ಬಿಜ್ನೋರ್ (ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳು ಮತ್ತು ಆನ್‌ಲೈನ್ ಕಿರುಕುಳಗಳು ಅಮಾಯಕ ಜೀವಗಳನ್ನು(Suicide) ಬಲಿಪಡೆಯುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಮಹಿಳೆಯೊಬ್ಬರು ಸೈಬರ್ ವಂಚಕರ 'ಡಿಜಿಟಲ್ ಅರೆಸ್ಟ್' (Digital Arrest) ಬೆದರಿಕೆಗೆ ಹೆದರಿ, ತಮ್ಮ ಮದುವೆ ವಾರ್ಷಿಕೋತ್ಸವದ ಹಿಂದಿನ ದಿನವೇ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ.
ಮನ ಮಿಡಿಯುವ ಡೆತ್ ನೋಟ್
ಮಹಿಳೆಯ ಅಂತ್ಯಕ್ರಿಯೆ ಮುಗಿದ ಎರಡು ದಿನಗಳ ನಂತರ ಆಕೆಯ ಪತಿ ಶವಪತ್ರವನ್ನು (ಡೆತ್ ನೋಟ್) ಪತ್ತೆಹಚ್ಚಿದ್ದಾರೆ. ಅದರಲ್ಲಿ ಅಡಗಿರುವ ನೋವು ಯಾರಿಗಾದರೂ ಕಣ್ಣೀರು ತರಿಸುವಂತಿದೆ. "ಆ ವ್ಯಕ್ತಿ ನಿಮ್ಮ ತಾಯಿಯನ್ನು ತುಂಬಾ ಕಾಡಿದ್ದಾನೆ" ಎಂದು ತನ್ನ ಮಕ್ಕಳನ್ನು ಉದ್ದೇಶಿಸಿ ಬರೆದಿರುವ ಮಹಿಳೆ, ತಾನು ಅನುಭವಿಸಿದ 'ಡಿಜಿಟಲ್ ಅರೆಸ್ಟ್' ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ.
"ಪ್ರತಿ ಜನ್ಮದಲ್ಲೂ ನಿಮ್ಮಂತಹ ಕುಟುಂಬವೇ ನನಗೆ ಸಿಗಲಿ ಎಂದು ಹಾರೈಸುತ್ತೇನೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಸ್ವಾರಿ, ಮಮ್ಮಿ ಸಾಯಲೇಬೇಕಾಗಿದೆ," ಎಂದು ಬರೆದು ಮಹಿಳೆ ಸಾವಿಗೆ ಶರಣಾಗಿದ್ದಾರೆ. ಪತ್ರದಲ್ಲಿ ಕಿರುಕುಳ ನೀಡಿದ ವ್ಯಕ್ತಿಯ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಆತ ನೀಡಿದ ಮಾನಸಿಕ ಹಿಂಸೆಯ ಬಗ್ಗೆ ವಿವರಿಸಿದ್ದಾರೆ.
ವಿಡಿಯೋ ಕಾಲ್ ಮೂಲಕ ಕುಟುಂಬಕ್ಕೆ ಬೆದರಿಕೆ!
ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಎರಡು-ಮೂರು ಸಂಶಯಾಸ್ಪದ ಕರೆಗಳು ಬಂದಿರುವುದು ಪತ್ತೆಯಾಗಿದೆ. ಕುಟುಂಬಸ್ಥರು ಆ ಸಂಖ್ಯೆಗಳಿಗೆ ಮರಳಿ ಕರೆ ಮಾಡಿದಾಗ, ಯಾವುದೂ ಚಾಲ್ತಿಯಲ್ಲಿರಲಿಲ್ಲ. ಆದರೆ, ಒಂದು ಸಂಖ್ಯೆಯಿಂದ ವಿಡಿಯೋ ಕಾಲ್ ಬಂದಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಮೃತ ಮಹಿಳೆಯ ಕುಟುಂಬಕ್ಕೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ. ಇದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
ಪೊಲೀಸ್ ತನಿಖೆ ಚುರುಕು
ಈ ಬಗ್ಗೆ ಮಾಹಿತಿ ನೀಡಿರುವ ಬಿಜ್ನೋರ್ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಝಾ, "ಏಪ್ರಿಲ್ 30 ರಂದು ಕುಟುಂಬದವರು ದೂರು ನೀಡಿದ್ದಾರೆ. ಮಹಿಳೆ ಸಾವನ್ನಪ್ಪಿದ ಎರಡು ದಿನಗಳ ನಂತರ ಈ ದೂರು ದಾಖಲಾಗಿದೆ," ಎಂದು ತಿಳಿಸಿದ್ದಾರೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಸಂಶಯಾಸ್ಪದ ಸಂಖ್ಯೆಯಿಂದ ಬಂದ ವಿಡಿಯೋ ಕರೆ ತನಿಖೆಗೆ ಪ್ರಮುಖ ಸುಳಿವಿನಂತಿದೆ.
ಏನಿದು 'ಡಿಜಿಟಲ್ ಅರೆಸ್ಟ್'?
ಇದು ಸೈಬರ್ ವಂಚಕರು ಜನರನ್ನು ಹೆದರಿಸಲು ಬಳಸುವ ಹೊಸ ತಂತ್ರ. ಸ್ಕೈಪ್ ಅಥವಾ ವಿಡಿಯೋ ಕರೆ ಮೂಲಕ ಪೊಲೀಸ್ ಅಧಿಕಾರಿಗಳಂತೆ ಸೋಗು ಹಾಕುವ ವಂಚಕರು, ನಿಮ್ಮ ಹೆಸರಿನಲ್ಲಿ ಅಕ್ರಮ ಪಾರ್ಸೆಲ್ ಬಂದಿದೆ ಅಥವಾ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಹೆದರಿಸುತ್ತಾರೆ. "ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ, ಕ್ಯಾಮೆರಾ ಮುಂದೆ ಕುಳಿತುಕೊಳ್ಳಬೇಕು, ಯಾರಿಗೂ ಫೋನ್ ಮಾಡಬಾರದು" ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಾರೆ. ಈ ಮಾನಸಿಕ ಒತ್ತಡಕ್ಕೆ ತಾಳಲಾರದೆ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಯಾವುದೇ ಅಧಿಕೃತ ಸಂಸ್ಥೆಗಳು ಫೋನ್ ಮೂಲಕ ನಿಮ್ಮನ್ನು 'ಡಿಜಿಟಲ್ ಅರೆಸ್ಟ್' ಮಾಡಲು ಸಾಧ್ಯವಿಲ್ಲ. ಇಂತಹ ಕರೆಗಳು ಬಂದಾಗ ಗಾಬರಿಯಾಗದೆ ತಕ್ಷಣ ಸೈಬರ್ ಕ್ರೈಂ ಪೊಲೀಸರಿಗೆ (1930) ಮಾಹಿತಿ ನೀಡಿ,(ಏಜೆನ್ಸೀಸ್).