ಕಾನ್ಪುರ: ಇನ್ನೇನು ದೀಪಾವಳಿ ಹಬ್ಬವನ್ನು ಸಂಭ್ರಮಿಸಬೇಕು ಎಂದು ಮನೆಯನ್ನೆಲ್ಲ ಸ್ವಚ್ಛವಾಗಿಸಿ, ಹೂವು-ಹಣ್ಣುಗಳಿಂದ ಪೂಜೆ ಮಾಡಿ, ಸಿಹಿ ತಿನ್ನುವ ಖುಷಿಯಲ್ಲಿದ್ದ ಕುಟುಂಬಕ್ಕೆ ಇದೀಗ ಬರ ಸಿಡಿಲು ಬಡಿದಂತಾಗಿದೆ. ಹಬ್ಬದ ಹಿಂದಿನ ದಿನ ಮಹಿಳೆಯೊಬ್ಬರು ಅಡ್ಡಾದಿಡ್ಡಿ ವೇಗವಾಗಿ ಮಹೀಂದ್ರಾ ತಾರ್ ಕಾರನ್ನು ಚಲಾಯಿಸಿದ್ದಲ್ಲದೇ ಸ್ಕೂಟರ್ವೊಂದಕ್ಕೆ ರಭಸವಾಗಿ ಗುದ್ದಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಸಂತೋಷ್ ಸಿಂಗ್ ಚೌಹಾಣ್ (55) ಎಂದು ಗುರುತಿಸಲಾಗಿದ್ದು, ಶನಿವಾರ ಸಂಜೆ 7:30ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿ ಇಬ್ಬರು ಮಹಿಳೆಯರು ಪ್ರಯಾಣಿಸುತ್ತಿದ್ದು, ಚಾಲಕಿಯ ನಿಯಂತ್ರಣ ತಪ್ಪಿದ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದ ನಂತರ ಸುಮಾರು 25ರಿಂದ 30 ಮೀಟರ್ವರೆಗೆ ಎಳೆದೊಯ್ದು ರಸ್ತೆಯ ರೇಲಿಂಗ್ಗೆ ಡಿಕ್ಕಿ ಹೊಡೆದು ನಿಂತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸಂತೋಷ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಘಟನಾ ಸ್ಥಳದಲ್ಲಿ ಸಾರ್ವಜನಿಕರು ಸುತ್ತುವರೆಯುತ್ತಿದ್ದಂತೆ ಕಾರಿನಲ್ಲಿದ್ದ ಮಹಿಳೆಯರು ಥಾರ್ ಅನ್ನು ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ವರದಿಯಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ದಿಲೀಪ್ ಕುಮಾರ್ ಸಿಂಗ್ ನೇತೃತ್ವದ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ.
ಅಪಘಾತಕ್ಕೆ ಕಾರಣವಾದ ಥಾರ್ ಕಾರಿನ ಹಿಂಭಾಗದಲ್ಲಿ "ಕೃಷ್ಣ ಗ್ರೂಪ್" ಎಂದು ಬರೆಯಲಾಗಿದೆ. ಇದನ್ನು ಮತ್ತು ಕಾರಿನ ನಂಬರ್ ಬಳಸಿಕೊಂಡು ಆರೋಪಿಗಳನ್ನು ಪತ್ತೆಹಚ್ಚಲು ಖಾಕಿ ಪಡೆ ಮುಂದಾಗಿದೆ. ಮೃತರ ಕುಟುಂಬಸ್ಥರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಮಹಿಳೆಯರನ್ನು ಶೀಘ್ರವೇ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಮತ್ತೊಂದೆಡೆ, ಅಪಘಾತದ ನಿಖರ ಕಾರಣ ತಿಳಿಯಲು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ,(ಏಜೆನ್ಸೀಸ್).