Cucumber Viral Video (ಚಿತ್ರ X) 
ದೇಶ

ಸೌತೆಕಾಯಿಗೂ ಬಣ್ಣದ ಲೇಪನ: ರೈಲ್ವೆ ನಿಲ್ದಾಣದಲ್ಲಿ ಬಯಲಾಯ್ತು ಭೀಕರ ದಂಧೆ, 9 ಮಹಿಳೆಯರ ಬಂಧನ! Cucumber Viral Video

ಪ್ರಮುಖ ಮುಖ್ಯಾಂಶಗಳು

  • ತರಕಾರಿಗಳನ್ನು ಖರೀದಿಸುವಾಗ ಅವುಗಳ ಗಾಢ ಹಸಿರು ಬಣ್ಣ ಮತ್ತು ಹೊಳಪನ್ನು ನೋಡಿ ಮರುಳಾಗುತ್ತೇವೆ
  • ಆದರೆ ಆ ಹೊಳಪಿನ ಹಿಂದೆ ಅಡಗಿರುವ ಕರಾಳ ಸತ್ಯವೊಂದು ಈಗ ಬಯಲಾಗಿದ್ದು, ಜನರಲ್ಲಿ ಕಳವಳ ವ್ಯಕ್ತವಾಗಿದೆ
  • ಮಹಿಳೆಯೊಬ್ಬರು ಸೌತೆಕಾಯಿಗಳು ತಾಜಾವಾಗಿ ಕಾಣಲೆಂದು ಹಸಿರು ಬಣ್ಣಕ್ಕೆ ಅದ್ದುತ್ತಿರುವ ವಿಡಿಯೋ
ಬಿಹಾರ: ನಾವು ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸುವಾಗ ಅವುಗಳ ಗಾಢ ಹಸಿರು ಬಣ್ಣ ಮತ್ತು ಹೊಳಪನ್ನು ನೋಡಿ ಮರುಳಾಗುತ್ತೇವೆ. ಆದರೆ ಆ ಹೊಳಪಿನ ಹಿಂದೆ ಅಡಗಿರುವ ಕರಾಳ ಸತ್ಯವೊಂದು ಈಗ ಬಯಲಾಗಿದೆ. ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಮಹಿಳೆಯೊಬ್ಬರು ಸೌತೆಕಾಯಿಗಳನ್ನು ಮಾರಾಟ ಮಾಡುವ ಮೊದಲು ಅವುಗಳು ತಾಜಾವಾಗಿ ಕಾಣುವಂತೆ ಹಸಿರು ದ್ರವದಲ್ಲಿ ಅದ್ದಿ (Cucumber Viral Video) ತೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ನಂತರ ಜನಸಾಮಾನ್ಯರಲ್ಲಿ ಕಳವಳ ಹುಟ್ಟು ಹಾಕಿದೆ.

ಏನಿದು ಘಟನೆ?

ವೈರಲ್​ ಆದ ವಿಡಿಯೋದಲ್ಲಿ ಬಿಹಾರದ ಕತಿಹಾರ್ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಸಿಪ್ಪೆ ಸುಲಿದ ಸೌತೆಕಾಯಿಗಳನ್ನು ಹಸಿರು ಬಣ್ಣದ ದ್ರವದಿಂದ ಅದ್ದಿ ತೆಗೆಯುತ್ತಿರುವುದನ್ನು ತೋರಿಸಲಾಗಿದೆ. ಆಘಾತಕಾರಿ ಸಂಗತಿಯೆಂದರೆ, ರೈಲ್ವೆ ಪ್ಲಾಟ್​ಫಾರ್ಮ್​ನಲ್ಲಿ ಇಂತಹ ಕಲಬೆರೆಕೆಗಳು ಬಹಿರಂಗವಾಗಿ ನಡೆಸಲಾಗಿದೆ.
ಸಾಮಾನ್ಯವಾಗಿ ರೈಲ್ವೆ ನಿಲ್ದಾಣಗಳಲ್ಲಿ ಸೌತೆಕಾಯಿಗಳನ್ನು ಮಾರಾಟ ಮಾಡಲಾಗುತ್ತದೆ. ಅನೇಕ ಪ್ರಯಾಣಿಕರು ಅವುಗಳನ್ನು ಕೈಗೆಟಕುವ ತಿಂಡಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಈ ರೀತಿಯಂತಹ ಕಲಬೆರೆಕೆ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು.
ಈ ವಿಡಿಯೋವನ್ನು ಬಳಕೆದಾರರೊಬ್ಬರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡ ನಂತರ ರೈಲ್ವೆ ಸೇವಾ ಪ್ರತಿಕ್ರಿಯಿಸಿದ್ದು, ಈ ವಿಷಯವನ್ನು ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಿಹಾರದ ಕತಿಹಾರ್‌ ರೈಲ್ವೆ ರಕ್ಷಣಾ ಪಡೆ ಈ ಬಗ್ಗೆ ತನಿಖೆ ನಡೆಸಿದ್ದು, ನಿಲ್ದಾಣದಲ್ಲಿ ಅಕ್ರಮವಾಗಿ ಮತ್ತು ಅಸುರಕ್ಷಿತ ರೀತಿಯಲ್ಲಿ ಸೌತೆಕಾಯಿಗಳನ್ನು ಮಾರಾಟ ಮಾಡುತ್ತಿದ್ದ ಒಂಬತ್ತು ಮಹಿಳೆಯರನ್ನು ಬಂಧಿಸಿ ವಿಚಾರ ನಡೆಸುತ್ತಿರುವುದಾಗಿ ಇನ್​ಸ್ಪೆಕ್ಟರ್​ ವಿಕ್ರಮ್​ ಮಾಹಿತಿ ನೀಡಿದ್ದಾರೆ.

ಸಿಹಿತಿಂಡಿಗೆ ಬಳಸುವ ಬಣ್ಣ: ವಿಚಾರಣೆಯಲ್ಲಿ ಮಹಿಳೆಯ ತಪ್ಪೊಪ್ಪಿಗೆ

ಕತಿಹಾರ್ ಆರ್‌ಪಿಎಫ್ ಇನ್ಸ್‌ಪೆಕ್ಟರ್ ವಿಕ್ರಮ್ ಪ್ರಕಾರ, ಬಂಧಿತ ಮಹಿಳೆಯು ಸೌತೆಕಾಯಿಗಳಿಗೆ ಹಚ್ಚಲು ಮದುವೆ ಸಮಾರಂಭಗಳಲ್ಲಿ ತಯಾರಿಸಲಾಗುವ ಸಿಹಿತಿಂಡಿಗಳಿಗೆ ಬಳಸುವ ಹಸಿರು ಬಣ್ಣವನ್ನೇ ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ನೆಟ್ಟಿಗರ ಪ್ರತಿಕ್ರಿಯೆ

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ಕಾನೂನು ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದರೆ ಮಾತ್ರ ಇಂತಹ ಅಭ್ಯಾಸಗಳು ನಿಲ್ಲುತ್ತವೆ ಇಲ್ಲದಿದ್ದರೆ, ಹಾಗೇ ಮುಂದುವರೆಯುತ್ತವೆ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರಿ ಪ್ಲಾಟ್‌ಫಾರ್ಮ್‌ಗಳಲ್ಲಿ ಏನು ಮಾರಾಟವಾಗುತ್ತಿದೆ ಎಂಬುದನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಗುಣಮಟ್ಟದ ಮಾನದಂಡಗಳನ್ನು ಖಚಿತಪಡಿಸಿಕೊಳ್ಳುವುದು ರೈಲ್ವೆ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದಿದ್ದಾರೆ (ಏಜೆನ್ಸೀಸ್​).