Vasundhara Raje | ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ
ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಇತ್ತೀಚೆಗೆ ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳಾ ಸಬಲೀಕರಣ ಮತ್ತು ರಾಜಕೀಯದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ್ದು, ಮುಖ್ಯವಾಹಿನಿಯ ರಾಜಕೀಯದಲ್ಲಿ ಮಹಿಳೆಯರು ತಮ್ಮನ್ನು ತಾವು ಗುರುತಿಸಿಕೊಳ್ಳಲು ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಶ್ರಮಿಸಬೇಕು ಎಂದಿದ್ದಾರೆ.
ಬಿಜೆಪಿ ನಾಯಕಿಯ ಈ ಹೇಳಿಕೆ ದೇಶಾದ್ಯಂತ ಸಂಚಲನ ಮೂಡಿಸಿದ್ದು, ರಾಜಕೀಯದಲ್ಲಿ ಲಿಂಗ ತಾರತಮ್ಯದ ಕುರಿತಾದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಸ್ವಾತಂತ್ರ್ಯದ ಸಮಯದಲ್ಲಿ ಭಾರತದಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. 9 ರಷ್ಟಿತ್ತು, ಇಂದು ಅದು ಶೇ. 65 ರಷ್ಟಿದೆ. ದೇಶದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸುವ ಮಹಿಳೆಯರ ಸಂಖ್ಯೆ ಶೇ. 10 ರಷ್ಟಿದ್ದರೆ, 1957 ರಲ್ಲಿ ಅದು ಕೇವಲ ಶೇ. 3 ರಷ್ಟಿತ್ತು ಎಂದಿದ್ದು, ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗಿದ್ದರೂ ಈ ಬೆಳವಣಿಗೆ ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಸಂಖ್ಯೆ 22 ರಷ್ಟಿತ್ತು, ಇಂದು ಅದು 74 ಆಗಿದೆ. ರಾಜ್ಯಸಭೆಯಲ್ಲಿ, 1952 ರಲ್ಲಿ ಮಹಿಳಾ ಸದಸ್ಯರ ಸಂಖ್ಯೆ 15 ರಷ್ಟಿತ್ತು, ಮತ್ತು ಇಂದು ಅದು 42 ಕ್ಕೆ ಏರಿದೆ. ಆದರೆ ಈ ಸಂಖ್ಯೆ ಸಾಕಾಗುವುದಿಲ್ಲ. ಈ ಸಂಖ್ಯೆ ಪುರುಷರ ಸಂಖ್ಯೆಗೆ ಸಮನಾಗಿರಬೇಕು ಎಂದು ಹೇಳಿದರು.
ಶಿಕ್ಷಣವೇ ಸಬಲೀಕರಣದ ಕೀಲಿ ಕೈ
ಶಿಕ್ಷಣದ ಮಹತ್ವವನ್ನು ಬಲವಾಗಿ ಪ್ರತಿಪಾದಿಸಿದ ವಸುಂಧರಾ ರಾಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಉಲ್ಲೇಖಿಸುತ್ತಾ, ಒಬ್ಬ ಮಹಿಳೆ ಉನ್ನತ ಶಿಕ್ಷಣ ಪಡೆದಾಗ ಆಕೆ ಎಂತಹ ಉನ್ನತ ಸ್ಥಾನವನ್ನಾದರೂ ಅಲಂಕರಿಸಬಲ್ಲಳು, ಶಿಕ್ಷಣವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಮತ್ತು ಸಮಾಜದ ಕಟ್ಟುಪಾಡುಗಳನ್ನು ಮೀರಿ ನಿಲ್ಲುವ ಶಕ್ತಿಯನ್ನು ನೀಡುತ್ತದೆ ಎಂದರು.
ವಸುಂಧರಾ ರಾಜೆ ರಾಜಸ್ಥಾನದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಎರಡು ಅವಧಿಗಳನ್ನು ಪೂರೈಸಿದ್ದು, ಅವರು ಸಿಂಧಿಯಾ ರಾಜಮನೆತನದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. 2023 ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶದ ಬಳಿಕ ಅವರು ಮೂರನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಊಹಿಸಲಾಗಿತ್ತು, ಆದರೆ ಅವರ ಬದಲು ಭಜನ್‌ಲಾಲ್ ಶರ್ಮಾರಿಗೆ ಪಕ್ಷ ಅವಕಾಶ ನೀಡಿತು(ಏಜೆನ್ಸೀಸ್).