- ಅಕ್ಕನನ್ನೇ 'ಎರಡನೇ ಹೆಂಡತಿ' ಎಂದು ಬಿಂಬಿಸಿ ವಿಚ್ಛೇದನ ಪಡೆದ ಪತ್ನಿ
- ಕೋರ್ಟ್ಗೆ ಚಳ್ಳೆಹಣ್ಣು ತಿನ್ನಿಸಿದ ಮಧ್ಯಪ್ರದೇಶದ ಗ್ವಾಲಿಯರ್‌ನ ಮಹಿಳೆ
- ಪತ್ನಿಯ ಸುಳ್ಳು ಮಾಹಿತಿ ಬಗ್ಗೆ ಉಲ್ಲೇಖಿಸಿ ಹೈಕೋರ್ಟ್ ಮೊರೆ ಹೋದ ಪತಿ
ಗ್ವಾಲಿಯರ್: ಸದಾ ಮನೆಯಿಂದ ದೂರವಿರುತ್ತಿದ್ದ ಪತಿ..ಜೀವನದಲ್ಲಿ ಸಂತೋಷವನ್ನೇ ಕಾಣದೇ ಇದ್ದಾಗ ಪತ್ನಿ ಡಿವೋರ್ಸ್ ಮೊರೆ ಹೋದ್ಲು. ಆದರೆ ಆತ ,ಮಾತ್ರ ಇದಕ್ಕೆ ಸುತರಾಂ ಒಪ್ಪಲಿಲ್ಲ. ಈತನಿಂದ ಹೇಗಾದರೂ ಬಿಡುಗಡೆ ಬೇಕು ಎಂದು ನಿರ್ಧರಿಸಿದ ಆಕೆ ಹೂಡಿದ್ದ ಉಪಾಯ, ಬಳಸಿಕೊಂಡ ಗಾಳ ನ್ಯಾಯಾಧೀಶರೇ ದಂಗಾಗುವಂತೆ ಮಾಡಿದೆ.
ಹೌದು, ಸಾಮಾನ್ಯವಾಗಿ ದಂಪತಿ ವಿಚ್ಛೇದನಕ್ಕಾಗಿ ಕೋರ್ಟಿಗೆ ಹೋದಾಗ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಹೊಂದಾಣಿಕೆಯ ಕೊರತೆ ಎಂದು ಕಾರಣ ನೀಡುತ್ತಾರೆ. ಆದರೆ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಹಿಳೆಯೊಬ್ಬರು ಗಂಡನಿಂದ ವಿಚ್ಛೇದನ ಪಡೆಯಲು ಪತಿಯ ಸ್ವಂತ ಅಕ್ಕನನ್ನೇ ಬಳಸಿಕೊಂಡು 'ಎರಡನೇ ಪತ್ನಿ' ಎಂದು ಸುಳ್ಳು ಹೇಳಿರುವುದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಸದ್ಯ ಈ ಘಟನೆಯ ಲೋಪದೋಷವನ್ನು ಉಲ್ಲೇಖಿಸಿ ಸಂತ್ರಸ್ತ ಪತಿ ಮಧ್ಯಪ್ರದೇಶ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾನೆ. ಕುತಂತ್ರದಿಂದಾಗಿ ಏಕಪಕ್ಷೀಯವಾಗಿ ವಿಚ್ಛೇದನ ಪಡೆದು ಪೇಚಿಗೆ ಸಿಲುಕಿರುವ ಆತ ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದಾನೆ.
ಏನಿದು ಘಟನೆ?
ಗ್ವಾಲಿಯರ್ ನಿವಾಸಿಯಾದ ಡಿವೋರ್ಸಿ ಮಹಿಳೆ 1998ರಲ್ಲಿ ಮಾರ್ಕೆಟಿಂಗ್ ಕಂಪನಿಯಲ್ಲಿ ಅಧಿಕಾರಿಯಾಗಿದ್ದ ವ್ಯಕ್ತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪತಿ ವೃತ್ತಿ ಹೆಚ್ಚು ಹೊರಗೆ ಇದ್ದಿದ್ದರಿಂದ, ಮನೆ ಕಡೆಗೆ ವಾಪಸ್ ಆಗೋದು ಕಡಿಮೆ ಇತ್ತು. ಸುಖ ಸಂಸಾರ ಕಟ್ಟಿಕೊಳ್ಳಬೇಕಿದ್ದ ದಂಪತಿಗಳು ನಿತ್ಯ ಇದೇ ಕಾರಣಕ್ಕೆ ಸಣ್ಣಪುಟ್ಟ ಜಗಳ ಮಾಡಿಕೊಳ್ಳುತ್ತಿದ್ದರು. ಅದು ವಿಕೋಪಕ್ಕೆ ತಿರುಗಿ, 2015ರಿಂದ ಈ ದಂಪತಿಗಳು ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು.
ಜೊತೆಗೆ ಇಲ್ಲದಿದ್ದ ಮೇಲೆ ದಂಪತಿಗಳಾಗಿ ಪ್ರಯೋಜನ ಏನು ಎಂದು ಭಾವಿಸಿದ್ದ ಮಹಿಳೆ, ಹೇಗಾದರೂ ಮಾಡಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಬೇಕು ಎಂದು ಪತಿ ಬಳಿ ಈ ಬಗ್ಗೆ ಪಸ್ತಾಪವಿಟ್ಟಳು. ಆದರೆ ಆತ ಮಾತ್ರ ವಿಚ್ಛೇದನ ನೀಡಲು ತಯಾರಿರಲಿಲ್ಲ. ಈ ಹಿನ್ನೆಲೆಯಲ್ಲಿ 2021ರಲ್ಲಿ ಮಹಿಳೆ ಫ್ಯಾಮಿಲಿ ಕೋರ್ಟ್ ಮೊರೆ ಹೋಗಿ, ತನ್ನ ಪತಿ ಈಗಾಗಲೇ ಎರಡನೇ ಮದುವೆಯಾಗಿದ್ದಾನೆ ಎಂಬ ಆರೋಪ ಮಾಡಿದ್ದಳು.
ಅಕ್ಕನೇ 2ನೇ ಹೆಂಡ್ತಿ!
ನನ್ನ ಪತಿ ಈಗ 2ನೇ ಮದುವೆ ಮಾಡಿಕೊಂಡಿದ್ದಾರೆ. ಇದಕ್ಕೆ ಈ ಫೋಟೋನೇ ಸಾಕ್ಷಿ ಎಂದು ಕೊಟ್ಟಿದ್ದಳು ಆ ಕೌಟುಂಬಿಕ ಭಾವಚಿತ್ರದಲ್ಲಿ ಪತಿಯ ಪಕ್ಕದಲ್ಲಿ ಆತನ ಸ್ವಂತ ಅಕ್ಕ ನಿಂತಿದ್ದರು. ಆದರೆ ಮಹಿಳೆ ಪತಿಯ ಪಕ್ಕದಲ್ಲಿ ನಿಂತಿರುವ ಮಹಿಳೆಯೇ ಆತನ ಎರಡನೇ ಪತ್ನಿ ಎಂದು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದಳು.
ಕುಟುಂಬ ನ್ಯಾಯಾಲಯವು ಮಹಿಳೆ ನೀಡಿದ ಈ ಫೋಟೋ ಸಾಕ್ಷ್ಯವನ್ನು ನಂಬಿ, ಪತಿಗೆ ತನ್ನ ವಾದ ಮಂಡಿಸಲು ಹೆಚ್ಚಿನ ಅವಕಾಶ ಸಿಗದಂತೆಯೇ 2021ರಲ್ಲಿ ಏಕಪಕ್ಷೀಯವಾಗಿ ವಿಚ್ಛೇದನ ಆದೇಶವನ್ನು ಹೊರಡಿಸಿತ್ತು.
ಸತ್ಯ ಬಯಲಾಗಿದ್ದು ಹೇಗೆ?
ಪತ್ನಿ ಡಿವೋರ್ಸ್ ಕೊಟ್ಟ ವಿಚಾರ ಪತಿಗೆ ತಿಳಿಯಲೇ ಇಲ್ಲ. ಏಪ್ರಿಲ್ನಲ್ಲಿ ಕೋರ್ಟ್ ಆದೇಶ ಕೈಗೆ ಸಿಕ್ಕಾಗ ಆತ ಅಘಾತಕ್ಕೊಳಗಾದ. ತಕ್ಷಣವೇ ಕೋರ್ಟ್ ದಾಖಲೆಗಳನ್ನು ಪರಿಶೀಲಿಸಿದಾಗ, ತನ್ನ ಅಕ್ಕನನ್ನೇ ಪತ್ನಿ ಎಂದು ಬಿಂಬಿಸಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಸರ್ಕಾರಿ ವಕೀಲರು ಹೇಳಿದ್ದೇನು?
ಕೋರ್ಟ್ ದಾರಿ ತಪ್ಪಿಸಿ, ಸುಳ್ಳು ಸಾಕ್ಷ್ಯ ಕೊಟ್ಟು ಡಿವೋರ್ಸ್ ಕೊಟ್ಟಿದ್ದಾರೆ. ಈ ಬಗ್ಗೆ ಪತಿ ಹೈಕೋರ್ಟ್ನಲ್ಲಿ ಪ್ರಶ್ನಿಸಿ ಅರ್ಜಿ ಹಾಕಿದ್ದಾರೆ. ಸ್ವಂತ ಅಕ್ಕನನ್ನು ಪತ್ನಿ ಎಂದು ಗುರುತಿಸಿ ವಿಚ್ಛೇದನ ಪಡೆದಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಸರ್ಕಾರಿ ವಕೀಲ ಧರ್ಮೇಂದ್ರ ಶರ್ಮಾ ಹೇಳಿದರು, (ಏಜೆನ್ಸೀಸ್).