ರಾಜಸ್ಥಾನ: ಜೈಪುರದ ರಸ್ತೆಯೊಂದರಲ್ಲಿ ಅಣ್ಣ ಅಪಘಾತವಾದ ನಂತರ ಯುವತಿಯೊಬ್ಬಳು ಮೋಟಾರ್ ಸೈಕಲ್ಗೆ ಹಾನಿ (Bike Attack) ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಯುವತಿ ಮತ್ತು ಎದುರುಗಡೆ ಬರುತ್ತಿದ್ದ ಬೈಕ್ ನಡುವೆ ಸಣ್ಣ ಮಟ್ಟದ ಘರ್ಷಣೆ ಉಂಟಾಗಿತ್ತು. ಯಾವುದೇ ದೊಡ್ಡ ಮಟ್ಟದ ಅಪಘಾತ ಸಂಭವಿಸಿದೇ ಇದ್ದರೂ ಯುವತಿ ತೀವ್ರ ಆಕ್ರೋಶಗೊಂಡಿದ್ದಾರೆ.
ವೈರಲ್ ಆಗಿರುವ ವೀಡಿಯೋದಲ್ಲಿ ಕಾಣುವಂತೆ, ಯುವತಿಯು ಬೈಕ್ ಸವಾರನ ಮೇಲೆ ಕಿರುಚಾಡುತ್ತಾ, ನಂತರ ಪಕ್ಕದಲ್ಲಿದ್ದ ಕಲ್ಲು ತೆಗೆದುಕೊಂಡು ಮೋಟಾರ್ ಸೈಕಲ್ಗೆ ಮೇಲೆ ದಾಳಿ ನಡೆಸಿ ಬೈಕಿನ ಹೆಡ್‌ಲೈಟ್, ಮಿರರ್ ಮತ್ತು ಇತರ ಭಾಗಗಳನ್ನು ಪುಡಿಪುಡಿ ಮಾಡಿದ್ದಾಳೆ. ಈ ವೇಳೆ ಬೈಕ್ ಸವಾರ ಅವಳನ್ನು ತಡೆಯಲು ಪ್ರಯತ್ನಿಸಿದರೂ, ಆಕೆ ಮಾತ್ರ ಯಾವುದಕ್ಕೂ ಬಗ್ಗದೇ ವಾಹನದ ಮೇಲೆ ಕೋಪ ತೀರಿಸಿಕೊಂಡಿದ್ದಾರೆ.
ಘಟನೆ ಉಲ್ಬಣವಾಗುತ್ತಿದ್ದಂತೆಯೇ ಸ್ಥಳೀಯರು ಈ ವಿಷಯವನ್ನು ಸೋಡಾಲ ಪೊಲೀಸರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದು, ಸಮಾಲೋಚನೆ ನಡೆಸಿ ಪರಿಸ್ಥಿತಿಯನ್ನು ಶಾಂತವಾಗಿ ಪರಿಹರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಮಹಿಳೆಯ ವಿರುದ್ಧ ಯಾವುದೇ ಔಪಚಾರಿಕ ಪ್ರಕರಣ ಅಥವಾ ಕಾನೂನು ಕ್ರಮ ದಾಖಲಿಸಲಾಗಿಲ್ಲ.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಜಸ್ಥಾನ ಪೊಲೀಸ್ ಸಹಾಯವಾಣಿಗೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು, ಈ ಘಟನೆ ಕುರಿತು ಜೈಪುರ ಪೊಲೀಸರು ಪ್ರಕರಣವನ್ನು ಪರಿಶೀಲಿಸಿ, ಸ್ಥಿತಿಯ ಕುರಿತು ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ.
ಇಂತಹ ಘಟನೆಗಳು ಸಾರ್ವಜನಿಕ ನಡವಳಿಕೆ, ಹೊಣೆಗಾರಿಕೆ ಮತ್ತು ಅಂತಹ ಸಂದರ್ಭಗಳಲ್ಲಿ ಪೊಲೀಸರ ಪ್ರತಿಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅನೇಕ ಬಳಕೆದಾರರು ಈ ರೀತಿಯ ಘಟನೆಗಳನ್ನು ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ (ಏಜೆನ್ಸೀಸ್).