Crime Story ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರ: ಬಾಲಿವುಡ್‌ನ ಜನಪ್ರಿಯ ಕ್ರೈಂ ಥ್ರಿಲ್ಲರ್ ಸಿನಿಮಾ ದೃಶ್ಯಂ ಮಾದರಿಯಲ್ಲಿ ಪತಿಯನ್ನೇ ಕೊಲ್ಲಲು ಸಂಚು ರೂಪಿಸಿದ್ದ ಮಹಿಳೆಯೊಬ್ಬರನ್ನು (
ಮಹಾರಾಷ್ಟ್ರದ ಬಾರಾಮತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆದಾಗ್ಯೂ, ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ, ಬ್ಯಾಟ್‌ನಿಂದ ಹೊಡೆದು, ಮನೆಯೊಳಗೇ ನಿರ್ಮಿಸಿದ್ದ ಗುಂಡಿಯಲ್ಲಿ ಪತಿಯನ್ನು ಹೂತುಹಾಕಲು ಯತ್ನಿಸಿದ ಶರ್ಮಿಳಾ ಪ್ರವೀಣ್ ಜಗತಾಪ್ ಬಂಧಿತ ಆರೋಪಿ.
ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ, ಬ್ಯಾಟ್‌ನಿಂದ ಹಲ್ಲೆ
ಪೋಲಿಸ್ ಮೂಲಗಳ ಪ್ರಕಾರ, ಜುಲೈ 30 ರಂದು ಶರ್ಮಿಳಾ ತನ್ನ ಪತಿ ಪ್ರವೀಣ್ ಜಗತಾಪ್‌ಗೆ ಜ್ಯೂಸ್‌ನಲ್ಲಿ ಅನೇಕ ನಿದ್ರೆ ಮಾತ್ರೆಗಳನ್ನು ಬೆರೆಸಿ ಕೊಟ್ಟಿದ್ದಳು. ಇದರಿಂದ ಪ್ರವೀಣ್ ಸತತ ಎರಡು ದಿನಗಳ ಕಾಲ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿದ್ದರು. ಆಗಸ್ಟ್ 1 ರಂದು ಪ್ರವೀಣ್ ಅರೆ-ಎಚ್ಚರ ಸ್ಥಿತಿಯಲ್ಲಿದ್ದಾಗ, ಅವರ ಹೆಂಡತಿ ಬ್ಯಾಟ್‌ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾಳೆ.
ಇಟ್ಟಿಗೆ-ಸಿಮೆಂಟ್ ಗೂಡಿನಲ್ಲಿ ಹೂತುಹಾಕುವ ಯತ್ನ!
ಬಳಿಕ, ಕಾರ್ಮಿಕರನ್ನು ಕರೆಸಿ ಮನೆಯ ಬಾಲ್ಕನಿಯಲ್ಲಿ ವಿಶೇಷವಾಗಿ ಕಟ್ಟಿಸಿದ್ದ ಇಟ್ಟಿಗೆ ಮತ್ತು ಸಿಮೆಂಟ್ ಗೂಡಿನಲ್ಲಿ ಪತಿಯನ್ನು ಮಲಗಿಸಿ, ಮೇಲೆ ಕಲ್ಲಿನ ಚಪ್ಪಡಿಯನ್ನು ಮುಚ್ಚಿ ಸಮಾಧಿ ಮಾಡಲು ಯತ್ನಿಸಿದ್ದಳು. ಆದರೆ, ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರು ಪ್ರವೀಣ್ ಅವರ ಕೈ ಮತ್ತು ಕಾಲುಗಳು ಚಲಿಸುವುದನ್ನು ಗಮನಿಸಿ ಅನುಮಾನಗೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರವೀಣ್ ಅವರನ್ನು ಜೀವಂತವಾಗಿ ರಕ್ಷಿಸಿದ್ದಾರೆ.
ಪ್ರವೀಣ್ ಹೇಳಿದ್ದೇನು?
ಆಕೆ ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಕೊಟ್ಟಿದ್ದರಿಂದ ನಾನು 2 ದಿನ ಪ್ರಜ್ಞೆಯಿಲ್ಲದೆ ಬಿದ್ದಿದ್ದೆ. ಮೂರನೇ ದಿನ ಆಕೆ ಬ್ಯಾಟ್‌ನಿಂದ ಹೊಡೆಯುವಾಗ ನನಗೆ ಸ್ವಲ್ಪ ಎಚ್ಚರವಾಯಿತು. ಆಗ ನಾನು ಆಕೆಗೆ ಹೊಡೆಯಬೇಡ ಎಂದು ಬೇಡಿಕೊಂಡೆ ಆದರೆ ಕೇಳಲಿಲ್ಲ. ನಂತರ ನನ್ನನ್ನು ಬಾಲ್ಕನಿಯ ಗುಂಡಿಯಲ್ಲಿ ಎಸೆದಿದಳು. ಅದೃಷ್ಟವಶಾತ್ ಕಾರ್ಮಿಕರು ಪೊಲೀಸರಿಗೆ ಕರೆ ಮಾಡಿದ್ದರಿಂದ ನನ್ನ ಜೀವ ಉಳಿಯಿತು ಎಂದು ಪ್ರವೀಣ್ ಹೇಳಿದ್ದಾರೆ.
ಅತ್ತೆಗೂ ನಿದ್ರೆ ಮಾತ್ರೆ, ಮಾಟಮಂತ್ರದ ಶಂಕೆ
ಪ್ರವೀಣ್ ಅವರ ಹೇಳಿಕೆಯಂತೆ, ಘಟನೆಯ ಸಮಯದಲ್ಲಿ ಮನೆಯಲ್ಲಿದ್ದ ಅವರ ತಾಯಿಗೂ ಶರ್ಮಿಳಾ ನಿದ್ರೆ ಮಾತ್ರೆ ನೀಡಿದ್ದಳು. ಆದರೆ, ಮಗನಿಗೆ ಹೊಡೆಯುವ ಶಬ್ದ ಕೇಳಿ ಎಚ್ಚರಗೊಂಡ ತಾಯಿ, ತಕ್ಷಣವೇ ಇನ್ನೊಬ್ಬ ಮಗನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಪ್ರವೀಣ್ ಅವರ ಸಹೋದರ ಬಂದು ಬಾಗಿಲು ತೆಗೆದು ನೋಡಿದಾಗ ಪ್ರವೀಣ್ನ್ನು ಗುಂಡಿಯಲ್ಲಿ ಹಾಕಿರುವುದನ್ನು ಕಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕೃತ್ಯದ ಹಿಂದೆ ಮಾಟಮಂತ್ರ ಅಥವಾ ದುಷ್ಟ ಶಕ್ತಿಗಳ ಕೈವಾಡವಿರಬಹುದು ಎಂದು ಪ್ರವೀಣ್ ಶಂಕಿಸಿದ್ದಾರೆ. ಜುಲೈ 13 ಮತ್ತು 14 ರ ಅಮಾವಾಸ್ಯೆಯ ದಿನಗಳಂದು ಆಕೆ ಕ್ಯಾಲೆಂಡರ್‌ನಲ್ಲಿ 'No Result' ಎಂದು ಬರೆದಿದ್ದು, ಇದರ ಅರ್ಥವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಮೆಡಿಕಲ್ ಸ್ಟೋರ್ ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಕಳವಳ
ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಅಷ್ಟೊಂದು ಬಲವಾದ ನಿದ್ರೆ ಮಾತ್ರೆಗಳನ್ನು ನೀಡಿದ ಮೆಡಿಕಲ್ ಸ್ಟೋರ್ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರ ಲೈಸೆನ್ಸ್ ರದ್ದುಗೊಳಿಸಬೇಕು ಎಂದು ಪ್ರವೀಣ್ ಒತ್ತಾಯಿಸಿದ್ದಾರೆ.
ಪ್ರಸ್ತುತ ಪ್ರವೀಣ್ ಅವರ ಪೋಷಕರು (ಅತ್ತೆ-ಮಾವ) ಅವರ ಮಗ ಮತ್ತು ಮಗಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದು, ಮಕ್ಕಳ ಜೀವಕ್ಕೆ ಅಪಾಯವಿದೆ ಎಂದು ಪ್ರವೀಣ್ ಆತಂಕ ವ್ಯಕ್ತಪಡಿಸಿದ್ದಾರೆ. ಆಡಳಿತ ಮಂಡಳಿಯು ತಕ್ಷಣವೇ ಮಕ್ಕಳ ಕಸ್ಟಡಿಯನ್ನು ತಮಗೆ ಒಪ್ಪಿಸಬೇಕೆಂದು ಅವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ (ಏಜೆನ್ಸೀಸ್).