ಓಪನ್ ರೋಡ್‌ನಲ್ಲಿ ಮಹಿಳೆಯ ಮೇಲೆ ಹಲ್ಲೆ,
ನವದೆಹಲಿ: ದೆಹಲಿಯ ಜನನಿಬಿಡ ರಸ್ತೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ (Women Beaten in Dehli) ಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಜಧಾನಿಯ ವಿಕಾಸಪುರಿ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಈ ದೃಶ್ಯಗಳು ಈಗ ನೆಟ್ಟಿಗರ ಕೆಂಗಣ್ಣೆಗೆ ಗುರಿಯಾಗಿದೆ.
ಮಹಿಳೆ ಮೇಲೆ ಹಲ್ಲೆ!
ವಾಹನಗಳ ಓಡಾಟದಿಂದ ಸದಾ ಗದ್ದಲದಿಂದ ಕೂಡಿರುವ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವುದು ಈ ವಿಡಿಯೋದಲ್ಲಿದೆ. ಚಲಿಸುತ್ತಿರುವ ವಾಹನಗಳ ಪಕ್ಕದಲ್ಲೇ ಈ ಗಲಾಟೆ ನಡೆಯುತ್ತಿದ್ದರೂ, ಆ ವ್ಯಕ್ತಿ ಯಾವುದಕ್ಕೂ ತಗ್ಗದೆ ಮಹಿಳೆ ಮೇಲೆ ನಿರಂತರವಾಗಿ ಹಲ್ಲೆ ಮಾಡಿರುವುದನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.
ರಸ್ತೆ ಮಧ್ಯೆ ನಡೆಯುತ್ತಿದ್ದ ಈ ಘರ್ಷಣೆಯಿಂದಾಗಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರಿಗೂ ತೊಂದರೆ ಉಂಟಾಗಿದೆ. ಆದರೆ, ರಸ್ತೆ ಮಧ್ಯೆ ಈ ಅನಾಚಾರ ನಡೆಯುತ್ತಿದ್ದರೂ, ನೆರೆಹೊರೆಯವರು ಅಥವಾ ದಾರಿಹೋಕರು ಮುಂದೆ ಬಂದು ತಡೆಯಲು ಮುಂದಾಗದಿರುವುದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಕೆಲ ಕಾಲದ ಬಳಿಕ ದಾರಿಹೋಕನೊಬ್ಬ ಆ ಜೋಡಿಯನ್ನು ಸಮೀಪಿಸಿ ತಡೆಯಲು ಪ್ರಯತ್ನ ನಡೆಸಿದರೂ, ಆ ವ್ಯಕ್ತಿ, ಯುವತಿಗೆ ಮನಬಂದಂತೆ ಥಳಿಸಿದ್ದಾನೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆ ವ್ಯಕ್ತಿ ಹಾಗೂ ದೆಹಲಿ ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ. ಸಾವಿರಾರು ಜನ-ವಾಹನ ಓಡಾಡುವ ರಸ್ತೆಯಲ್ಲಿ ಮಹಿಳೆಯೊಬ್ಬಳಿಗೆ ಮನಬಂದಂತೆ ಹೊಡೆಯುತ್ತಿದ್ದರೂ, ತಪ್ಪಿಸಲು ಯಾರು ಮುಂದಾಗದಿರುವುದು ನಾಚಿಕೆ ಸಂಗತಿಯಾಗಿದೆ ಎಂದು ಒಬ್ಬ ಬಳಕೆದಾರ ಆಕ್ರೋಶ ಹೊರ ಹಾಕಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತಾ ಮಟ್ಟ ಎಷ್ಟು ಕನಿಷ್ಟ ಮಟ್ಟದಲ್ಲಿದೆ ಎಂದು ಈ ಘಟನೆ ಇನ್ನೊಮ್ಮೆ ಸಾಬೀತು ಪಡಿಸಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಆ ವ್ಯಕ್ತಿ ಅಷ್ಟು ಸಮಯದಿಂದ ಹಲ್ಲೆ ನಡೆಸುತ್ತಿದ್ದರೂ ಪೊಲೀಸರು ಏಕೆ ಸ್ಥಳಕ್ಕೆ ದಾವಿಸಿಲ್ಲ, ದೆಹಲಿ ಪೊಲೀಸರು ದೀರ್ಘ ನಿದ್ರೆಯಲ್ಲಿದ್ದಾರೆಂದು ಮತ್ತೊಬ್ಬರು ಕಿಡಿ ಕಾರಿದ್ದಾರೆ, (ಏಜನ್ಸೀಸ್).