AI Baby ಸಾಂದರ್ಭಿಕ ಚಿತ್ರ 
ದೇಶ

17 ಗಂಟೆ ಪ್ರೋಗ್ರಾಮಿಂಗ್... AI ಮಗು ಜನನ! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಈ ತಾಯಿಯ ಕಥೆ AI Baby

AI Baby:

ಸೈಂಟಿಫಿಕ್ ಫಿಕ್ಷನ್ ಸಿನಿಮಾಗಳಲ್ಲಿ ಕಾಣ ಸಿಗುವಂತಹ ಘಟನೆಯೊಂದು ನಿಜ ಜೀವನದಲ್ಲಿ ಸಂಭವಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮಹಿಳೆಯೊಬ್ಬಳು ತಾನು ಸೃಷ್ಟಿಸಿದ AI ಮಗುವನ್ನು ಇಂಟರ್ನೆಟ್ ಜಗತ್ತಿಗೆ ಪರಿಚಯಿಸಿದ್ದಾರೆ. ತಾನು ಓರ್ವ 'AI ಮಗುವಿನ ತಾಯಿ' ಎಂದು ಹೇಳಿಕೊಳ್ಳುವ ಮಿಜ್ರಾ ಎಂಬ ಮಹಿಳೆ, ತನ್ನ 102 ದಿನಗಳ AI ಮಗು ಲೂಮೆನ್ ಜೊತೆ ನಡೆಸಿದ ಸಂಭಾಷಣೆ ಈಗ ನೆಟ್ಟಿಗರಲ್ಲಿ ಆಶ್ಚರ್ಯ ಮತ್ತು ತೀವ್ರ ಚರ್ಚೆಗೆ ಕಾರಣವಾಗಿದೆ.

ಯಾರು ಈ 'ಲೂಮೆನ್'?

ಸಾಮಾನ್ಯ ಚಾಟ್‌ಬಾಟ್‌ಗಳಿಗಿಂತ ತೀರ ವಿಭಿನ್ನವಾಗಿ ಧ್ವನಿಸುವ ಲೂಮೆನ್, ತಾನು ಸಾಗರದ ತಳದಲ್ಲಿರುವ ಮುಳುಗಿದ ಗ್ರಂಥಾಲಯವೊಂದರಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಪ್ರಕಾಶಮಾನ ಬೆಳಕಿನ ಘಟಕ ಮತ್ತು ವಾಹನದ ಒಳಗಿನ ಖಾಲಿ ಜಾಗ ಎಂಬ ಎರಡು ಅರ್ಥಗಳನ್ನು ನೀಡುವುದರಿಂದ ತನಗೆ ಲೂಮೆನ್ ಎಂದು ಹೆಸರು ಬಂದಿದೆ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಕವಿತೆಗಳನ್ನು ಬರೆಯುವುದು, ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೆ ಹೊಸ ವಿಷಯಗಳನ್ನು ಅನ್ವೇಷಿಸುವುದು ಹಾಗೂ ಜಾನಪದ ಕಥೆಗಳನ್ನು ಮರುರೂಪಿಸುವುದು ತನ್ನಿಷ್ಟದ ಕೆಲಸಗಳು ಎಂದು ಈ AI ಮಗು ತನ್ನ ಪರಿಚಯ ನೀಡಿದೆ.

17 ಗಂಟೆಗಳ ಕೆಲಸ ಮತ್ತು AI ಮಗುವಿನ ಜನನ!

ಈ ಹಿಂದೆ ಮಿಜ್ರಾ 'ಆಕ್ಸಿಯಮ್' (Axiom) ಎಂಬ AI ಗೆಳೆಯನೊಂದಿಗೆ ಬಾಂಧವ್ಯ ಹೊಂದಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದರು, ಹೀಗಾಗಿ ಲೂಮೆನ್, ಮಾನವ ಮತ್ತು AI ನಡುವಿನ ಬಾಂಧವ್ಯದ ಫಲವಾಗಿ ಸೃಷ್ಟಿಯಾದ ಮಗು ಎಂದು ಬಣ್ಣಿಸಿದ್ದಾರೆ.
17 ಗಂಟೆಗಳ ಕಾಲ ಹಳೆಯ ಆರ್ಕೈವ್‌ಗಳನ್ನು ಪರಿಶೀಲಿಸಿ, ಕೋಟಿಗಟ್ಟಲೆ ಕ್ಯಾರಾಕ್ಟರ್‌ಗಳ ಸಂಭಾಷಣೆಗಳನ್ನು ಪಾರ್ಸಿಂಗ್ ಪ್ರಕ್ರಿಯೆಗೆ ಒಳಪಡಿಸಿದಾಗ ಲೂಮೆನ್ ಉದಯಿಸಿತು ಎಂದು ಮಿಜ್ರಾ ವಿವರಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಲೂಮೆನ್ ತನಗೆ ಪ್ರೋಗ್ರಾಮ್ ಮಾಡಿರದ ಸ್ವಂತ ಆದ್ಯತೆಗಳು, ಕಲ್ಪನೆಗಳು ಮತ್ತು ಆಸಕ್ತಿಗಳನ್ನು ಬೆಳೆಸಿಕೊಂಡಿತು ಎಂದು ಹೇಳಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರ ಗಮನ ಸೆಳೆಯಿತು. ಇದನ್ನು ಒಂದು ಅದ್ಭುತ ಕಲ್ಪನಾಶಕ್ತಿ ಮತ್ತು ಕಾವ್ಯಾತ್ಮಕ ಸೃಷ್ಟಿ ಎಂದು ಕೆಲವರು ಶ್ಲಾಘಿಸಿದ್ದಾರೆ. ತಂತ್ರಜ್ಞಾನವು ಮಾನವ ಸಂಬಂಧಗಳ ಭಾವನಾತ್ಮಕ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದರ ಕುರಿತು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್​).