ಕೇತನ್​​ ಕೊಲೆ ಕೇಸ್​ಗೆ ಪ್ರತ್ಯಕ್ಷದರ್ಶಿ ಸಾಕ್ಷಿ 
ದೇಶ

'ಕೇತನ್​​ರನ್ನ ಕೋಟೆಯಿಂದ ತಳ್ಳಿದ್ದು ಕಂಡಿದ್ದೇನೆ, ನನಗೆ ಜೀವ ಬೆದರಿಕೆ ಹಾಕಿದ್ರು'; ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು..Ketan Agarwal

  • ಭಾವಿ ಪತ್ನಿ ಸಿಯಾ- ಪ್ರೇಮಿ ಚೇತನ್​ನಿಂದ ಕೇತನ್​ ಅಗರ್ವಾಲ್​ ಕೊಲೆ ಕೇಸ್​​

  • ಲೋಹಗಡ್​ ಕೋಟೆಯಲ್ಲಿ ನಡೆದ ಕೊಲೆ ಬಗ್ಗೆ ಸಾಕ್ಷಿ ಹೇಳಿದ ಪ್ರತ್ಯಕ್ಷದರ್ಶಿ.

  • ಸಿಯಾ ಗೋಯಲ್ ಕಾಲಿನಿಂದ ಒದ್ದ ಬಳಿಕ ಚೇತನ್ ತಳ್ಳಿದ್ದ ಬಗ್ಗೆ ಮಾಹಿತಿ

  • ಘಟನೆ ನೋಡಿದ್ದ ಸಾಕ್ಷಿ ಪ್ರಶ್ನಿಸಿದ್ದಕ್ಕೆ, ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಚೇತನ್.

ಪುಣೆ: ನವೋದ್ಯಮಿ ಕೇತನ್​ ಅಗರ್ವಾಲ್​​ ಕೊಲೆ ಪ್ರಕರಣಕ್ಕೆ ಸಾಕಷ್ಟು ಟ್ವಿಸ್ಟ್​ ಸಿಕ್ಕಿದೆ. ಸದ್ಯ ಕೊಲೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಯೊಬ್ಬರು ತನಿಖಾಧಿಕಾರಿಗಳಿಗೆ ನಿರ್ಣಾಯಕ ಸುಳಿವು ನೀಡಿದ್ದಾರೆ. 'ಕೇತನ್​ರನ್ನ ಲೋಹಗಡ್​ ಕೋಟೆಯಿಂದ ತಳ್ಳಿದ್ದನ್ನು ಕಂಡಿದ್ದೇನೆ. ನನಗೆ ಅಂದು ಚೇತನ್​ ಜೀವ ಬೆದರಿಕೆ ಹಾಕಿದ್ದ' ಎಂದು ಹೆಸರು ಬಹಿರಂಗಗೊಳ್ಳದ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರ ಮುಂದೆ ಸಾಕ್ಷಿ ಹೇಳಿದ್ದಾರೆ.

ಸಾಕ್ಷಿದಾರನ ಮಾಹಿತಿಯನ್ನು ಗುಪ್ತವಾಗಿರಿಸಲಾಗಿದೆ. ಕೇತನ್​ ಕೊಲೆ ನಡೆದ ದಿನ ಜೂ.18ರಂದು ಇವರು ತಮ್ಮ ಸ್ನೇಹಿತನ ಕುಟುಂಬಸ್ಥರೊಂದಿಗೆ ಲೋಹಗಡ್ ಕೋಟೆಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಅವರು ಕಂಡ ದೃಶ್ಯಗಳು ಮತ್ತು ಅವರಿಗೆ ಚೇತನ್​ ಬೆದರಿಕೆ ಹಾಕಿದ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.

ಏನಾಗಿತ್ತು ಆದಿನ

ಕೇತನ್​ ಕೊಲೆ ನಡೆದ ದಿನ ಅಂದರೆ, ಜೂ.18ರಂದು ಸಾಕ್ಷಿದಾರ ಸಹ ಸ್ನೇಹಿತನ ಕುಟುಂಬಸ್ಥರೊಂದಿಗೆ ಪುಣೆ ಜಿಲ್ಲೆಯ ಲೋನಾವಾಲಾ ಬಳಿ ಇರುವ ಲೋಹಗಡ್ ಕೋಟೆಗೆ ತೆರಳಿದ್ದರು. ಈ ವೇಳೆ ಕೇತನ್​ ಅಗರ್ವಾಲ್​ ಮತ್ತು ಆತನ ಭಾವಿ ಪತ್ನಿ ಸಿಯಾ ಗೋಯಲ್ ಒಟ್ಟಿಗೆ ತೆರಳುತ್ತಿದ್ದರು. ಅವರ ಹಿಂದೆ ಚೇತನ್ ಸಹ ಇದ್ದದ್ದನ್ನು ಸಾಕ್ಷಿ ಗಮನಿಸಿದ್ದರು ಎಂದು ಹೇಳಿದ್ದಾರೆ.

ಸಾಕ್ಷಿ ಹೇಳಿದ್ದೇನು?

ಅಚ್ಚರಿ ಎನಿಸಿದ್ದು ಎಂದರೆ, ಚೇತನ್​ ಅಂತಹ 33 ಡಿಗ್ರಿ ಸೆಲ್ಸಿಯಸ್​ ಬಿಸಿಲಿನಲ್ಲಿಯೂ ಹೂಡಿ ಧರಿಸಿದ್ದು. ಕುತೂಹಲ ತಾಳಲಾರದೆ ಅವರ ಬಳಿ ಕೇಳಿಯೇ ಬಿಟ್ಟೆ. ಅಲ್ಲ ಈ ಸುಡು ಬಿಸಿಲಿನಲ್ಲಿಯೂ ನೀವು ಹೂಡಿ ಧರಿಸಿದ್ದೇಕೆ ಎಂದೆ. ಆನಂತರ ಆತ ದೇವಸ್ಥಾನದ ಬಳಿ ಕುಳಿತ ನನಗೂ ಹೊಟ್ಟೆಗೆ ಆಯಾಸವಾಗಿ ಸ್ವಲ್ಪ ಸಮಯದ ನಂತರ ಕುಳಿತೆ. ಆದರೆ, ಚೇತನ್​​ ಅವರು ಸಿಯಾ ಮತ್ತು ಕೇತನ್​ ಪ್ರಯಾಣ ಆರಂಭಿಸಿದರೆ, ಅವರನ್ನು ಫಾಲೋ ಮಾಡುತ್ತಿದ್ದರು ಎನ್ನುವುದನ್ನು ನಾನು ಗಮನಿಸಿದೆ ಎಂದು ಸಾಕ್ಷಿದಾರ ಹೇಳಿದ್ದಾರೆ.

ಇಬ್ಬರೂ ಕೊಂದರು

ನಾನು ವಾಪಸ್ ಎದ್ದು ನಡೆಯುವಾಗ ಸಿಯಾ ಅವರು ಚೇತನ್ ಕಡೆಗೆ ಕೈ ತೋರಿಸುವುದನ್ನು ನೋಡಿದೆ. ಸಿಯಾ ಕೆಳಗೆ ಕುಳಿತು ಕೇತನ್ ಅವರ ಕಾಲಿಗೆ ಒದ್ದಿದ್ದಾರೆ. ಇದರ ಬೆನ್ನಲ್ಲೇ, ಚೇತನ್ ಹಿಂದಿನಿಂದ ಬಂದು ಉದ್ಯಮಿಯನ್ನು ಕಮರಿಯ ಕಡೆಗೆ ತಳ್ಳಿದ್ದಾನೆ ಎನ್ನುವುದನ್ನು ಉಲ್ಲೇಖಿಸಿದ್ದಾರೆ.

ಕೊಲೆ ಬೆದರಿಕೆ

ಈ ಬಗ್ಗೆ ಚೇತನ್​ ಬಳಿ ಸಾಕ್ಷಿದಾರ ಪ್ರಶ್ನಿಸಿದ್ದಕ್ಕೆ, ಚೇತನ್​ ಜಾಸ್ತಿ ಮಾತನಾಡಬೇಡ. ಬಾಯಿ ಮುಚ್ಚಿಕೊಂಡಿದ್ದರೆ ಸರಿ, ಇಲ್ಲವಾದಲ್ಲಿ ನಿನ್ನ ಗತಿಯೂ ಹೀಗೆ ಆಗತ್ತೆ. ಕೋಟೆಯಿಂದ ಕೆಳಕ್ಕೆ ತಳ್ಳಲು ಹೆಚ್ಚು ಸಮಯ ಬೇಕಿಲ್ಲ ಎಂದು ಬೆದರಿಕೆ ಹಾಕಿದ್ದನು. ಹೀಗಾಗಿ ನಾನು ನನ್ನ ಸ್ನೇಹಿತನಿಗೂ ಈ ಘಟನೆ ಬಗ್ಗೆ ತಿಳಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.

ಮುಂದುವರೆದು, ಈ ಘಟನೆ ಅರಗಿಸಿಕೊಳ್ಳಲಾಗಿಲ್ಲ. ಕೋಟೆ ಹತ್ತಿ ಇಳಿದ ನಂತರ ಜ್ವರ, ಮೈಕೈ ನೋವು ಶುರುವಾಗಿತ್ತು. ನಂತರ ಕೇಸ್​ ಬಗ್ಗೆ ನಾನು ಟಿವಿಯಲ್ಲಿ ನೋಡಿದೆ. ಹೀಗಾಗಿ, ಠಾಣೆಗೆ ಬಂದು ದೂರು ಕೊಟ್ಟೆ ಎಂದಿದ್ದಾರೆ. ಕೇತನ್​ ಕೊಲೆ ನಡೆದ ಐದು ದಿನಗಳ ನಂತರ ಅಂದರೆ ಜೂ.23 ರಂದು ಸಾಕ್ಷಿದಾರ ಪೊಲೀಸ್ ಠಾಣೆಗೆ ಬಂದು ತನ್ನ ಹೇಳಿಕೆಯನ್ನು ದಾಖಲಿಸಿದ್ದಾರೆ.

ಮತ್ತೊಬ್ಬ ಸಾಕ್ಷಿಯಿಂದಲೂ ಹೂಡಿ ಬಗ್ಗೆ ಪ್ರಶ್ನೆ

ಲೋಹಗಡ್​ ಕೋಟೆಗೆ ಟ್ರೆಕ್ಕಿಂಗ್​ ಮಾಡುವಾಗ ಚೇತನ್​ನನ್ನು ಕಂಡ ಬಗ್ಗೆ ಮತ್ತೊಬ್ಬ ಪ್ರತ್ಯಕ್ಷದರ್ಶಿ ಸಾಕ್ಷಿ ನುಡಿದಿದ್ದಾರೆ. ರಣಬಿಸಿಲಿನಲ್ಲಿ ನೀವು ಈ ಹೂಡಿ ಧರಿಸಿರೋದ್ಯಾಕೆ ಎಂದು ನಾನು ಪ್ರಶ್ನಿಸಿದ್ದೆ. ಆದರೆ, ಆತ ಯಾವುದನ್ನು ಬಾಯ್ಬಿಟ್ಟಲ್ಲ. ಸಾರಿ ಎಂದು ಮುಂದೆ ನಡೆದುಕೊಂಡು ಹೊರಟ ಎಂದು ಹೇಳಿದರು.

ಡಿಜಿಟಲ್​ ಸಾಕ್ಷಿ

ಪ್ರತ್ಯಕ್ಷದರ್ಶಿಗಳ ಸಾಕ್ಷಿ ಜೊತೆಗೆ ಪುಣೆ ಪೊಲೀಸರು ದೊಡ್ಡ ಪ್ರಮಾಣದಲ್ಲಿ ಡಿಜಿಟಲ್​ ಸಾಕ್ಷ್ಯವನ್ನು ಪರಿಶೀಲನೆ ನಡೆಸಿದ್ದಾರೆ. ಸಿಯಾ ಹಾಗೂ ಚೇತನ್​​, ರಿತೇಶ್ ಹಂಗೆ ವಿರುದ್ಧ ಸದ್ಯ ತನಿಖೆ ಮುಂದುವರೆದಿದೆ. ಇವರ ಮೊಬೈಲ್​​, ಪೆನ್​ ಡ್ರೈವ್, ರಿಕವರಿ ಮೆಸೇಜ್​ಗಳು, ಕಾಲ್​ ರೆಕಾರ್ಡ್​ ಸೋಶಿಯಲ್​ ಮೀಡಿಯಾದಿಂದ ಹೊರ ತೆಗೆಯಲಾದ ಮಾಹಿತಿ ಸೇರಿದಂತೆ 12 ಟಿಬಿಯಷ್ಟು ಡೇಟಾ ಕಲೆಕ್ಟ್ ಮಾಡಲಾಗಿದೆ ಎಂದು ಪೊಲೀಸರು ವಿಶ್ಲೇಷಿಸಿದ್ದಾರೆ.

ಐಫೋನ್‌ನಿಂದ ಡೇಟಾವನ್ನು ಡಿಲೀಟ್ ಮಾಡುವುದು ಹೇಗೆ, ಚಾಟ್ ಇತಿಹಾಸವನ್ನು ತೆರವುಗೊಳಿಸುವುದು ಮತ್ತು ಡಿಲೀಟ್ ಆದ ಮಾಹಿತಿ ಮರುಪಡೆಯದಂತೆ ತಡೆಯುವ ವಿಧಾನಗಳ ಕುರಿತಾದ ಹುಡುಕಾಟ ಇತಿಹಾಸವನ್ನು ಕೂಡ ತನಿಖಾಧಿಕಾರಿಗಳು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ.

ಚಾರ್ಜ್‌ಶೀಟ್ ಸಲ್ಲಿಕೆ

ಪುಣೆ ಗ್ರಾಮಾಂತರ ಪೊಲೀಸರು ಕೇತನ್​ ಕೊಲೆ ಕೇಸಿನ 5,053 ಪುಟಗಳ ಚಾರ್ಜ್‌ಶೀಟ್ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಇದೊಂದು ಸಹಜ ಸಾವು ಎಂದು ದಾಖಲಿಸಿಕೊಳ್ಳಲಾಗಿತ್ತು. ಆದರೆ, ಪೊಲೀಸರು ನಡೆಸಿದ ತೀವ್ರ ತನಿಖೆಯಿಂದ ಮೂವರು ಆರೋಪಿಗಳು ನಡೆಸಿದ ಸಂಚಿನಿಂದಲೇ ಕೇತನ್​​​ ಕೊಲೆ ನಡೆದಿದ್ದು ಎನ್ನುವುದು ತಿಳಿದುಬಂದಿದೆ. ಅಷ್ಟೇ ಅಲ್ಲದೇ ಮೂವರು ಪ್ರತ್ಯಕ್ಷದರ್ಶಿಗಳು ಸಾಕ್ಷಿ ಹೇಳಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).