Narendra Modi | ಪ್ರಧಾನಿ ನರೇಂದ್ರ ಮೋದಿ 
ದೇಶ

ಪಂಚಾಯತ್ ಆಯ್ತು, ಈಗ ಸಂಸತ್ತಿನ ಸರದಿ; ಮಹಿಳಾ ಕೋಟಾ ಮಸೂದೆಗೆ ವಿರೋಧ ವ್ಯಕ್ತಪಡಿಸುವವರನ್ನು ದೇಶ ಕ್ಷಮಿಸಲ್ಲ ಎಂದ ಪ್ರಧಾನಿ ಮೋದಿ! | Narendra Modi

ನವದೆಹಲಿ: ಭಾರತದ ಶಾಸಕಾಂಗ ಇತಿಹಾಸದಲ್ಲಿ ಗುರುವಾರ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದ್ದು, ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಈ ಶಾಸನದ ಮೂಲಕ ದೇಶವು ಹೊಸ ದಿಕ್ಕನ್ನು ಪಡೆದುಕೊಳ್ಳಲಿದ್ದು, ಇದು ಕೇವಲ ಕಾನೂನಲ್ಲ, ಬದಲಾಗಿ ದೇಶದ ಸಂಸದೀಯ ಇತಿಹಾಸದ ಒಂದು ನಿರ್ಣಾಯಕ ಕ್ಷಣವಾಗಿದೆ ಎಂದು ಬಣ್ಣಿಸಿದರು.

ಐತಿಹಾಸಿಕ ತಪ್ಪಿನ ತಿದ್ದುಪಡಿ..

ಸುಮಾರು 3 ದಶಕಗಳ ಹಿಂದೆಯೇ ಅಂಗೀಕಾರಗೊಳ್ಳಬೇಕಿದ್ದ ಈ ಮಸೂದೆಯನ್ನು ಮಂಡಿಸುವ ಅವಕಾಶ ತಮ್ಮ ಸರ್ಕಾರಕ್ಕೆ ಸಿಕ್ಕಿರುವುದು ವಿಶೇಷ ಸವಲತ್ತು ಎಂದು ಭಾವಿಸಿರುವ ಪ್ರಧಾನಿ ಮೋದಿ, ಈ ಸಂದರ್ಭದಲ್ಲಿ ತಮ್ಮ ಹಿನ್ನೆಲೆಯ ಬಗ್ಗೆ ಮೆಲುಕು ಹಾಕಿದರು.
ನಾನು ಅತ್ಯಂತ ಹಿಂದುಳಿದ ಸಮುದಾಯದಿಂದ ಬಂದವನು, ಸಮಾಜದ ಪ್ರತಿಯೊಂದು ವರ್ಗವನ್ನು ಮುನ್ನಡೆಸುವುದು ನನ್ನ ಜವಾಬ್ದಾರಿ, ಮಹಿಳೆಯರು ಇಂದು ಪಂಚಾಯತ್‌ನಿಂದ ಸಂಸತ್ತಿನವರೆಗೆ ತಮ್ಮ ಧ್ವನಿ ಕೇಳಿಸಲು ಸಿದ್ಧರಿದ್ದಾರೆ ಎಂದು ಭಾವನಾತ್ಮಕವಾಗಿ ಮಾತನಾಡಿದ ಮೋದಿ, ದೇಶಕ್ಕೆ ರಾಜಕೀಯ ಪ್ರಾತಿನಿಧ್ಯದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ಪ್ರತಿಪಕ್ಷಗಳಿಗೆ ಎಚ್ಚರಿಕೆ ಮತ್ತು ಸಲಹೆ...

ಮಹಿಳಾ ಮೀಸಲಾತಿಯನ್ನು ರಾಜಕೀಯಗೊಳಿಸಲು ಪ್ರಯತ್ನಿಸುವ ಪಕ್ಷಗಳಿಗೆ ನೇರ ಎಚ್ಚರಿಕೆ ನೀಡಿದ ಪ್ರಧಾನಿ, ಈ ಮಸೂದೆಯನ್ನು ವಿರೋಧಿಸುವವರನ್ನು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇದನ್ನು ಬೆಂಬಲಿಸಿದರೆ ನೀವು ರಾಜಕೀಯ ನಷ್ಟದಿಂದ ಪಾರಾಗುತ್ತೀರಿ. ಇದನ್ನು ರಾಜಕೀಯ ತಕ್ಕಡಿಯಲ್ಲಿ ತೂಗಬೇಡಿ, ಇದು ನನ್ನ ಸ್ನೇಹಪರ ಸಲಹೆ ಎಂದು ಹೇಳಿದರು. ಕಳೆದ ಮೂರು ದಶಕಗಳಿಂದ ಮಸೂದೆಯನ್ನು ತಡೆಹಿಡಿದವರು ಈಗ ತಮ್ಮ ಸಾಧನೆಯನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎನ್ನುತ್ತಾ, ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಮಸೂದೆಯ ಸುಗಮ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ವಿಕಸಿತ ಭಾರತದ ದೃಷ್ಟಿಕೋನ

ವಿಕಸಿತ ಭಾರತ ಎಂದರೆ ಕೇವಲ ಮೂಲಸೌಕರ್ಯ ಅಥವಾ ಆರ್ಥಿಕ ಪ್ರಗತಿಯಲ್ಲ, ಬದಲಾಗಿ ನೀತಿ ನಿರೂಪಣೆಯಲ್ಲಿ ಶೇ. 50 ರಷ್ಟಿರುವ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವುದು ಎಂದು ಅಭಿಪ್ರಾಯಪಟ್ಟಿರುವ ಪ್ರಧಾನಿ ಮೋದಿ, ಪಂಚಾಯತ್ ಮಟ್ಟದಿಂದ ಬಂದ ಲಕ್ಷಾಂತರ ಮಹಿಳೆಯರು ಈಗ ಬರೀ ಶಾಂತವಾಗಿ ನೋಡುತ್ತಾ ಕಾಲ ಕಳೆಯುತ್ತಿಲ್ಲ, ಬದಲಾಗಿ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಈ ಮಸೂದೆಯ ಪರ ಅಥವಾ ವಿರುದ್ಧ ನಿಲ್ಲುವವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.

ರಾಜಕೀಯ ಲಾಭದ ಉದ್ದೇಶವಿಲ್ಲ...

ಈ ಮಸೂದೆಯ ಶ್ರೇಯಸ್ಸು ತಮಗಾಗಲಿ ಅಥವಾ ಬಿಜೆಪಿಗಾಗಲಿ ಸಲ್ಲಬೇಕಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದು, ನಾನು ವಿರೋಧ ಪಕ್ಷಗಳಿಗೆ ಕ್ರೆಡಿಟ್‌ನ ಬ್ಲ್ಯಾಂಕ್​ ಚೆಕ್ ನೀಡಲು ಸಿದ್ಧನಿದ್ದೇನೆ. ನಮಗೆ ಶ್ರೇಯಸ್ಸು ಬೇಡ, ಮಹಿಳೆಯರ ಹಕ್ಕು ಮುಖ್ಯ. ಉದ್ದೇಶಗಳು ಶುದ್ಧವಾಗಿರಬೇಕು. ನಾನು ಮಾತುಗಳೊಂದಿಗೆ ಆಟವಾಡುವುದಿಲ್ಲ, ನನ್ನ ಉದ್ದೇಶಗಳು ಸ್ಪಷ್ಟವಾಗಿವೆ ಎಂದು ಹೇಳಿದರು. ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಯಲ್ಲಿ ಯಾವುದೇ ರಾಜ್ಯದ ವಿರುದ್ಧ ತಾರತಮ್ಯ ಮಾಡುವುದಿಲ್ಲ ಅಥವಾ ಯಾವುದೇ ರಾಜ್ಯದ ಪ್ರಾತಿನಿಧ್ಯದ ಅನುಪಾತಕ್ಕೆ ಧಕ್ಕೆ ತರುವುದಿಲ್ಲ ಎಂಬ ಭರವಸೆ ನೀಡಿದರು.

ವಿಪಕ್ಷಗಳ ಗೊಂದಲಕ್ಕೆ ಇಲ್ಲಿದೆ ಉತ್ತರ

ವಿರೋಧ ಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ ಮತ್ತು ತಾಂತ್ರಿಕ ನೆಪಗಳ ಹಿಂದೆ ಅಡಗಿಕೊಂಡಿವೆ ಎಂದು ಪ್ರಧಾನಿ ಆರೋಪಿಸಿದ್ದು, ನಾವು ಮಹಿಳೆಯರಿಗೆ ಉಪಕಾರ ಮಾಡುತ್ತಿದ್ದೇವೆ ಎಂದು ಭಾವಿಸಬಾರದು. ನಾವು ಕೇವಲ ಐತಿಹಾಸಿಕ ತಪ್ಪನ್ನು ಸರಿಪಡಿಸುತ್ತಿದ್ದೇವೆ. ವಿರೋಧ ಪಕ್ಷವು ಮೂರು ದಶಕಗಳಿಂದ ಈ ಮಸೂದೆಯನ್ನು ತಡೆಹಿಡಿದಿದೆ. ಸಂಸತ್ತಿನಲ್ಲಿ ಮಹಿಳೆಯರ ಧ್ವನಿಗಳು ಹೊಸ ಚಿಂತನೆಯನ್ನು ಸೃಷ್ಟಿಸುತ್ತವೆ. ಇದು ಭಾರತದ ಬದ್ಧತೆ ಎಂದರು(ಏಜೆನ್ಸೀಸ್​).