Ink Attack | ಅಭಿಜೀತ್ ದಿಪ್ಕೆ ಮೇಲೆ ಇಂಕ್​ ಎರೆಚಿದ ಮಹಿಳೆ! 
ದೇಶ

ಅಭಿಜೀತ್ ದಿಪ್ಕೆ ಮೇಲೆ ಇಂಕ್​ ಎರೆಚಿದ ಮಹಿಳೆ!....ಘಟನೆಯ ಕುರಿತಂತೆ ಸಿಜೆಪಿ ನಾಯಕ ಹೇಳಿದ್ದೇನು ಗೊತ್ತಾ..? | Ink Attack

ನವದೆಹಲಿ: ಇಲ್ಲಿನ ಜಂತರ್ ಮಂತರ್​​ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಶನಿವಾರ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾತನಾಡುತ್ತಿದ್ದ ವೇಳೆ, ಮಹಿಳೆಯೊಬ್ಬರು ಅವರ ಮೇಲೆ ಶಾಯಿಯನ್ನು (Ink Attack) ಎರೆಚಿದ್ದಾರೆ.
ಹೋರಾಟಗಾರ ಸೋನಮ್ ವಾಂಗ್ಚುಕ್​ರನ್ನು ಪೊಲೀಸರು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಅಭಿಜೀತ್ ದಿಪ್ಕೆ ಮಾತನಾಡುತ್ತಿದ್ದರು. ಈ ವೇಳೆ ಸಾರ್ವಜನಿಕರ ನಡುವಿನಿಂದ ದಿಢೀರನೆ ಮುನ್ನುಗ್ಗಿ ಬಂದ ಮಹಿಳೆಯೊಬ್ಬರು, ದಿಪ್ಕೆ ಮುಖದ ಕಡೆಗೆ ಶಾಯಿಯನ್ನು ಎರೆಚಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದಾಗಿ ಪ್ರತಿಭಟನಾ ಸ್ಥಳದಲ್ಲಿದ್ದ ಬೆಂಬಲಿಗರಲ್ಲಿ ಸಣ್ಣ ಮಟ್ಟದ ಆತಂಕ ಮನೆ ಮಾಡಿತ್ತು. ಅನೇಕರು ವೇದಿಕೆಯತ್ತ ಧಾವಿಸಿದರು. ಸಂಘಟಕರು ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರಿಂದ, ಕೆಲ ಸಮಯದ ಅಡಚಣೆಯ ನಂತರ ಪ್ರತಿಭಟನಾ ಸಭೆ ಮತ್ತೆ ಮುಂದುವರಿಯಿತು.

ನೀಲಿ ನನ್ನ ಬಣ್ಣ...ಜೈ ಭೀಮ್! ಎಂದ ದಿಪ್ಕೆ

ತಮ್ಮ ಮೇಲಿನ ಈ ಇಂಕ್ ದಾಳಿಯ ವಿಷಯವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಅಭಿಜೀತ್ ದಿಪ್ಕೆ, ನೀಲಿ ನನ್ನ ಬಣ್ಣ, ಜೈ ಭೀಮ್ ಎಂದು ಬರೆದುಕೊಂಡಿದ್ದಾರೆ.
ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರೆಚಿದ ಆ ಮಹಿಳೆ ಯಾರು ಮತ್ತು ಆಕೆ ಈ ಕೃತ್ಯ ಎಸಗಲು ಬಲವಾದ ಕಾರಣವೇನು ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಪೊಲೀಸರು ಅಥವಾ ಸ್ಥಳೀಯ ಆಡಳಿತ ಮಂಡಳಿಯು ಆ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆಯೇ ಅಥವಾ ವಿಚಾರಣೆ ನಡೆಸುತ್ತಿದ್ದಾರೆಯೇ ಎಂಬುದರ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೆ ಹೊರಬರಬೇಕಿದೆ.
ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್​​​ರನ್ನು ದೆಹಲಿ ಪೊಲೀಸರು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ ನಂತರ ಜಂತರ್ ಮಂತರ್‌ನಲ್ಲಿ ಈಗಾಗಲೇ ತೀವ್ರ ಉದ್ವಿಗ್ನತೆ ನೆಲೆಸಿದೆ. ವಾಂಗ್ಚುಕ್ ಅನುಪಸ್ಥಿತಿಯಲ್ಲಿ ಇಡೀ ಆಂದೋಲನವನ್ನು ಅಭಿಜೀತ್ ದಿಪ್ಕೆ ಮುನ್ನಡೆಸುತ್ತಿದ್ದು, ಸರ್ಕಾರದ ವಿರುದ್ಧ ಹೋರಾಟದ ಬೇಡಿಕೆಗಳನ್ನು ಪುನರುಚ್ಚರಿಸುತ್ತಿದ್ದಾರೆ. ಈ ಸಂದರ್ಭದಲ್ಲೇ ಅವರ ಮೇಲೆ ನಡೆದಿರುವ ಈ ದಾಳಿಯು ಪ್ರತಿಭಟನಾಕಾರರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

ಸೋನಮ್ ವಾಂಗ್ಚುಕ್​ ಆಸ್ಪತ್ರೆಗೆ ಶಿಫ್ಟ್​!

ಹೋರಾಟಗಾರ ಸೋನಮ್ ವಾಂಗ್ಚುಕ್​ರನ್ನು ದೆಹಲಿ ಪೊಲೀಸರು ಶನಿವಾರ ಮುಂಜಾನೆ ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.ವಾಂಗ್ಚುಕ್ ಉಪವಾಸ ಸತ್ಯಾಗ್ರಹವು 21ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯದ ಸ್ಥಿತಿಯನ್ನು ದೆಹಲಿ ಹೈಕೋರ್ಟ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ನ್ಯಾಯಾಲಯದ ಆದೇಶ ಹಾಗೂ ವೈದ್ಯಕೀಯ ತಜ್ಞರ ಸಲಹೆಯ ಮೇರೆಗೆ, ಅವರ ಕ್ಷೀಣಿಸುತ್ತಿರುವ ಆರೋಗ್ಯದ ದೃಷ್ಟಿಯಿಂದ ಅಗತ್ಯ ವೈದ್ಯಕೀಯ ಆರೈಕೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನವದೆಹಲಿಯ ಉಪ ಪೊಲೀಸ್ ಕಮಿಷನರ್ ಸಚಿನ್ ಶರ್ಮಾ ತಿಳಿಸಿದ್ದಾರೆ.

ಪತ್ನಿ ಗೀತಾಂಜಲಿ ಆಕ್ಷೇಪ!..

ಸೋನಮ್ ವಾಂಗ್ಚುಕ್ ಪತ್ನಿ ಗೀತಾಂಜಲಿ ಜೆ ಆಂಗ್ಮೋ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿದ್ದು, ತಮ್ಮ ಪತಿಯನ್ನು ಆಸ್ಪತ್ರೆಗೆ ದಾಖಲಿಸಿರುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಶುಕ್ರವಾರದವರೆಗೆ ಅವರು ಆರಾಮವಾಗಿಯೇ ಇದ್ದರು, ಅವರನ್ನು ಆಸ್ಪತ್ರೆಗೆ ಕರೆತರುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಆರ್ಟಿಕಲ್ 32 (Article 32) ಅಡಿಯಲ್ಲಿ ಇದು ನನ್ನ ಹಕ್ಕಾಗಿದೆ. ನನ್ನ, ನಮ್ಮ ಕುಟುಂಬದ ಹಾಗೂ ಕಳೆದ 20 ದಿನಗಳಿಂದ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿರುವ ವೈದ್ಯರ ಒಪ್ಪಿಗೆಯಿಲ್ಲದೆ ಅವರಿಗೆ ಯಾವುದೇ ರೀತಿಯ ಮೌಖಿಕ ಅಥವಾ ರಕ್ತನಾಳದ (Intravenous) ಚಿಕಿತ್ಸೆಯನ್ನು ನೀಡಬಾರದು ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ(ಏಜೆನ್ಸೀಸ್​).