Viral Video: ಡಿಜಿಟಲ್ ಯುಗದಲ್ಲಿ ಈಗ ಎಲ್ಲವೂ ಆಯೋಮಯ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಇರುವ ಒಂದಷ್ಟು ಮಂದಿ, ಹೆಚ್ಚು ಲೈಕ್ಸ್ ಮತ್ತು ವೀಕ್ಷಣೆಗಾಗಿ ಎಷ್ಟು ಕೀಳು ಮಟ್ಟಕ್ಕೆ ಬೇಕಾದರೂ ಹೋಗಲು ಮುಂದಾಗಿದ್ದಾರೆ, ತಮಗೆ ಬೇಕಿರುವ ವೀವ್ಸ್, ಫಾಲೋವರ್ಸ್ಗಾಗಿ ಯಾರ ಪ್ರಾಣವನ್ನಾದರೂ ಬಲಿ ಕೊಡಲು ಹಿಂದೆ ಮುಂದೆ ಯೋಚಿಸದ ಕ್ರೂರ ಮನಸ್ಥಿತಿಯಲ್ಲಿದ್ದಾರೆ ಎಂಬುದಕ್ಕೆ ಇಲ್ಲೊಂದು ವೈರಲ್ ವಿಡಿಯೋ ಜ್ವಲಂತ ಸಾಕ್ಷಿ.
ಕೆಲವು ದಿನಗಳಿಂದ ವೈರಲ್ ವಿಡಿಯೋದಲ್ಲಿ, ಬಸ್ನಲ್ಲಿ ಪ್ರಯಾಣಿಸುತ್ತಿರುವ ಯುವತಿಯೊಬ್ಬಳು, ಮುಂದಿರುವ ಹಿರಿಯ ಪುರುಷ ವ್ಯಕ್ತಿಯೊಬ್ಬರು ತನ್ನ ದೇಹದ ಭಾಗವನ್ನು ಮುಟ್ಟುತ್ತಿದ್ದಾನೆ ಎಂಬ ಅರ್ಥದಲ್ಲಿ ರೆಕಾರ್ಡ್ ಮಾಡಿಕೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ. ಈ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗುತ್ತಿದ್ದಂತೆ ಇದೀಗ ನೆಟ್ಟಿಗರು ಯುವತಿಯ ಅಸಭ್ಯ ವರ್ತನೆಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಯುವತಿ ಹಂಚಿಕೊಂಡಿರುವ ವಿಡಿಯೋವನ್ನು ಸೂಕ್ಷ್ಮವಾಗಿ ನೋಡಿರುವ ಬಹುತೇಕರು ಆಕೆಯ ವಿರುದ್ಧ ಸಿಡಿದೆದ್ದಿದ್ದಾರೆ. ಇದೆಲ್ಲವೂ ಯುವತಿಯ ರೀಲ್ಸ್ ಮೋಹ ಮತ್ತು ವೀವ್ಸ್, ಲೈಕ್ಸ್ಗಾಗಿ ಮಾಡಿಕೊಂಡಿರುವುದು ಎಂದು ತೀವ್ರವಾಗಿ ಟೀಕಿಸಿದ್ದಾರೆ. ನಿಮ್ಮ ಲೈಕ್ಸ್ ಮತ್ತು ವೀವ್ಸ್ ಹುಚ್ಚಿಗಾಗಿ ಸಹ ಪ್ರಯಾಣಿಕನ ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವುದು ಎಷ್ಟು ಸರಿ? ಇಂತಹ ಕೃತ್ಯಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಈ ವರ್ಷದ ಆರಂಭದಲ್ಲಿ, ಕೇರಳ ಮೂಲದ ದೀಪಕ್ ಸಾವು ಪ್ರಕರಣ ಇಡೀ ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ್ದು ಬಹುತೇಕರಿಗೆ ಗೊತ್ತಿದೆ. ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್ ಸಾವಿಗೆ ಶರಣಾದನು. ತನ್ನ ವೀವ್ಸ್ ಹುಚ್ಚಿಗೆ ಮಾನವೀಯತೆಯನ್ನು ಮರೆತು ವರ್ತಿಸಿದ ಆರೋಪಿ ಶಿಮ್ಜಿತಾ ಮುಸ್ತಫಾ ವಿರುದ್ಧ ದೇಶಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾಯಿತು.
ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಶಿಮ್ಜಿತಾ, ತನಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಅಸಭ್ಯಕರವಾಗಿ ಮುಟ್ಟುತ್ತಿದ್ದಾನೆ ಎಂದು ವಿಡಿಯೋ ಮಾಡಿ, ಸುಳ್ಳು ಸಂದೇಶವನ್ನು ಸಾರಿದಳು. ಈ ವಿಡಿಯೋ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿ, ವ್ಯಕ್ತಿಗೆ ಅಲ್ಲೇ ಹಿಗ್ಗಾಮುಗ್ಗಾ ಥಳಿಸಬೇಕಿತ್ತು ಎಂಬ ಕಮೆಂಟ್ಗಳಿಂದ ತುಂಬಿತು. ಸಾಕಷ್ಟು ಜನರು, ಆತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕಿತ್ತು ಎಂದೆಲ್ಲ ಆಕ್ರೋಶ ಹೊರಹಾಕಿದರು. ತನ್ನದೇನು ತಪ್ಪಿಲ್ಲದಿದ್ದರೂ ಸುಖಾಸುಮ್ಮನೆ ನನ್ನನ್ನು ವಿಡಿಯೋದಲ್ಲಿ ತೋರಿಸಿ, ಮಾನ-ಮರ್ಯಾದೆ ಕಳೆದಳು ಎಂದು ದೀಪಕ್, ಮನನೊಂದು ಆತ್ಮಹತ್ಯೆಗೆ ಶರಣಾದರು.