ಇಂಟರ್ವ್ಯೂಗೆ ತೆರಳಿದ್ದ ಮಹಿಳೆಗೆ ಎಚ್‌ಆರ್‌ನಿಂದ ಮುಜುಗರದ ಪ್ರಶ್ನೆ, ನೆಟ್ಟಿಗರಿಂದ ಆಕ್ರೋಶ.
ಬೇಗ ಮಗು ಮಾಡಿಕೊಳ್ಳಲ್ಲ ತಾನೆ ಎಂದು ಸಂದರ್ಶನದಲ್ಲಿ ಪ್ರಶ್ನೆ ಕೇಳಿದ ಎಚ್‌ಆರ್.
ಇದೆಂಥಾ ಮನಸ್ಥಿತಿ.. ಮಾತೃತ್ವದ ರಜೆ ನೀಡಬೇಕೆಂದು ಹೀಗೆ ಪ್ರಶ್ನೆ ಕೇಳೋದಾ ಎಂದ ಶತಾಕ್ಷಿ ದ್ವಿವೇದಿ.
HR Question During Job Interview: ಉದ್ಯೋಗಕ್ಕಾಗಿ ಸಂದರ್ಶನಕ್ಕೆ ತೆರಳಿದ್ದ ಮಹಿಳೆಯೊಬ್ಬರು ಅನುಭವಿಸಿದ ಮುಜುಗರದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. 'ನೀವು ಸದ್ಯದಲ್ಲೇ ಮಗು ಮಾಡಿಕೊಳ್ಳಲ್ಲ ತಾನೇ?' ಎಂದು ಎಚ್‌ಆರ್ ಕೇಳಿರುವ ಪ್ರಶ್ನೆ ಸದ್ಯ ಕಾರ್ಪೊರೇಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಮಹಿಳಾ ಸಬಲೀಕರಣ ಮತ್ತು ಸಮಾನತೆ ಬಗ್ಗೆ ಮಾತನಾಡುವ ಕಂಪನಿಗಳಲ್ಲೇ ಇಂತಹ ಪ್ರಶ್ನೆಗಳನ್ನು ಕೇಳುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ವಾದವನ್ನು ಎತ್ತಿ ಹಿಡಿಯಲಾಗಿದೆ.
ಸಾಮಾನ್ಯವಾಗಿ ಯಾವುದಾದರೂ ಕೆಲಸಕ್ಕೆಂದು ಇಂಟರ್ವ್ಯೂಗೆ ತೆರಳಿದಾಗ ಅಲ್ಲಿ ವೈಯಕ್ತಿಕ ವಿಚಾರ ಎಂದರೆ ನೀವು ಎಲ್ಲಿ ತಂಗಿದ್ದೀರಿ, ಊರು ಯಾವುದು, ಟ್ರಾವೆಲ್ ಮಾಡೋದು ಹೇಗೆ. ಕುಟುಂಬಸ್ಥರು ಯಾರ್ಯಾರಿದ್ದಾರೆ ಎನ್ನುವುದು ಪ್ರಶ್ನೆ. ಆದರೆ, ಮಾತೃತ್ವ ರಜೆ ಕೊಡಬೇಕೆಂದು 'ಮದುವೆಯಾಗಿದ್ದೀರಾ ನೀವು ಸದ್ಯದಲ್ಲೇ ಮಗುವನ್ನು ಮಾಡಿಕೊಳ್ಳುವ ಯೋಜನೆಯಲ್ಲಿದ್ದೀರಾ.. ಇಲ್ಲ ಅಲ್ವಾ?ಎಂದು ಕೇಳುವುದು ಎಷ್ಟು ಸರಿ ಎಂದು ಶತಾಕ್ಷಿ ದ್ವಿವೇದಿ ಎಂಬುವವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಶತಾಕ್ಷಿ ದ್ವಿವೇದಿ ಅವರ ವಿಡಿಯೋಗೆ ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್ ಬಂದಿದೆ. ಕೆಲವರು 'HRಗೆ ನಿಮ್ಮ ಕುಟುಂಬದ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಆದರೆ, ಮದುವೆಯಾದ್ರೆ ದೀರ್ಘ ರಜೆ, ಮಕ್ಕಳು ಮಾಡಿಕೊಂಡ್ರೆ ಸಂಬಳ ಸಹಿತ ಮಾತೃತ್ವ ರಜೆ ಕೊಡಬೇಕು ಎನ್ನುವ ತಾಪತ್ರಯದಿಂದ ತಪ್ಪಿಸಿಕೊಳ್ಳಲು ಹೀಗೆ ಕೇಳುತ್ತಾರೆ. ಇದು ಲಿಂಗಭೇದಭಾವದ ಬಗ್ಗೆ ಅಲ್ಲ, ಆದರೆ ಪ್ರಾಯೋಗಿಕ ವ್ಯವಹಾರ ಕಾಳಜಿಯ ಬಗ್ಗೆ' ಎಂದು ಸಮರ್ಥಿಸಿಕೊಂಡಿದ್ದಾರೆ.
ಶತಾಕ್ಷಿ ಅವರು ವಿಡಿಯೋದಲ್ಲಿ ಹೇಳಿರುವುದು ಹೀಗೆ, ಸಂದರ್ಶನದಲ್ಲಿ ಮೊದಲು ಎಲ್ಲಿ ವಾಸ ಮಾಡಲಾಗುತ್ತಿದೆ. ಕಚೇರಿಗೆ ಪ್ರಯಾಣಿಸಲು ಸೌಕರ್ಯವಿದೆಯೇ ಎಂದು ಕೇಳಿದರು. ಯಾವುದೇ ತೊಂದರೆ ಇಲ್ಲ. ಪತಿಯೂ ಅದೇ ಪ್ರದೇಶಕ್ಕೆ ಪ್ರಯಾಣಿಸುವುದರಿಂದ ಅವರೊಂದಿಗೆ ಸಂಚರಿಸುತ್ತೇನೆ ಎಂದು ಹೇಳಿದೆ.
ನನಗೆ ಮದುವೆಯಾಗಿದೆ ಎಂದು ತಿಳಿದುಕೊಳ್ಳುತ್ತಲೇ, ಎಚ್‌ಆರ್ ' ನನ್ನನ್ನು ತಪ್ಪಾಗಿ ತಿಳಿಯದಿದ್ದರೆ ಒಂದು ಪ್ರಶ್ನೆ, ನೀವು ಸದ್ಯದಲ್ಲೇ ಮಗುವನ್ನು ಮಾಡಿಕೊಳ್ಳುವ ಪ್ಲಾನ್ ಮಾಡಿಲ್ಲ ತಾನೆ?' ಎಂದು ಕೇಳಿದ್ದಾರೆ. ಇದು ನಿಜಕ್ಕೂ ನನಗೆ ಶಾಕಿಂಗ್ ವಿಚಾರ. ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಸಬಲೀಕರಣದ ಬಗ್ಗೆ ಬಹಿರಂಗವಾಗಿ ಮಾತನಾಡುವ ಸಂಸ್ಥೆಗಳೇ ನೇಮಕಾತಿ ಪ್ರಕ್ರಿಯೆಯಲ್ಲಿ ಇಂತಹ ಸಂಕುಚಿತ ಮನೋಭಾವ ತೋರುವುದು ಎಷ್ಟು ಸರಿ. ಕಂಪನಿಯ ಹೆಸರನ್ನು ಬಹಿರಂಗಪಡಿಸದಿದ್ದರೂ, ಇವರ ಈ ವೀಡಿಯೊಗೆ ಸಾವಿರಾರು ಮಹಿಳೆಯರು ಧ್ವನಿಗೂಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅನೇಕ ಮಹಿಳೆಯರು, ತಾವು ಕೂಡ ಇಂತಹದೇ ಸಂದರ್ಭಗಳನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ 'ಮಹಿಳೆಯರು ಸಂದರ್ಶನ ಎದುರಿಸುವಾಗ - ಅವಿವಾಹಿತರಾಗಿದ್ದರೆ ಯಾವಾಗ ಮದುವೆಯಾಗುತ್ತೀರಿ?, ಮದುವೆಯಾಗಿದ್ದರೆ ಯಾವಾಗ ಮಗು ಮಾಡಿಕೊಳ್ಳುತ್ತೀರಿ?, ಮಗುವಾದರೆ ಕೆಲಸ ಮತ್ತು ಮಗುವನ್ನು ಹೇಗೆ ನಿರ್ವಹಿಸುತ್ತೀರಿ?? ಅಂದರೆ 22 ನೇ ವಯಸ್ಸಿನಿಂದ ಹಿಡಿದು ನೀವು ಕೆಲಸ ಬಿಡುವವರೆಗೆ ಅಥವಾ ನಿಮ್ಮ ವಯಸ್ಸು 50 ಆಗುವವರೆಗೆ ಸಂದರ್ಶನಗಳು ಹೀಗೆಯೇ ನಡೆಯುತ್ತವೆ.. ದ್ವಿಮುಖ ನೀತಿ ಹೊಂದಿರುವ ಈ ಸಮಾಜದಲ್ಲಿ..'ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು ಕಾಮೆಂಟ್ ಮಾಡಿದ್ದು, 'ನಿಮ್ಮ ವೈಯಕ್ತಿಕ ಜೀವನ ಅಥವಾ ಕುಟುಂಬ ಯೋಜನೆಯಲ್ಲಿ HR ಗೆ ಯಾವುದೇ ಆಸಕ್ತಿ ಇಲ್ಲ. ಮಾತೃತ್ವ ರಜೆಯ ಮೇಲೆ ಹೋಗಬಹುದಾದ ವ್ಯಕ್ತಿಯನ್ನು ನೇಮಿಸಿಕೊಳ್ಳುವುದರಿಂದ ಸಿಬ್ಬಂದಿ ನೇಮಕಾತಿ ಸವಾಲುಗಳನ್ನು ಉಂಟುಮಾಡಬಹುದು, ಏಕೆಂದರೆ ಅವರನ್ನು ಕೆಲಸದಿಂದ ತೆಗೆದು ಹಾಕಲು ಆಗೋದಿಲ್ಲ. ಬದಲಾಯಿಸಲು ಸಾಧ್ಯವಿಲ್ಲ. ಇದು ಕೆಲಸಕ್ಕೆ ಅಡ್ಡಿಯಾಗಬಹುದು. ಇದು ಲಿಂಗಭೇದಭಾವ ಅಲ್ಲ, ಆದರೆ ವ್ಯವಹಾರದ ಕಾಳಜಿಯಿಂದಾಗಿ ಎಚ್ ಆರ್ ಹೀಗೆ ಪ್ರಶ್ನಿಸುತ್ತಾರೆ' ಎಂದರು ಇನ್ಸ್ಟಾಗ್ರಾಮ್ ಬಳಕೆದಾರರು, (ಏಜೆನ್ಸೀಸ್).