Indian Railways (ಚಿತ್ರ X)
- ಸರ್ಕಾರವು ರೈಲುಗಳಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಜಾಗೃತಿ ಕಾರ್ಯಕ್ರಮವನ್ನು ಮಾಡುತ್ತಲೇ ಇರುತ್ತದೆ
- ಕೆಲವು ಪ್ರಯಾಣಿಕರ ಬೇಜವಾಬ್ದಾರಿ ವರ್ತನೆ ಮಾತ್ರ ಬದಲಾಗುತ್ತಿಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ
- ಮಹಿಳೆ ಕಡಲೆಕಾಯಿಯನ್ನು ತಿನ್ನುತ್ತಾ ಅದರ ಸಿಪ್ಪೆಯನ್ನು ಕೆಳಗೆ ಎಸೆಯುತ್ತಿರುವುದನ್ನು ಕಾಣಬಹುದು
Indian Railways: ಭಾರತೀಯ ರೈಲ್ವೆ ಇಲಾಖೆ ಮತ್ತು ಸರ್ಕಾರವು ರೈಲುಗಳಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಎಷ್ಟೇ ಜಾಗೃತಿ ಮೂಡಿಸಿದರೂ, ಕೆಲವು ಪ್ರಯಾಣಿಕರ ಬೇಜವಾಬ್ದಾರಿ ವರ್ತನೆ ಮಾತ್ರ ಬದಲಾಗುತ್ತಿಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ ಸೋಷಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ. ಮಹಿಳೆಯೊಬ್ಬರು ರೈಲು ಪ್ರಯಾಣದ ಸಂದರ್ಭದಲ್ಲಿ ತಾನು ತಿಂದ ಕಡಲೆಕಾಯಿ ಸಿಪ್ಪೆಗಳನ್ನು ಸೀಟಿನ ಕೆಳಗೆ ಎಸೆದು, ಅದೇ ಜಾಗದಲ್ಲಿ ಕೈ ತೊಳೆದುಕೊಳ್ಳುತ್ತಿರುವ ಅಸಹ್ಯಕರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕ್ಲಿಪ್ ಅನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ನನ್ನ ಸೀಟಿನ ಪಕ್ಕದಲ್ಲಿ ಕುಳಿತ ಮಹಿಳೆಯೊಬ್ಬರು 5 ಗಂಟೆಗಳ ರೈಲು ಪ್ರಯಾಣದಲ್ಲಿ ಶೇಂಗಾವನ್ನು ತಿನ್ನುತ್ತಾ ಅದರ ಸಿಪ್ಪೆಯನ್ನು ಅಲ್ಲಿಯೇ ಕೆಳಗೆ ಹಾಕುತ್ತಿದರು. ಆ ಕಂಪಾರ್ಟ್ಮೆಂಟ್ನ ಹೊರಗೆಯೇ ಕಸದ ಬುಟ್ಟಿ ಇದ್ದರೂ ಕೂಡ ಅವರು ಆ ಮಹಿಳೆ ಸೋಮಾರಿತನದಿಂದ ನೆಲದ ಮೇಲೆ ಕಸ ಹಾಕಿ ಇಡೀ ಜಾಗವನ್ನು ಕೊಳಕು ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲೇನಿದೆ?
ವೀಡಿಯೊದಲ್ಲಿ, ಮಹಿಳೆ ಕಡಲೆಕಾಯಿಯನ್ನು ತಿನ್ನುತ್ತಾ ಅದರ ಸಿಪ್ಪೆಯನ್ನು ಕೆಳಗೆ ಎಸೆಯುತ್ತಿರುವುದನ್ನು ಕಾಣಬಹುದಾಗಿದೆ. ನಂತರ ಅಲ್ಲಿಯೇ ಕುಳಿತು ನೀರಿನ ಬಾಟಲಿಯಿಂದ ತನ್ನ ಕೈಗಳನ್ನು ತೊಳೆಯುತ್ತಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಆದಾಗ್ಯೂ, ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಯುವತಿಯು ಅವಳಿಗೆ ನಾಗರಿಕ ಪ್ರಜ್ಞೆಯನ್ನು ಕಲಿಸಲು ಬಯಸಿದ್ದೆ ಆದರೆ, ಪರಿಸ್ಥಿತಿ ಘರ್ಷಣೆಗೆ ತಿರುಗಬಹುದು ಎಂದು ಹೇಳಿದರು.
ಇಡೀ ದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ!
ನನಗೆ ಒಂದು ಕುಟುಂಬ, ಗುರಿಗಳು ಮತ್ತು ಭವಿಷ್ಯದ ಯೋಜನೆಗಳಿವೆ. ನೀವು ಪ್ರಾಯೋಗಿಕವಾಗಿ ಯೋಚಿಸಬೇಕು, ಒಬ್ಬರೇ ಇಡೀ ದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ. ನೀವು ಈ ಜನರನ್ನು ಎದುರಿಸಿ ಪ್ರಶ್ನಿಸಿದರೆ, ಅವರು ತಮ್ಮ ತಪ್ಪನ್ನು ಕಲಿಯುವುದೂ ಇಲ್ಲ ಅಥವಾ ಒಪ್ಪಿಕೊಳ್ಳುವುದೂ ಇಲ್ಲ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಮಹಿಳೆಯ ಈ ನಡೆಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ಜನರಿಗೆ ಕಠಿಣ ಶಿಕ್ಷೆ ಮತ್ತು ಭಾರಿ ದಂಡ ವಿಧಿಸಬೇಕು. ಆಗಲೇ ಇವರಿಗೆ ಬುದ್ಧಿ ಬರುವುದು, ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇವರು ತಮ್ಮ ಮನೆಗಳಲ್ಲೂ ಹೀಗೆಯೇ ಇರುತ್ತಾರಾ? ಸಾರ್ವಜನಿಕ ಆಸ್ತಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ರೈಲ್ವೆಯನ್ನು ಆಧುನೀಕರಿಸಲು ವಂದೇ ಭಾರತ್ ನಂತಹ ಹೈಟೆಕ್ ರೈಲುಗಳನ್ನು ಪರಿಚಯಿಸಲಾಗುತ್ತಿದ್ದರೂ, ಪ್ರಯಾಣಿಕರ ಇಂತಹ ಹಳೆಯ ಮತ್ತು ಬೇಜವಾಬ್ದಾರಿ ಮನಸ್ಥಿತಿ ದೇಶದ ಸ್ವಚ್ಛತಾ ಅಭಿಯಾನಕ್ಕೆ ಹಿನ್ನಡೆ ಉಂಟುಮಾಡುತ್ತಿದೆ ಎಂಬುದು ನೆಟ್ಟಿಗರ ಸಾರ್ವತ್ರಿಕ ಅಭಿಪ್ರಾಯವಾಗಿದೆ (ಏಜೆನ್ಸೀಸ್).