ಮೃತ ಸೃಷ್ಟಿ (ಎಡ), ಸೃಷ್ಟಿ ದಂಪತಿ 
ದೇಶ

ಮದುವೆ ಆಗಿ 1 ವರ್ಷನೂ ಕಳೆದಿಲ್ಲ! ಮನಕಲಕುತ್ತೆ ಸಾವಿಗೆ ಶರಣಾಗುವ ಮುನ್ನ ವಿಡಿಯೋದಲ್ಲಿ ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಶಿಕ್ಷಕಿಯ ಮಾತು

ಪ್ರಮುಖ ಮುಖ್ಯಾಂಶಗಳು

  • ಬಿಕ್ಕಿ ಬಿಕ್ಕಿ ಕಣ್ಣೀರಾಕುತ್ತಲೇ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣು
  • ಮದುವೆಯಾಗಿ 1 ವರ್ಷವೂ ಕಳೆದಿಲ್ಲ ಅತ್ತೆ, ಗಂಡನ ಕಿರುಕುಳ ತಾಳಲಾರದೆ ಸಾವು
  • 90 ಸೆಕೆಂಡ್​ನ ವಿಡಿಯೋ ರೆಕಾರ್ಡ್​ನಲ್ಲಿ ಅತ್ತೆಯ ಕರಾಳ ಮುಖ ಬಿಚ್ಚಿಟ್ಟ ಸೊಸೆ
ಉತ್ತರಾಖಂಡ: ಬಿಕ್ಕಿ ಬಿಕ್ಕಿ ಕಣ್ಣೀರಾಕುತ್ತಲೇ ಆತ್ಮಹತ್ಯೆಗೂ ಮೊದಲು ತನ್ನ ಸಾವಿಗೆ ಅಸಲಿ ಕಾರಣವೇನು, ಯಾರು ಈ ಪರಿಸ್ಥಿತಿಗೆ ದೂಡಿದ್ದು ಎಂಬುದನ್ನು ವಿಡಿಯೋದಲ್ಲಿ ಹೇಳಿಕೊಂಡಿರುವ ಸರ್ಕಾರಿ ಶಿಕ್ಷಕಿಯ ಅಳಲು ನಿಜಕ್ಕೂ ಎಂಥವರ ಮನಕಲಕುವಂತಿದೆ.  
ಮದುವೆಯಾಗಿ ಒಂದು ವರ್ಷವೂ ಕಳೆದಿಲ್ಲ. ಗಂಡನ ಮನೆಗೆ ಬಂದಾಗಿನಿಂದ ತನ್ನನ್ನು ದರಿದ್ರ, ಶಾಪ, ಇವಳ ಮುಖ ನೋಡಿದರೆ ಅಶುಭ, ದಿನ ಪೂರ್ತಿ ಕೆಟ್ಟದ್ದು ಎಂದು ಹಿಡಿಶಾಪ ಹಾಕುತ್ತಿದ್ದ ಅತ್ತೆಯ ಕಿರುಕುಳವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಹಿಳೆ, ತನ್ನ ಸಾವಿಗೆ ಗಂಡ, ಆತನ ಅಮ್ಮ ಮತ್ತು ಸಹೋದರನೇ ಕಾರಣ ಎಂದು ವಿಡಿಯೋದಲ್ಲಿ ರೆಕಾರ್ಡ್​ ಮಾಡಿ, ಬಳಿಕ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಉತ್ತರಾಖಂಡದ ಡೆಹ್ರಾಡೂನ್​ನಲ್ಲಿ ವರದಿಯಾಗಿದೆ.

1 ವರ್ಷವೂ ಕಳೆದಿಲ್ಲ

ಸಾವಿಗೆ ಶರಣಾದ ಮಹಿಳೆಯನ್ನು ಸೃಷ್ಟಿ ಕಂಧಾರಿ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿ. ಆಕೆಯ ಪತಿ ಸೌರಭ್ ರತುರಿ ಕೂಡ ಶಿಕ್ಷಕನಾಗಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ಇಬ್ಬರೂ ಡೆಹ್ರಾಡೂನ್ ನಗರದಿಂದ ಸುಮಾರು 20 ಕಿಮೀ ದೂರದಲ್ಲಿರುವ ದೋಯಿವಾಲಾದಲ್ಲಿ ಮನೆ ಮಾಡಿಕೊಂಡರು. ತವರು ಬಿಟ್ಟು ಬಂದ ಸೊಸೆಗೆ ತಾಯಿ ರೂಪದಲ್ಲಿ ಬೆನ್ನಿಗೆ ನಿಲ್ಲಬೇಕಿದ್ದ ಅತ್ತೆಯೇ ನರಕ ಸದೃಶ್ಯ ತೋರಿಸಿದ್ದು ಇಂದು ಆಕೆಯ ಸಾವಿಗೆ ಮೂಲ ಕಾರಣವಾಗಿದೆ.  
ವರದಕ್ಷಿಣೆ ಇನ್ನೂ ಕೊಟ್ಟಿಲ್ಲ ನಿಮ್ಮ ಕುಟುಂಬದವರು ಎಂದು ಸೃಷ್ಟಿಗೆ ಮದುವೆಯಾದ ಕೆಲವೇ ದಿನಗಳಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡಲು ಪ್ರಾರಂಭಿಸಿದ ಆಕೆಯ ಪತಿ ಮತ್ತು ಅತ್ತೆ, ನೀನು ನಮ್ಮ ಮನೆಗೆ ದುರಾದೃಷ್ಟ, ಅಶುಭ ಎಂದು ಹೀಯಾಳಿಸುತ್ತಲೇ ಇದ್ದರು ಎಂದು ಸೃಷ್ಟಿ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾಳೆ. ಈ ಬಗ್ಗೆ ಮೃತಳ ತಾಯಿ ಕೂಡ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.  

90 ಸೆಕೆಂಡ್​ನ ವಿಡಿಯೋ

ನೇಣು ಬಿಗಿದುಕೊಳ್ಳುವ ಮೊದಲು ಆಕೆ ರೆಕಾರ್ಡ್ ಮಾಡಿದ 90 ಸೆಕೆಂಡ್​ನ ವಿಡಿಯೊದಲ್ಲಿ, "ಕ್ಷಮಿಸಿ ಅಮ್ಮ, ನಾನು ಇಲ್ಲಿಂದಲೇ ಬೇರೆ ಲೋಕಕ್ಕೆ ಹೋಗುತ್ತಿರುವೆ. ಎಲ್ಲವೂ ತುಂಬಾ ವಿಚಿತ್ರವಾಗಿದೆ. ನಾನು ಆರು ತಿಂಗಳಿಂದ ಇದನ್ನು ಸಹಿಸಿಕೊಂಡು ಬಂದಿದ್ದೇನೆ. ಆದ್ರೆ, ಇನ್ಮುಂದೆ ಇದನ್ನೆಲ್ಲ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಮನಸ್ಥಿತಿ ಎಂದಿಗೂ ಬದಲಾಗುವುದಿಲ್ಲ. ನಮ್ಮ ಮದುವೆಯಾದ ದಿನದಿಂದಲೂ ದೂಷಿಸುತ್ತಲೇ ಬಂದಿದ್ದಾರೆ. ನೀನು ನಮಗೆ ಶಾಪ ಎನ್ನುತ್ತಾರೆ" ಎಂದು ಹೇಳಿ ವಿಡಿಯೋ ಎಂಡ್​ ಮಾಡಿದ್ದಾರೆ. 
ಸೃಷ್ಟಿಯ ಪತಿ ಸೌರಭ್, ಅತ್ತೆ ಪರ್ವಿನಾ ಮತ್ತು ಗಂಡನ ಸಹೋದರಿಯ ಹೆಸರುಗಳನ್ನು ಪೊಲೀಸರು ಎಫ್​ಐಆರ್​ನಲ್ಲಿ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ. ಎಂಟು ತಿಂಗಳ ಹಿಂದೆಯಷ್ಟೇ ನೂರಾರು ಆಸೆ, ಕನಸುಗಳನ್ನು ಕಟ್ಟಿಕೊಂಡು ವಿವಾಹವಾಗಿದ್ದ ಸೃಷ್ಟಿಯ ಬದುಕನ್ನೇ ನರಕ ಮಾಡಿದ ಆಕೆಯ ಗಂಡ, ಅತ್ತೆಗೆ ಸ್ಥಳೀಯರು, ನೆಟ್ಟಿಗರು ಹಿಡಿಶಾಪ ಹಾಕಿದ್ದಾರೆ,(ಏಜೆನ್ಸೀಸ್).