ಕೊಲೆ ಆರೋಪಿಗಳು  
ದೇಶ

13 ವರ್ಷ, 2 ಕೋಟಿ ರೂ.! ಪತಿಗೆ ಗುಂಡಿ ತೋಡಿದ ಪತ್ನಿಯ ಅಸಲಿ ಮುಖ ಕಡೆಗೂ ಬಯಲು | Murder Case

ಪ್ರಮುಖ ಮುಖ್ಯಾಂಶಗಳು

  • ಪ್ರಿಯಕರನ ಜತೆಗೂಡಿ ಗಂಡನಿಗೆ ಗುಂಡಿ ತೋಡಿದ ಹೆಂಡತಿ
  • 2 ಕೋಟಿ ರೂ. ವಿಮೆ ಹಣ, ಕಾಮದಾಹಕ್ಕೆ ಕೊಲೆ
  • ಮೃತನ ಸಹೋದರನ ಒಂದು ದೂರಿನಿಂದ ಸತ್ಯಾಸತ್ಯತೆ ಬಯಲು
ತೆಲಂಗಾಣ: 13 ವರ್ಷದ ದಾಂಪತ್ಯವನ್ನು ಓರ್ವ ಪ್ರಿಯಕರನ ಜತೆಗಿನ ಕಾಮದಾಹಕ್ಕೆ ಮುರಿದ ಕಿರಾತಕಿ, ಕಡೆಗೂ ತಾನೇ ಗಂಡನನ್ನು ಕೊಂದಿದ್ದು ಎಂಬ ಸತ್ಯವನ್ನು ಇಂಚಿಂಚಾಗಿ ಪೊಲೀಸರ ಮುಂದೆ ಬಿಚ್ಚಿಟ್ಟ ಘಟನೆ ತೆಲಂಗಾಣದ ನಿಜಾಮಾಬಾದ್​ನಲ್ಲಿ ವರದಿಯಾಗಿದೆ.

ವಿಮೆ ಹಣ...

ಆರೋಪಿ ಮಹಿಳೆಯನ್ನು ಸೌಮ್ಯಾ ಎನ್ನಲಾಗಿದ್ದು, ತನ್ನ ಪ್ರಿಯಕರನ ಜತೆಗೂಡಿ ಗಂಡನನ್ನು ಕೊಲೆಗೈದಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ. ಮೃತ ವ್ಯಕ್ತಿಯನ್ನು ಮಕ್ಲೂರ್ ಮಂಡಲದ ಬೋರ್ಗಮ್ (ಕೆ) ಗ್ರಾಮದ ನಿವಾಸಿ ಪಲ್ನಾಟಿ ರಮೇಶ್ ಎಂದು ಗುರುತಿಸಲಾಗಿದೆ. ಕೇವಲ ಪ್ರಿಯಕರನೊಂದಿಗೆ ಜಾಲಿ ಮಾಡಲು ಮಾತ್ರವಲ್ಲ, ಪತಿ ಸತ್ತರೆ ಅವರ ಸಾವಿನ ಬಳಿಕ ಬರುವ 2 ಕೋಟಿ ರೂ.ಗೂ ಅಧಿಕ ಮೌಲ್ಯದ ವಿಮಾ ಹಣವನ್ನು ಪಡೆಯಲು ಈ ಹತ್ಯೆ ಮಾಡಿದ್ದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ.

ಕೊಲೆಯಲ್ಲ ಹೃದಯಾಘಾತ!

ಪ್ರೀತಿಸಿ, ವಿವಾಹವಾದ ರಮೇಶ್​-ಸೌಮ್ಯಾ ಜೋಡಿ, ದಾಂಪತ್ಯದ ಬಳಿಕ ನಿಜಾಮಾಬಾದ್​ನಲ್ಲಿ ವಾಸವಿದ್ದರು. ಪೊಲೀಸರ ಪ್ರಕಾರ, ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯಾ, ಅದೇ ಶಾಲೆಯಲ್ಲಿ ದೈಹಿಕ ಶಿಕ್ಷಣ ಹೇಳಿಕೊಡುತ್ತಿದ್ದ ದಿಲೀಪ್ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ರಮೇಶ್ ಗಮನಕ್ಕೆ ಬಂದಿತು. ಇದಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ದಂಪತಿ ನಡುವೆ ಜಗಳಗಳು ನಡೆಯುತ್ತಿತ್ತು. ಪತಿಯ ಬೆಂಬಿಡದ ಪ್ರಶ್ನೆಯಿಂದ ಕುಪಿತಗೊಂಡ ಸೌಮ್ಯಾ, ಪ್ರಿಯಕರನ ಜತೆಗೂಡಿ ಹತ್ಯೆಗೆ ಸಂಚು ರೂಪಿಸಿದ್ದಳು.

ಕೊಲೆಗೆ ಸುಪಾರಿ

ಪ್ರಿಯಕರ ದಿಲೀಪ್​ ಜತೆಗೂಡಿ ಅಭಿಷೇಕ್ ಎಂಬಾತನನ್ನು ಸಂಪರ್ಕಿಸಿದ ಸೌಮ್ಯಾ, ಜಿತೇಂದರ್ ಎಂಬ ವ್ಯಕ್ತಿಗೆ ತನ್ನ ಪತಿಯನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದಳು. ಇದಕ್ಕಾಗಿ, ತನ್ನ ಬಳಿಯಿದ್ದ ಚಿನ್ನವನ್ನು ಅಡವಿಟ್ಟು ಕೊಲೆಗಾರರಿಗೆ ಮುಂಗಡವಾಗಿ 35,000 ರೂ. ಅಡ್ವಾನ್ಸ್​ ಕೂಡ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಅಸಲಿಗೆ, ಆಕೆ ಹೇಳಿದ್ದ ದಿನದಂದು ಇನ್ನೂ ಮೂವರೊಂದಿಗೆ ಸ್ಥಳದಲ್ಲಿ ಹಾಜರಾಗಬೇಕಿದ್ದ ಜತೇಂದರ್​ ಸೌಮ್ಯಾಳಿಗೆ ಕೈಕೊಟ್ಟಿದ್ದ. ಇದರಿಂದ ಕಂಗಾಲಾದ ಕಿರಾತಕಿ, ಮುಂದೇನು ಮಾಡಬೇಕು ಎಂದು ತಿಳಿಯದೆ, ದಿಲೀಪ್​ ಜತೆ ಸೇರಿ ತಾನೇ ಗಂಡನನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾಳೆ.
ದಿಂಬಿನಿಂದ ಕತ್ತುಹಿಸುಕಿ ರಮೇಶ್​ನನ್ನು ಕೊಂದ ಸೌಮ್ಯಾ, ಪತಿಯ ಸಾವು ಹೃದಯಾಘಾತ ಎಂದು ಸುಳ್ಳು ಹೇಳಿ, ಯಾರಿಗೂ ಹೇಳದೆ ಮಣ್ಣು ಮಾಡಿ ಬಂದಿದ್ದಳು. ಈ ವಿಷಯ ತಿಳಿದ ಇಸ್ರೇಲ್​ನಲ್ಲಿರುವ ರಮೇಶ್ ಅವರ ಸಹೋದರ, ಅನುಮಾನಗೊಂಡು ವಿದೇಶದಿಂದಲೇ ಮಕ್ಲೂರು ಪೊಲೀಸರಿಗೆ ದೂರು ನೀಡಿದಾಗ ಈ ಪ್ರಕರಣದ ಅಸಲಿಯತ್ತು ಹೊರಬಿದ್ದಿತು. ಅವರ ದೂರಿನ ಮೇರೆಗೆ ತನಿಖೆ ಚುರುಕುಗೊಳಿಸಿದ ಖಾಕಿ, ಡಿಸೆಂಬರ್ 24ರಂದು ರಮೇಶ್ ಅವರ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿತು. ಈ ವೇಳೆ ರಮೇಶ್ ಹಾರ್ಟ್​ ಅಟ್ಯಾಕ್​ನಿಂದ ಸತ್ತಿಲ್ಲ ಬದಲಿಗೆ ಕೊಲೆ ಮಾಡಲಾಗಿದೆ ಎಂಬುದು ಪರೀಕ್ಷೆಯಲ್ಲಿ ದೃಢಪಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).