Woman loses Rs 1.91 lakh in scam in Gujarat Rajkot
- ಆನ್ಲೈನ್ನಲ್ಲಿ 5 ಪ್ಯಾಕೇಟ್ ಹಾಲು ಆರ್ಡರ್ ಮಾಡಿದ್ದ ಗುಜರಾತ್‌ನ ರಾಜ್‌ಕೋಟ್ ಮಹಿಳೆ.
- ಹಾಳಾದ ಹಾಲು ಕೊಟ್ಟು ಪಾವತಿಸಿದ್ದ 175ರೂ. ವಾಪಸ್ ಪಡೆಯಲು ಹೋಗಿ ಹಣ ಕಳೆದುಕೊಂಡ ವೃದ್ಧೆ.
- ಕ್ವಿಕ್ ಕಾಮರ್ಸ್ ಕಂಪನಿಯ ಗ್ರಾಹಕ ಸೇವಾ ಅಧಿಕಾರಿ ಎಂದು 1.91 ಲಕ್ಷ ರೂ. ವಂಚನೆ.
ರಾಜ್‌ಕೋಟ್: ಇತ್ತೀಚಿನ ದಿನಗಳಲ್ಲಂತೂ ಸೈಬರ್ ವಂಚಕರು ಅಮಾಯಕ ಜನರನ್ನು ವಂಚಿಸೋದರಲ್ಲಿ ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಆನ್ಲೈನ್ ಪಾವತಿ, ಬ್ಯಾಂಕ್ ಅಕೌಂಟ್, ಡಿಜಿಟಲ್ ಅರೆಸ್ಟ್, ವಾಟ್ಸಾಪ್ ಹ್ಯಾಕ್ ಹೀಗೆ ತರಹೇವಾರಿ ರೀತಿಗಳಿವೆ. ಸದ್ಯ ಗುಜರಾತ್‌ನ ರಾಜ್ಕೋಟ್ನ ವೃದ್ಧೆಯೊಬ್ಬರು ಆನ್ಲೈನ್ನಲ್ಲಿ ಖರೀದಿಸಿದ್ದ ಹಾಲನ್ನು ವಾಪಸ್ ಕೊಟ್ಟು, ಹಣ ಪಡೆಯಲು ಹೋಗಿ
1.91 ಲಕ್ಷ ರೂ.ಗಳನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಹಾಲಿನ ಹಣ ಮರುಪಾವತಿ ನೆಪದಲ್ಲಿ ವಂಚನೆ
ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ 63 ವರ್ಷದ ನಿವೃತ್ತ ಮಹಿಳೆಯೊಬ್ಬರು ಆನ್ಲೈನ್ನಲ್ಲಿ 5 ಪ್ಯಾಕೆಟ್ ಹಾಲು ಬುಕ್ ಮಾಡಿದ್ದರು. ಆದರೆ, ಆರ್ಡರ್ ರಿಸೀವ್ ಮಾಡಿಕೊಂಡ ನಂತರ, ಹಾಲು ಕೆಟ್ಟಿದೆ ಎನ್ನುವುದು ಗೊತ್ತಾಗಿದೆ. ಹೀಗಾಗಿ, ಇದನ್ನು ವಾಪಸ್ ಕೊಟ್ಟು ಹಣ ಮರುಪಾವತಿಗಾಗಿ ಮನವಿ ಮಾಡಿಕೊಳ್ಳಲು ಜೆಪ್ಟೋ ಗ್ರಾಹಕರ ಸೇವೆ ಮೊರೆ ಹೋದಾಗ ಈ ವಂಚನೆ ನಡೆದಿದೆ ಎನ್ನಲಾಗಿದೆ.
ಎಪಿಕೆ ಫೈಲ್ ಕಳುಹಿಸಿ ವಂಚನೆ
ಜೆಪ್ಟೋದ ಗ್ರಾಹಕ ಸೇವಾ ಸಂಖ್ಯೆ ಯಾವುದು ಎನ್ನುವುದರ ಬಗ್ಗೆ ಅಂದಾಜಿರದ ಅವರು, ನೇರ ಗೂಗಲ್ನಲ್ಲಿ ಸರ್ಚ್ ಮಾಡಿದರು. ಈ ವೇಳೆ ಸಿಕ್ಕ ಒಂದು ನಂಬರ್ಗೆ ಕರೆ ಮಾಡಿನಿಂದ
ಆ ಕಡೆಯಿಂದ ಫೋನ್ ರಿಸೀವ್ ಮಾಡಿದ ವ್ಯಕ್ತಿ ತನ್ನ ಹೆಸರು ಇಸ್ಮಾಯಿಲ್ ಎಂದು ಪರಿಚಯಿಸಿಕೊಂಡು, ತಾನು ಜೆಪ್ಟೋದ ಗ್ರಾಹಕ ಸೇವಾ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ.
ಮಹಿಳೆಯ ವಿಶ್ವಾಸ ಗಳಿಸಿದ ಆ ವಂಚಕ, ಯುಪಿಐ (UPI) ಮೂಲಕ ಹಣ ಮರುಪಾವತಿಸುವುದಾಗಿ ನಂಬಿಸಿದ್ದಾನೆ. ಆತ ಮಹಿಳೆಗೆ ಎಪಿಕೆ ಫೈಲ್ ಕಳುಹಿಸಿ ಅದನ್ನು ಡೌನ್‌ಲೋಡ್ ಮಾಡುವಂತೆ ಕೇಳಿಕೊಂಡಿದ್ದಾನೆ. ಹಣ ವಂಚನೆಯ ಅರಿವೂ ಇರದ ಮಹಿಳೆ ಆಪ್ ಡೌನ್ಲೋಡ್ ಮಾಡಿಕೊಳ್ಳುತ್ತಲೇ ಮೊಬೈಲ್ನಲ್ಲಿ ಹಣ ಕಟ್ ಆಗಿರುವ ಸಂದೇಶ ಬಂದಿದೆ.
ಸಾಕ್ಷಿ ಸಮೇತ ಪೊಲೀಸರಿಗೆ ದೂರು
ತಮಗೆ ಮೋಸವಾಗಿರುವುದು ತಿಳಿದುಬಂದ ಕೂಡಲೇ ಆ ಮಹಿಳೆ ರಾಷ್ಟ್ರೀಯ ಸೈಬರ್ ಸಹಾಯವಾಣಿಯನ್ನು ಸಂಪರ್ಕಿಸಿದ್ದಾರೆ. ವಂಚನೆಗೆ ಬಳಸಲಾದ ಮೊಬೈಲ್ ಸಂಖ್ಯೆಗಳು ಮತ್ತು ಬ್ಯಾಂಕ್ ಖಾತೆಗಳೊಂದಿಗೆ ಸಂಬಂಧ ಹೊಂದಿರುವವರ ವಿರುದ್ಧ ರಾಜ್‌ಕೋಟ್ ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ
ಆರೋಪಿಯು ವಿವಿಧ ಬ್ಯಾಂಕ್ ಖಾತೆಗಳು ಮತ್ತು ಯುಪಿಐ ಐಡಿಗಳಿಗೆ ಒಟ್ಟು 1.91 ಲಕ್ಷ ರೂ.ಗಳನ್ನು ವರ್ಗಾಯಿಸುವಂತೆ ಹಿರಿಯ ನಾಗರಿಕರಿಗೆ ವಂಚಿಸಿದ್ದಾನೆ. ಆರೋಪಿಯ ವಿರುದ್ಧ ವಂಚನೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ವಂಚಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ, (ಏಜೆನ್ಸೀಸ್).