ನವದೆಹಲಿ: ಮಹಿಳಾ ಮೀಸಲಾತಿ ಕಾಯ್ದೆ 2023ರ ತಿದ್ದುಪಡಿಗಳನ್ನು ಚರ್ಚಿಸಲು ಏ.16ರಿಂದ 18ರವರೆಗೆ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದ್ದು, ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಇಂದು(ಏ. 13) ದೆಹಲಿಯಲ್ಲಿ 'ನಾರಿ ಶಕ್ತಿ ವಂದನ ಸಮ್ಮೇಳನ'ವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ.
ಪ್ರಧಾನಿ ಮಾತನಾಡಲಿರುವ ಈ ಸಮ್ಮೇಳನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಆಯೋಜಿಸಿದ್ದು, ಪಂಚಾಯತ್‌ನಿಂದ ಸಂಸತ್ತಿನವರೆಗೆ-ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರು: ಹೊಸ ಭಾರತಕ್ಕಾಗಿ ಸಿದ್ಧತೆ ಎಂಬ ಘೋಷಣೆಯಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವ್ಯಾಪಾರ, ಶೈಕ್ಷಣಿಕ, ವಿಜ್ಞಾನ, ಮಾಧ್ಯಮ, ಸಾಮಾಜಿಕ ಕಾರ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಜಗತ್ತು ಸೇರಿದಂತೆ ವಿವಿಧ ಕ್ಷೇತ್ರಗಳ ಶ್ರೇಷ್ಠ ವ್ಯಕ್ತಿಗಳು ಮತ್ತು ಮಹಿಳಾ ಸಾಧಕರು ಭಾಗವಹಿಸಲಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ಕೆ ರಹತ್ಕರ್ ಉಪಸ್ಥಿತರಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಯಾದವ್ ಮತ್ತು ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಮಹಿಳೆಯರ ಜೊತೆ ಸಂವಾದ ನಡೆಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಕಚೇರಿ, ಭಾರತದ ಅಭಿವೃದ್ಧಿ ಪಥವನ್ನು ರೂಪಿಸುವಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಬಲಪಡಿಸಲು ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಇದು ಪಂಚಾಯತ್‌ಗಳಿಂದ ಸಂಸತ್ತಿನವರೆಗೆ ಎಲ್ಲಾ ಹಂತಗಳಲ್ಲಿ ಆಡಳಿತ ಮತ್ತು ನಾಯಕತ್ವದಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತದೆ. ಈ ಕಾರ್ಯಕ್ರಮವು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯದ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ಹೇಳಿದೆ.
2023 ಸೆಪ್ಟೆಂಬರ್ನಲ್ಲಿ ಸಂಸತ್ತು ನಾರಿ ಶಕ್ತಿ ವಂದನ ಅಧಿನಿಯಂ ಮಸೂದೆಯನ್ನು ಅಂಗೀಕರಿಸಿತು. ಇದು ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಕಾಯ್ದಿರಿಸಲು ಅವಕಾಶ ಮಾಡಿಕೊಡುತ್ತದೆ. ಅಸ್ತಿತ್ವದಲ್ಲಿರುವ ನಿಬಂಧನೆಗಳ ಅಡಿಯಲ್ಲಿ ಮೀಸಲು ಪುನರ್ವಿಂಗಡಣೆಯ ನಂತರ ಜಾರಿಗೆ ಬರುವುದಿಲ್ಲ, 2034ರವರೆಗೆ ಮಹಿಳಾ ಮೀಸಲಾತಿ ಅನುಷ್ಠಾನವನ್ನು ವಿಳಂಬಗೊಳಿಸುವ ಸಾಧ್ಯತೆಯಿದೆ. ಹೀಗಾಗಿ ಪ್ರಸ್ತಾವಿತ ತಿದ್ದುಪಡಿಗಳನ್ನು 2029ರ ಲೋಕಸಭಾ ಚುನಾವಣೆಗೆ ಕೋಟಾವನ್ನು ಕಾರ್ಯಗತಗೊಳಿಸಲು ಅನುಕೂಲವಾಗುವಂತೆ ಜಾರಿಗೆ ತರಲಾಗುತ್ತಿದೆ ಎನ್ನಲಾಗದೆ.
ಇನ್ನೂ ಕ್ಷೇತ್ರ ಪುನರ್ವಿಂಗಡಣೆ ಕಾಯ್ದೆಯೂ ಲೋಕಸಭೆ ಸ್ಥಾನಗಳ ಸಂಖ್ಯೆಯನ್ನು 816ಕ್ಕೆ ಹೆಚ್ಚಿಸುತ್ತದೆ. ಅದರಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಮೂಲಕ 273 ಸ್ಥಾನಗಳನ್ನು ಮಹಿಳೆಯರಿಗೆ ಸಿಗಲಿವೆ (ಏಜೆನ್ಸೀಸ್).