಿಟ್ಟಿದ್ದೇನೆ. ಈಗಾಗಲೇ ಸುಮಾರು ಮೂರುವರೆ ವರ್ಷಗಳು ಕಳೆದಿವೆ. ನಾನು ನನ್ನ ಯಶಸ್ಸನ್ನು ಹತ್ತನೇ ವರ್ಷಕ್ಕೆ ಸಾಧಿಸಬೇಕೆಂದು ಯೋಚಿಸಿರಲಿಲ್ಲ. ಮೂರು ವರ್ಷಗಳಲ್ಲಿ ನಮ್ಮ ಪ್ರಯತ್ನ ಕೈಗೂಡಬಹುದೆಂಬ ಭರವಸೆ ಇತ್ತು, ಅದು ಈಗ ವಿಫಲವಾಗಿದೆ, ನಮ್ಮ ಪ್ರಯತ್ನ ಮುಂದುವರೆಯುತ್ತದೆ ಎಂದರು(ಏಜೆನ್ಸೀಸ್).