Women Rights 
ದೇಶ

Women Rights: ಪತ್ನಿಯನ್ನ ಅಡುಗೆ ಮನೆಗೆ ಸೇರಿಸದಿದ್ದರೆ ಅದು ಕ್ರೌರ್ಯ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು!

ಪ್ರಮುಖ ಮುಖ್ಯಾಂಶಗಳು

  • ಆಕೆಯ ಘನತೆಗೆ ಧಕ್ಕೆ ತರುವ 'ಮಾನಸಿಕ ಹಿಂಸೆ' ಎಂದು ಬಾಂಬೆ ಹೈಕೋರ್ಟ್ ಗುರವಾರ ಐತಿಹಾಸಿಕ ತೀರ್ಪು ನೀಡಿದೆ.
  • ಅಡುಗೆ ಮಾಡುವ ಹಕ್ಕನ್ನು ಕಿತ್ತುಕೊಳ್ಳುವುದು ಹಿಂಸೆ!
  • ಸೆಕ್ಷನ್ 498-A ಉದ್ದೇಶವನ್ನು ನೆನಪಿಸಿದ ಕೋರ್ಟ್
ಮುಂಬೈ: ವಿವಾಹಿತ ಮಹಿಳೆಯನ್ನು ಆಕೆಯ ಪತಿಯ ಮನೆಯ ಅಡುಗೆ ಮನೆಗೆ ಪ್ರವೇಶಿಸದಂತೆ(Women Rights) ತಡೆಯುವುದು ಕ್ರೌರ್ಯ, ಅದು ಆಕೆಯ ಘನತೆಗೆ ಧಕ್ಕೆ ತರುವ 'ಮಾನಸಿಕ ಹಿಂಸೆ' ಎಂದು ಬಾಂಬೆ ಹೈಕೋರ್ಟ್ ಗುರವಾರ ಐತಿಹಾಸಿಕ ತೀರ್ಪು ನೀಡಿದೆ.
ಪತ್ನಿ ದಾಖಲಿಸಿದ್ದ ಕ್ರೌರ್ಯದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಪತಿಯ ನಡವಳಿಕೆಯನ್ನು ಕಟುವಾಗಿ ಟೀಕಿಸಿದೆ.

ಪ್ರಕರಣದ ಹಿನ್ನೆಲೆ ಏನು?

ನಾಗಪುರ ಪೀಠದ ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಅವರಿದ್ದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. 2022ರ ನವೆಂಬರ್‌ನಲ್ಲಿ ವಿವಾಹವಾಗಿದ್ದ ದಂಪತಿಗಳ ನಡುವೆ ಮದುವೆಯಾದ ಕೆಲವೇ ದಿನಗಳಲ್ಲಿ ಬಿರುಕು ಮೂಡಿತ್ತು. ಪತ್ನಿಯ ಆರೋಪದ ಪ್ರಕಾರ, ಆಕೆಯನ್ನು ಮನೆಯಲ್ಲಿ ಒಬ್ಬ ಅಧೀನ ವ್ಯಕ್ತಿಯಂತೆ(ಬೇರೆಯವರಂತೆ) (Subordinate) ನಡೆಸಿಕೊಳ್ಳಲಾಗುತ್ತಿತ್ತು ಮತ್ತು ಆಕೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿತ್ತು.

ಅಡುಗೆ ಮಾಡುವ ಹಕ್ಕನ್ನು ಕಿತ್ತುಕೊಳ್ಳುವುದು ಹಿಂಸೆ!

ಮಹಿಳೆಯು ತನ್ನ ದೂರಿನಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದರು. "ನನ್ನನ್ನು ಅಡುಗೆ ಮನೆಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು. ಮನೆಯಲ್ಲಿ ಅಡುಗೆ ಮಾಡುವ ಹಕ್ಕನ್ನು ಕಿತ್ತುಕೊಂಡು, ಹೊರಗಿನಿಂದ ಆಹಾರ ತರಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ, ನನ್ನ ಆಭರಣಗಳನ್ನು ಮನೆಯಿಂದ ಹೊರಗೆ ಎಸೆಯಲಾಗಿತ್ತು. ತವರು ಮನೆಗೆ ಹೋಗದಂತೆ ಅಡ್ಡಿಪಡಿಸಿ, ವಿಚ್ಛೇದನಕ್ಕಾಗಿ ನಿರಂತರ ಒತ್ತಡ ಹೇರಲಾಗುತ್ತಿತ್ತು" ಎಂದು ಮಹಿಳೆ ಅಳಲು ತೋಡಿಕೊಂಡಿದ್ದರು.
ಈ ವಾದವನ್ನು ಆಲಿಸಿದ ನ್ಯಾಯಾಲಯ, "ಮನೆಯಲ್ಲಿ ಪತ್ನಿಗೆ ಮೂಲಭೂತ ಸೌಕರ್ಯಗಳನ್ನು ನಿರಾಕರಿಸುವುದು, ಆಕೆಯ ಸಂಚಾರವನ್ನು ನಿರ್ಬಂಧಿಸುವುದು ಮತ್ತು ನಿರಂತರ ಕಿರುಕುಳ ನೀಡುವುದು ಮಾನಸಿಕ ಕ್ರೌರ್ಯದ ಸ್ಪಷ್ಟ ಉದಾಹರಣೆಗಳಾಗಿವೆ" ಎಂದು ಅಭಿಪ್ರಾಯಪಟ್ಟಿದೆ.

ಸೆಕ್ಷನ್ 498-A ಉದ್ದೇಶವನ್ನು ನೆನಪಿಸಿದ ಕೋರ್ಟ್

ಭಾರತೀಯ ದಂಡ ಸಂಹಿತೆಯ (IPC) ಅಧ್ಯಾಯ XXA ಅಡಿಯಲ್ಲಿ ಸೆಕ್ಷನ್ 498-A ಅನ್ನು ಸೇರಿಸಿರುವ ಮೂಲ ಉದ್ದೇಶವೇ ಪತಿ ಅಥವಾ ಆತನ ಸಂಬಂಧಿಕರಿಂದ ಮಹಿಳೆಗೆ ಆಗುವ ಕಿರುಕುಳ ಮತ್ತು ಹಿಂಸೆಯನ್ನು ತಡೆಯುವುದಾಗಿದೆ ಎಂದು ನ್ಯಾಯಾಲಯ ನೆನಪಿಸಿಕೊಟ್ಟಿತು. ಪತಿಯ ಪರ ವಕೀಲರು ಇದು ವಿಚ್ಛೇದನ ಅರ್ಜಿಗೆ ಪ್ರತಿಯಾಗಿ ನೀಡಿದ ದೂರು ಎಂದು ವಾದಿಸಿದರೂ, ನ್ಯಾಯಾಲಯವು ಪತಿಯ ಮೇಲಿನ ಕ್ರೌರ್ಯದ ಆರೋಪಗಳನ್ನು ರದ್ದುಗೊಳಿಸಲು ನಿರಾಕರಿಸಿತು.

ಅತ್ತೆಯ ಮೇಲಿನ ಆರೋಪ ರದ್ದು

ಇದೇ ವೇಳೆ ನ್ಯಾಯಾಲಯವು ಒಂದು ಪ್ರಮುಖ ಸ್ಪಷ್ಟನೆ ನೀಡಿದೆ. ಪತ್ನಿಯು ತನ್ನ ಅತ್ತೆಯ ವಿರುದ್ಧವೂ ಕಿರುಕುಳದ ಆರೋಪ ಮಾಡಿದ್ದರು. ಆದರೆ, ಈ ಆರೋಪಗಳು ಅಸ್ಪಷ್ಟವಾಗಿವೆ ಎಂದು ನ್ಯಾಯಾಲಯ ಹೇಳಿದೆ. "ಕೇವಲ ಪತಿಯ ತಾಯಿ ಎಂಬ ಕಾರಣಕ್ಕೆ ಯಾರನ್ನೂ ಆರೋಪಿಯನ್ನಾಗಿ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ ಪೀಠವು, ಅತ್ತೆಯ ವಿರುದ್ಧದ ದೂರುಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ,(ಏಜೆನ್ಸೀಸ್​).