Mallikarjun Kharge | ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ 
ದೇಶ

ಪ್ರೀತಿ ಮಾಡಿದ್ದು ನನ್ನನ್ನ, ಮದುವೆಯಾಗಿದ್ದು ಮೋದಿಯವರ ಜೊತೆ.. ರಾಜ್ಯಸಭೆಯಲ್ಲಿ ಆ 'ಲವ್ ಸ್ಟೋರಿ' ಹೇಳಿದ ವಿಪಕ್ಷ ನಾಯಕ ಖರ್ಗೆ | Mallikarjun Kharge

ನವದೆಹಲಿ: ರಾಜ್ಯಸಭೆ ಬುಧವಾರ ಅಪರೂಪದ ಮತ್ತು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ನಿವೃತ್ತರಾಗುತ್ತಿರುವ ಸದಸ್ಯರಿಗೆ ವಿದಾಯ ಕೋರುವ ಭಾಷಣದ ವೇಳೆ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ಆಡಿದ ಹಾಸ್ಯಮಯ ಮಾತುಗಳು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿತು.
ತಮ್ಮ ಭಾಷಣದುದ್ದಕ್ಕೂ ರಾಜಕೀಯ ಜೀವನದ ಅನುಭವಗಳನ್ನು ಹಂಚಿಕೊಂಡ ಖರ್ಗೆ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರೊಂದಿಗಿನ ತಮ್ಮ ಸುದೀರ್ಘ 54 ವರ್ಷಗಳ ಒಡನಾಟವನ್ನು ನೆನಪಿಸಿಕೊಳ್ಳುತ್ತಾ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಬಗ್ಗೆ ಉರ್ದು ಶಾಯರಿಯ ಶೈಲಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು.
ವೋ ಮೊಹಬ್ಬತ್ ಹುಮಾರೆ ಸಾಥ್ ಕಿಯೇ, ಶಾದಿ ಮೋದಿ ಸಾಹಬ್ ಕೆ ಸಾಥ್ (ಅವರು ಪ್ರೀತಿ ಮಾಡಿದ್ದು ನಮ್ಮ ಜೊತೆ, ಆದರೆ ಮದುವೆಯಾಗಿದ್ದು ಮಾತ್ರ ಮೋದಿ ಸಾಹೇಬರ ಜೊತೆ!) ಎಂದು ಖರ್ಗೆ ಹೇಳಿದಾಗ ಸದನದಲ್ಲಿ ನಗುವಿನ ಅಲೆ ಎದ್ದಿತು. ಸ್ವತಃ ಪ್ರಧಾನಿ ಮೋದಿ ಅವರು ಕೂಡ ಖರ್ಗೆ ಅವರ ಈ ಮಾತುಗಳಿಗೆ ಜೋರಾಗಿ ನಕ್ಕರು.

ಸೌಹಾರ್ದತೆಗೆ ಸಾಕ್ಷಿಯಾದ ಸದನ

ರಾಜಕೀಯ ಅಖಾಡದಲ್ಲಿ ಪರಸ್ಪರ ಕಿತ್ತಾಡುವ ನಾಯಕರು, ವಿದಾಯದ ಅಧಿವೇಶನದಲ್ಲಿ ಪಕ್ಷಾತೀತವಾಗಿ ಒಂದಾಗಿ ಸೌಹಾರ್ದತೆ ಮೆರೆದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗಿಂತ ಮಾನವೀಯ ಸಂಬಂಧಗಳು ಮತ್ತು ಹಿರಿಯರ ಅನುಭವ ದೊಡ್ಡದು ಎಂಬುದು ಖರ್ಗೆ ಅವರ ಭಾಷಣದಲ್ಲಿ ಎದ್ದು ಕಾಣುತ್ತಿತ್ತು. ಪ್ರಧಾನಿ ಮೋದಿ ಅವರ ಸಮ್ಮುಖದಲ್ಲೇ ವಿರೋಧ ಪಕ್ಷದ ನಾಯಕರು ಇಂತಹ ಆತ್ಮೀಯ ಮತ್ತು ಮುಕ್ತ ಸಂಭಾಷಣೆ ನಡೆಸಿದ್ದು ಭಾರತೀಯ ಸಂಸದೀಯ ವ್ಯವಸ್ಥೆಯ ಘನತೆಯನ್ನು ಎತ್ತಿ ಹಿಡಿಯಿತು.

ದೇವೇಗೌಡರು, ಖರ್ಗೆ, ಪವಾರ್ ಅವರಿಂದ ಕಲಿಯಿರಿ ಎಂದ ಪ್ರಧಾನಿ ಮೋದಿ

ರಾಜ್ಯಸಭೆಯಲ್ಲಿ ತಮ್ಮ ಭಾಷಣದುದ್ದಕ್ಕೂ ಹಿರಿಯ ನಾಯಕರಾದ ಎಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್ ಪವಾರ್ ಅವರ ಹೆಸರನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಅವರೆಲ್ಲರು ಸಂಸದೀಯ ಸೇವೆಗೆ ನೀಡಿರುವ ಜೀವಮಾನದ ಕೊಡುಗೆಯನ್ನು ಸ್ಮರಿಸಿದರು. ಈ ಎಲ್ಲಾ ಹಿರಿಯ ನಾಯಕರು ತಮ್ಮ ಜೀವನದ ಬಹುದೊಡ್ಡ ಭಾಗವನ್ನು ದೇಶದ ಸೇವೆಗೆ ಮುಡುಪಾಗಿಟ್ಟಿದ್ದಾರೆ, ಇಷ್ಟೊಂದು ದೀರ್ಘ ಅನುಭವವಿದ್ದರೂ, ಇಂದಿಗೂ ಅವರು ಸದನಕ್ಕೆ ತೋರುವ ಸಮರ್ಪಣಾಭಾವ ಶ್ಲಾಘನೀಯ, ಪ್ರತಿಯೊಬ್ಬ ಹೊಸ ಸಂಸದರೂ ಇವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ಪ್ರಧಾನಿ ಹೇಳಿದರು.
ಸದನವು ಒಂದು ಕಾಲದಲ್ಲಿ ಉತ್ಸಾಹಭರಿತ ಹಾಸ್ಯ ಮತ್ತು ವಿಡಂಬನೆಗೆ ಹೆಸರುವಾಸಿಯಾಗಿತ್ತು, ಆದರೆ ಈಗ ಅಂತಹ ಕ್ಷಣಗಳು ಕಡಿಮೆಯಾಗುತ್ತಿವೆ ಎಂದಿರುವ ಪ್ರಧಾನಿ ಮೋದಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರನ್ನು ನಿತ್ಯಹರಿದ್ವರ್ಣ ಎಂದು ಬಣ್ಣಿಸಿದರು(ಏಜೆನ್ಸೀಸ್​).