Amulya Sharma (ಚಿತ್ರ Instagram) 
ದೇಶ

6 ವರ್ಷಗಳ ನರಕಕ್ಕೆ ಅಂತ್ಯ: ಸೈಬರ್ ಕಿರುಕುಳಕೋರನ ಜೈಲಿಗಟ್ಟಿದ ಅಮೂಲ್ಯ ಶರ್ಮಾ! Amulya Sharma

Amulya Sharma: ಸುಮಾರು ಆರು ವರ್ಷಗಳ ಕಾಲ ನಿರಂತರ ಮಾನಸಿಕ ಹಿಂಸೆ ಮತ್ತು ಸೈಬರ್ ಕಿರುಕುಳವನ್ನು ಎದುರಿಸಿದ ಅಮೂಲ್ಯ ಶರ್ಮಾ ಎಂಬ ಯುವತಿ ಕೊನೆಗೂ ಆರೋಪಿಯನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಮೂಲ್ಯ ಅವರ ಈ ಹೋರಾಟವು ಕೇವಲ ಒಬ್ಬ ವ್ಯಕ್ತಿಯ ವಿರುದ್ಧದ ಜಯವಲ್ಲ, ಬದಲಾಗಿ ಸೈಬರ್ ಅಪರಾಧಗಳ ವಿರುದ್ಧ ಧ್ವನಿ ಎತ್ತುವ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಲಿದೆ.

ಘಟನೆಯ ಹಿನ್ನಲೆ

ಅಮೂಲ್ಯ ಶರ್ಮಾಳನ್ನು ಗುರಿಯಾಗಿಸಿಕೊಂಡಿದ್ದ ವ್ಯಕ್ತಿಯೊಬ್ಬ ಸತತ ಆರು ವರ್ಷಗಳಿಂದ ಆಕೆಗೆ ಇಮೇಲ್​ ಮೂಲಕ ನಿಂದಿಸುವುದು ಮತ್ತು ಬೆದರಿಕೆ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿದ್ದ,
ಇದು ಕೇವಲ ಒಂದೆರಡು ಸಂದೇಶಗಳ ಕಥೆಯಲ್ಲ, ಬದಲಾಗಿ ಅಮೂಲ್ಯ ಅವರು ಅನೇಕ ವರ್ಷಗಳ ಕಾಲ ಅನುಭವಿಸಿದ ಮಾನಸಿಕ ವೇದನೆಯಾಗಿತ್ತು. ಇದು ಅವರ ಆತ್ಮವಿಶ್ವಾಸವನ್ನೇ ಕುಗ್ಗಿಸಿತ್ತು. ಅವನು ತಮ್ಮ ಖಾಸಗಿತನ ಮತ್ತು ನೆಮ್ಮದಿಯನ್ನು ಸಂಪೂರ್ಣವಾಗಿ ಕಿತ್ತುಕೊಂಡಿದ್ದ ಎಂದು ಶರ್ಮಾ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೆ ಪೂರ್ಣವಿರಾಮ ಹಾಕಬೇಕು ಎಂದು ನಿರ್ಧರಿಸಿದ ಅಮುಲ್ಯ, ಈ ಪ್ರಕರಣದ ಬಗ್ಗೆ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ, ಆದರೆ ಅಧಿಕಾರಿಗಳು ಪ್ರಕ್ರಿಯೆ ನಿಧಾನವಾಗಿಸಿದ್ದರಿಂದ ಸಂತ್ರಸ್ತೆ, ತಮಗಾದ ಅನ್ಯಾಯವನ್ನು ಸಾರ್ವಜನಿಕಗೊಳಿಸಲು ನಿರ್ಧರಿಸಿ, ತಾವೂ ಎದುರಿಸಿದ ಕಠಿಣ ಅನುಭವಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕಿರುಕುಳದ ವಿಡಿಯೋಗಳು ಮತ್ತು ಸ್ಕ್ರೀನ್​ ಶಾಟ್​​ಗಳನ್ನು ಒದಗಿಸಿದ್ದಾರೆ.
ಅಮೂಲ್ಯ ಪೋಸ್ಟ್​​ ಅತ್ಯಂತ ವೇಗವಾಗಿ ಜನರನ್ನು ತಲುಪಿದ್ದು, ಇದರಿಂದಾಗಿ ದೇಶ್ಯಾದ್ಯಂತ ಆರೋಪಿ ವಿರುದ್ಧ ಆಕ್ರೋಶ ಬುಗಿಲೆದ್ದಿದೆ. ಆ ಪೋಸ್ಟ್​​ ಬ್ರೋಸೆಫ್ ಫೌಂಡೇಶನ್‌ನ ಗಮನವನ್ನೂ ಸೆಳೆದಿದ್ದು, ಇಂತಹವರ ಬೆಂಬಲ ಪಡೆದ ಅಮೂಲ್ಯ ಶರ್ಮಾ ಹೇಳಿಕೆಗಳು ಮತ್ತು ದಾಖಲೆಗಳೊಂದಿಗೆ ಕಿರುಕುಳ ನೀಡಿದವರ ವಿರುದ್ಧ ಎಫ್​ಐಆರ್​ ದಾಖಲಿಸಿದರು.
ಎಫ್‌ಐಆರ್ ದಾಖಲಾದ ಕೇವಲ ಎರಡು ವಾರಗಳಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ವೇಳೆ ಮತ್ತೊಂದು ಪೋಸ್ಟ್​ ಹಂಚಿಕೊಂಡಿರುವ ಅಮೂಲ್ಯ, ಈ ವರ್ಷದ ಪ್ರೇಮಿಗಳ ದಿನವನ್ನು ಅವನು ಸರಿಯಾದ ಸ್ಥಳದಲ್ಲಿಯೇ ಕಳೆದಿದ್ದಾನೆ ಎಂದು ಬರೆಯುವ ಮೂಲಕ ಪರೋಕ್ಷ ಟಾಂಗ್​ ನೀಡಿದ್ದಾರೆ.
ಅಂತಿಮವಾಗಿ ತಮಗೆ ನ್ಯಾಯ ಸಿಕ್ಕಿದೆ ಎಂದಿರುವ ಅಮೂಲ್ಯ, ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎನ್ನುವ ಮೂಲಕ ಆಕೆ ತನ್ನ ಸುದೀರ್ಘ ನರಕಯಾತನೆಗೆ ಅಂತ್ಯ ಸಿಕ್ಕಿದ್ದನ್ನು ಖಚಿತಪಡಿಸಿದ್ದಾರೆ. ಸಹಾಯ ಕೇಳಿ ಕರೆ ಮಾಡಿದ ಪ್ರತಿಯೊಬ್ಬ ಹುಡುಗಿಗೂ ಇದನ್ನು ಅರ್ಪಿಸುವ ಮೂಲಕ ಕಿರುಕುಳ ಅನುಭವಿಸುತ್ತಿರುವ ಇತರ ಮಹಿಳೆಯರಿಗೆ ಧೈರ್ಯ ತುಂಬಿದ್ದಾರೆ (ಏಜೆನ್ಸೀಸ್​).