ಸವಾಲಿನೊಂದಿಗಿದೆ ಸಾರ್ಥಕತೆ  
ದೇಶ

ಸವಾಲಿನೊಂದಿಗಿದೆ ಸಾರ್ಥಕತೆ

ವಿಶ್ವಾಸ್​ ಎನ್​ ಜೋಳದಾಳು
"ವೈದ್ಯೋ ನಾರಾಯಣೋ ಹರಿಃ" ಎಂಬ ಮಾತಿದೆ. ರೋಗಿಗಳ ಕಾಯಿಲೆಗಳನ್ನು ನಿವಾರಿಸಿ, ಅವರಿಗೆ ಜೀವದಾನ ಮಾಡುವುದರಿಂದ ವೈದ್ಯರಲ್ಲಿ ದೇವರನ್ನು ಕಾಣುತ್ತೇವೆ. ಆದರೆ, ವೈದ್ಯ ವೃತ್ತಿಯ ಸವಾಲುಗಳು ಒಂದೆರಡಲ್ಲ. ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತೀವ್ರ ಒತ್ತಡದಿಂದ ಕೂಡಿರುವ ವೃತ್ತಿಬದುಕಿನ ನಡುವೆ ವೈದ್ಯರ ವೈಯಕ್ತಿಕ ಬದುಕು ಹೇಗಿರುತ್ತದೆ, ಏನೆಲ್ಲ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಅದಕ್ಕೆ ಪರಿಹಾರದ ಮಾರ್ಗವೇನು ಎಂಬ ಅನುಭವವನ್ನು ವೈದ್ಯರ ದಿನದ ಹಿನ್ನೆಲೆಯಲ್ಲಿ ವಿವಿಧ ವಿಭಾಗದ ಖ್ಯಾತ ವೈದ್ಯರು ವಿಜಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

ವೈದ್ಯರಿಗೂ ಬೇಕು ಫಿಟ್​ನೆಸ್​

ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರಿಗೆ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನವನ್ನು ಸಮತೋಲನಗೊಳಿಸುವ ಸವಾಲು ಇದ್ದೇ ಇದೆ. ಅದರಲ್ಲೂ ಮಹಿಳೆಯರು ಈ ವಿಚಾರದಲ್ಲಿ ತುಂಬ ಕಲಿಯಬೇಕಾಗುತ್ತದೆ. ನಮ್ಮಲ್ಲಿ ಬರುವ ರೋಗಿಗಳು ದೈಹಿಕವಾಗಿ ಮಾತ್ರ ಕುಗ್ಗಿರುವುದಿಲ್ಲ, ಭಾವನಾತ್ಮಕವಾಗಿಯೂ ಸಮಸ್ಯೆಗಳು ಇರುತ್ತವೆ. ಕೆಲವೊಮ್ಮೆ ಚಿಕಿತ್ಸೆ ಪಡೆಯುವ ಧೈರ್ಯ ಇರುವುದಿಲ್ಲ. ಅಂತಹ ರೋಗಿಗಳನ್ನು ನಾವು ವೈಜ್ಞಾನಿಕವಾಗಿ ಮಾತ್ರ ಚಿಕಿತ್ಸೆ ಕೊಟ್ಟರೆ ಫಲಿಸುವುದಿಲ್ಲ. ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಅವರಲ್ಲಿ ಧೈರ್ಯ ತುಂಬಿ, ಅವರ ಎಲ್ಲ ಭಯವನ್ನು ದೂರಗೊಳಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಪ್ರತಿದಿನ ಇಂತಹ ರೋಗಿಗಳ ಮಧ್ಯೆ ಒತ್ತಡದಲ್ಲಿ ಕೆಲಸ ಮಾಡಿ, ದಿನದ ಕೊನೆಯಲ್ಲಿ ನಾವೇ ದೈಹಿಕವಾಗಿ ಸುಸ್ತಾಗಿಬಿಡುತ್ತೇವೆ. ಮಾನಸಿಕ ಒತ್ತಡ ನಮಗೂ ಬಾಧಿಸುತ್ತದೆ.
ಇಂತಹ ಒತ್ತಡಗಳಿಂದ ದೂರವಿರಲು ನಾನು ದೈನಂದಿನ ಚಟುವಟಿಕೆಗಳ ಜತೆ ವ್ಯಾಯಾಮ, 5 ಕಿ.ಮೀ. ಓಟವನ್ನು ಅಳವಡಿಸಿಕೊಂಡಿದ್ದೇನೆ. ಇದರಿಂದ ನನ್ನ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಯಾವಾಗಲೂ ಸ್ಥಿರವಾಗಿರುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಒತ್ತಡದಲ್ಲಿ ಬದುಕುವ ಪ್ರತಿಯೊಬ್ಬರಿಗೂ ನಾನು ಈ ಸಲಹೆಯನ್ನು ಕೊಡುತ್ತೇನೆ. ನಮ್ಮಲ್ಲಿಗೆ ಬರುವ ರೋಗಿಗಳಿಗೂ ಇದನ್ನೇ ಹೇಳುತ್ತೇನೆ. ವೈದ್ಯರೂ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡುವುದು ಅಷ್ಟೇ ಮುಖ್ಯವಾಗಿರುತ್ತದೆ. ನಾವು ರೋಗಿಗಳಿಗೆ ಏನು ಸಲಹೆಗಳನ್ನು ಕೊಡುತ್ತೇವೋ ಅದನ್ನು ನಾವೂ ಅಳವಡಿಸಿಕೊಳ್ಳುವುದು ಅವಶ್ಯವಾಗಿರುತ್ತದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯೆಯಾಗಿ ಕೆಲಸ ಮಾಡುವುದು ಸವಾಲಿನದ್ದು. ತಾಳ್ಮೆ, ಸ್ಥಿರತೆ ಇರಬೇಕಾಗುತ್ತದೆ. ನಾನು ಕ್ಯಾನ್ಸರ್​ ಚಿಕಿತ್ಸೆಯ ವೈದ್ಯೆ ಆದ್ದರಿಂದ ನಮ್ಮ ಚಿಕಿತ್ಸಾ ವಿಧಾನ ದೀರ್ಘಾವಧಿಯದ್ದು. 5-6 ತಿಂಗಳು ರೋಗಿಯೊಂದಿಗೆ ಒಡನಾಡಿದಾಗ ನಮಗೆ ತುಂಬ ಹತ್ತಿರವಾಗುತ್ತಾರೆ. ಕೆಲವೊಮ್ಮೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟರು ಎಂದಾದರೆ ನಮಗೂ ತುಂಬ ಬೇಸರವಾಗುತ್ತದೆ. ಆ ಸಮಯದಲ್ಲಿ ನಾವು ಕಷ್ಟವನ್ನು ಅನುಭವಿಸುತ್ತೇವೆ. ತುಂಬ ರೋಗಿಗಳಿಗೆ ಚಿಕಿತ್ಸೆ ನೀಡುವುದರಿಂದ ಇಲ್ಲಿ ನಾವು ನಮ್ಮದೇ ಒಂದು ಲಕ್ಷ್ಮಣ ರೇಖೆಯನ್ನು ಹಾಕಿಕೊಳ್ಳಬೇಕು. ಯಾವುದೂ ನಮ್ಮನ್ನು ಮಾನಸಿಕವಾಗಿ ಕುಗ್ಗಿಸದಂತೆ ನಾವೇ ನೋಡಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭಗಳನ್ನು ನಿಭಾಯಿಸುವುದು ವೈದ್ಯರ ಕರ್ತವ್ಯವಾಗಿರುತ್ತದೆ.
- ಡಾ. ಜಯಂತಿ ತುಂಸಿ, ಕ್ಯಾನ್ಸರ್​ ತಜ್ಞರು

ಆತ್ಮಾವಲೋಕನದ ಮಾರ್ಗ

ಚಿಕಿತ್ಸೆ ಕೋರಿ ಬರುವ ಪ್ರತಿಯೊಬ್ಬ ರೋಗಿಗೂ ಅಗತ್ಯ ಆರೈಕೆ ಮಾಡುವುದು ವೈದ್ಯನೊಬ್ಬನ ಕರ್ತವ್ಯ. ಇದನ್ನು ಎಲ್ಲ ವೈದ್ಯರೂ ಸದಾ ಕಾಲ ನೆನಪಿನಲ್ಲಿಟ್ಟುಕೊಂಡೇ ರೋಗಿಯ ಜೀವ ಉಳಿಸುವ ಕೆಲಸ ಮಾಡುತ್ತಾರೆ. ಇದರ ಹೊರತಾಗಿಯೂ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆದು ವೈದ್ಯರನ್ನು ತಬ್ಬಿಬ್ಬುಗೊಳಿಸುತ್ತವೆ. ರೋಗಿ ಪ್ರಾಣ ಕಳೆದುಕೊಂಡಾಗ, ಕಣ್ಣೆದುರಿಗೆ ಇದ್ದ ರೋಗಿಯನ್ನು ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂಬ ಬೇಸರ ಕಾಡುತ್ತದೆ. ಬಹುಕಾಯಿಲೆ ಉಳ್ಳ ರೋಗಿಯನ್ನು ಆರೈಕೆ ಮಾಡುತ್ತಿದ್ದ ವೈದ್ಯರ ತಂಡವು ಪರಸ್ಪರ ಚರ್ಚಿಸಿ ರೋಗಿಗೆ ಇನ್ನಷ್ಟು ಉತ್ತಮ ಚಿಕಿತ್ಸೆ ನೀಡಿ ಉಳಿಸಿಕೊಳ್ಳಬಹುದಿತ್ತೆ ಎಂಬ ಬಗ್ಗೆಯೂ ಚಿಂತನ-ಮಂಥನ ಮಾಡಿಕೊಳ್ಳುತ್ತೇವೆ.
ಕೆಲ ಪ್ರಕರಣಗಳಲ್ಲಿ ರೋಗಿಯನ್ನು ಉಳಿಸಿಕೊಳ್ಳಲು ತೀರ ಕಷ್ಟವೆನಿಸುತ್ತದೆ. ಇದು ರೋಗಿಯ ಕುಟುಂಬದವರಿಗೂ ತಿಳಿದಿರುತ್ತದೆ. "ಹೇಗಾದರೂ ಮಾಡಿ ನಮ್ಮ ಅಪ್ಪ/ಅಮ್ಮನನ್ನು ಬದುಕಿಸಿ" ಎಂದು ಅಳಲು ತೋಡಿಕೊಳ್ಳುತ್ತಾರೆ. ಇದನ್ನು ನಾವು ಸವಾಲಾಗಿ ಸ್ವೀಕರಿಸಿ ಚಿಕಿತ್ಸೆ ಮುಂದುವರಿಸುತ್ತೇವೆ. ಚಿಕಿತ್ಸೆ ಯಶಸ್ವಿಯಾಗಿ ಇನ್ನೇನು ಮನೆಗೆ ಕಳುಹಿಸುವ ಮುನ್ನ ಅಥವಾ ಮನೆಗೆ ತೆರಳಿದ ಬಳಿಕ ರೋಗಿ ಸಾವಿಗೀಡಾದರೆ ವೈದ್ಯರಿಗೆ ಹೆಚ್ಚು ಆಘಾತವಾಗುತ್ತದೆ. ಆ ಸಾವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. 
ಕೆಲವೊಮ್ಮೆ ಮಾನಸಿಕವಾಗಿಯೂ ಕುಗ್ಗುವ ಪ್ರಸಂಗ ಎದುರಾಗುತ್ತದೆ. ಹೀಗೇಕಾಯಿತು ಎಂಬ ಪ್ರಶ್ನೆ ಉದ್ಭವಿಸಿದರೂ, ತಕ್ಷಣವೇ ಆಘಾತದಿಂದ ಹೊರಬಂದು ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ನಮ್ಮನ್ನು ನಾವೇ ಸಂತೈಸಿಕೊಳ್ಳುತ್ತೇವೆ. ಇನ್ನೂ ಕೆಲವೊಮ್ಮೆ ಮಧ್ಯರಾತ್ರಿಯಾದರೂ, ಚಿಕಿತ್ಸೆ ಪಡೆದ ರೋಗಿಯ ಆರೋಗ್ಯ ಸುಧಾರಣೆ ಆಯಿತು ಎಂಬುದನ್ನು ಖಾತರಿಪಡಿಸಿಕೊಂಡ ಬಳಿಕವೇ ಮನೆಗೆ ತೆರಳುವುದುಂಟು. ಇದರ ಹೊರತಾಗಿಯೂ ನಮ್ಮಿಂದ ಏನಾದರೂ ತಪ್ಪು ನಡೆದೀತೆ ಎಂಬ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ತಪ್ಪಿಲ್ಲದಿದ್ದರೆ, ರೋಗಿಯನ್ನು ಉಳಿಸಿಕೊಳ್ಳಲು ಬೇಕಾದ ಪ್ರಯತ್ನದತ್ತಲೇ ನಮ್ಮ ದೃಷ್ಟಿ ನೆಟ್ಟಿರುತ್ತದೆ.
- ಡಾ. ಎ. ಜಗದೀಶ್​, ಹಿರಿಯ ಮನೋವೈದ್ಯರು

ಒತ್ತಡ ನಿವಾರಣೆಗೆ ಬೇಕಿದೆ ಮದ್ದು

ರೋಗಿಗಳ ಪ್ರಾಣ ಉಳಿಸುವ ನಿರಂತರ ಜವಾಬ್ದಾರಿಯಲ್ಲಿ ಹೆಚ್ಚಿನ ವೈದ್ಯರು ಕುಟುಂಬದ ಸಮಸ್ಯೆಗಳನ್ನು ನುಂಗಿಕೊಂಡು ವ್ಯವಹರಿಸುತ್ತಾರೆ. ಮನೆಯಲ್ಲಿ ಮಕ್ಕಳು ಕಾಯಿಲೆ ಬಿದ್ದು ವಿಶ್ರಾಂತಿ ಪಡೆಯುತ್ತಿದ್ದರೂ ಅವರನ್ನು ಆರೈಕೆ ಮಾಡಲಾರದೆ ಆಸ್ಪತ್ರೆಗೆ ಓಡುವ ನಿದರ್ಶನಗಳು ನಮ್ಮ ಮುಂದಿವೆ. ಇತ್ತೀಚೆಗೆ, ವೈದ್ಯರೊಬ್ಬರು ಮಗಳ ಅಕಾಲಿಕ ಮರಣದ ನಡುವೆಯೂ, ತಮ್ಮ ವೈಯಕ್ತಿಕ ನೋವು ಮರೆತು ಅಂತ್ಯಸಂಸ್ಕಾರದ ಮಾರನೆಯ ದಿನ ಸಂಕೀರ್ಣ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ಪ್ರಾಣ ಉಳಿಸಿದ್ದಾರೆ. ವೈದ್ಯರ ಕರ್ತವ್ಯನಿಷ್ಠೆಗೆ ಇದೊಂದು ಉದಾಹರಣೆ. ವೈದ್ಯ ವೃತ್ತಿ ಸೇವಾ ಮನೋಭಾವ ಹೊಂದಿದ್ದರೂ, ಅದು ಸವಾಲಿನ ಕೆಲಸವೂ ಹೌದು. ತೀವ್ರ ನಿಗಾ ಘಟಕ ಮತ್ತು ತುರ್ತು ಚಿಕಿತ್ಸಾ ವಿಭಾಗದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುವ ವೈದ್ಯರು ನಿದ್ರಾಹೀನತೆ, ಆತಂಕ, ಅತಿಯಾದ ತೂಕ, ಅಧಿಕ ರಕ್ತದೊತ್ತಡ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. 
ಇದಲ್ಲದೆ ರೋಗಿ ಸಾವಿಗೀಡಾದರೆ ಅವರ ಸಂಬಂಧಿಕರಿಂದ ಮಾನಸಿಕ ಕಿರುಕುಳ, ಕೆಲವೊಮ್ಮೆ ದೈಹಿಕ ಹಲ್ಲೆಯ ಭೀತಿಯನ್ನು ಎದುರಿಸಬೇಕಾಗುತ್ತದೆ. ಈ ಕ್ಲಿಷ್ಟಕರ ಸನ್ನಿವೇಶವನ್ನು ನಿಭಾಯಿಸಲು ವೈದ್ಯರಿಗೆ ಆಸ್ಪತ್ರೆಗಳು ನಿಯಮಿತ ವಿಶ್ರಾಂತಿ, ನಿರಂತರ ತರಬೇತಿ ಹಾಗೂ ಮಾನಸಿಕ ಪುನಶ್ಚೇತನ ಶಿಬಿರಗಳನ್ನು ನಡೆಸುವ ಅಗತ್ಯವಿದೆ. ನಿರಂತರ ಕೆಲಸ, ಮಾನಸಿಕ ಒತ್ತಡ ಹಾಗೂ ಅನಿಯಮಿತ ನಿದ್ರಾಹಾರಗಳಿಂದ ವೈದ್ಯಕೀಯ ಸಮುದಾಯ ಬಳಲುತ್ತಿದೆ. ಇದನ್ನು ನಿಭಾಯಿಸಲು ಸರ್ಕಾರ ಮತ್ತು ವೈದ್ಯಕೀಯ ಸಂಘಟನೆಗಳು ಒಟ್ಟಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.
- ಡಾ. ಪ್ರೊ. ಪಿ. ಎಂ. ಸೂರ್ಯನಾರಾಯಣ ಶರ್ಮ, ನರರೋಗ ತಜ್ಞರು

ಕುಗ್ಗದಿರು ಮನವೇ!

ವೈದ್ಯರಾಗಿ ನಾವು ಪ್ರತಿದಿನ ರೋಗಿಗಳನ್ನು ನೋಡುತ್ತಲೇ ಇರುತ್ತೇವೆ. ವಿವಿಧ ಕಾಯಿಲೆಗಳ ಬಗ್ಗೆ ಅರಿವಿರುವ ನಾವು ನಮಗೇನಾದರೂ ಲಕ್ಷಣಗಳು ಕಾಣಿಸಿಕೊಂಡಾಗ ನಿರ್ಲಕ್ಷಿಸುವ ಸಂದರ್ಭಗಳು ಅಧಿಕ. ಕೆಲವೊಮ್ಮೆ ಅದು ಅತಿಯಾದ ಆತ್ಮವಿಶ್ವಾಸದಿಂದಲೂ ಆಗಿರಬಹುದು. ನಮಗೆ ಯಾವುದೇ ಕಾಯಿಲೆಗಳು ಬರಲ್ಲ ಎಂಬ ಭ್ರಮೆಯಲ್ಲಿ ಇರುತ್ತೇವೆ. ಆದರೆ, ಒಬ್ಬ ರೋಗಿಯನ್ನು ನಾವು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೇವೋ, ಅಷ್ಟೇ ಕಾಳಜಿಯನ್ನು ನಾವು ನಮಗೆ ಕೊಡುವುದು ಮುಖ್ಯವಾಗುತ್ತದೆ. ನಮ್ಮ ಕೆಲಸದ ಒತ್ತಡದಲ್ಲಿ ಅದನ್ನೆಲ್ಲ ನಾವು ಮರೆತು ಬಿಡಬಹುದು. ಎಲ್ಲ ಕೆಲಸದಲ್ಲೂ ಒತ್ತಡದ ವಾತಾವರಣ ಇರಬಹುದು, ವೈದ್ಯ ವೃತ್ತಿಯಲ್ಲಿ ಇದು ಸಾಮಾನ್ಯ ಎನಿಸಿಬಿಟ್ಟಿದೆ. ಆದರೂ ಒತ್ತಡದಲ್ಲೇ ನಾವು ಜೀವನ ಮಾಡುತ್ತಿರುತ್ತೇವೆ. 
ಕರೋನದ ಬಳಿಕ ಹೃದಯಾಘಾತ, ಪಾರ್ಶ್ವವಾಯು ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರ ನಿಖರವಾದ ಕಾರಣ ತಿಳಿಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ವೈದ್ಯರಾದ ನಾವು ಸ್ವಂತ ಆರೋಗ್ಯದ ಕಡೆಗೆ ಗಮನಹರಿಸುವುದು ಒಳ್ಳೆಯದು. ಕೆಲವೊಮ್ಮೆ ವೈದ್ಯರಿಗೆ ವೃತ್ತಿಯು ಅನುಕೂಲವಾಗಿರುತ್ತದೆ. ಏಕೆಂದರೆ, ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಆದಾಗ, ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು. ಅಥವಾ ಸಹೋದ್ಯೋಗಿಗಳ ಸಲಹೆ, ಸಹಾಯದಿಂದ ಉತ್ತಮ ಚಿಕಿತ್ಸೆ ಪಡೆದುಕೊಳ್ಳಬಹುದು. ಆದ್ದರಿಂದ ವೈದ್ಯ ವೃತ್ತಿಯಲ್ಲಿ ಇರುವವರು ಇಂತಹ ಸಂದರ್ಭಗಳನ್ನು ಜಾಣ್ಮೆಯಿಂದ ಎದುರಿಸುವುದು ಒಳಿತು. ಅತಿಯಾದ ಆತ್ಮವಿಶ್ವಾಸದಿಂದ ಕೆಲವೊಮ್ಮೆ ನಮ್ಮ ಜೀವಕ್ಕೂ ಅಪಾಯ ಬರುವ ಸಾಧ್ಯತೆಗಳಿವೆ. ವೈದ್ಯರ ಆರೋಗ್ಯಕ್ಕೆ ನಿದ್ರಾಹೀನತೆ ತುಂಬ ಸಮಸ್ಯೆ ತರುತ್ತದೆ. ಒತ್ತಡದ ಕೆಲಸ, ಜೀವನಶೈಲಿಯಿಂದಾಗಿ ಬೊಜ್ಜು ಅಧಿಕವಾಗಿ ಬೇರೆ ಬೇರೆ ಕಾಯಿಲೆಗಳಿಗೆ ಕಾರಣವಾಗುತ್ತದೆ.
ವೈದ್ಯರಾದವರು ರೋಗಿಗಳ ಜೀವ ಉಳಿಸಿದಾಗ ಹಿಗ್ಗಲೂ ಬಾರದು, ರೋಗಿಗಳ ಜೀವ ಕಳೆದುಕೊಂಡಾಗ ಕುಗ್ಗಲೂ ಬಾರದು. ನಮ್ಮ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಂಡಿದ್ದರೆ, ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯ. ಕುಗ್ಗುವ ಮನಸ್ಥಿತಿ ಹೊಂದಿದರೆ, ಅದು ಇನ್ನೊಂದು ರೋಗಿಯ ಮೇಲೆ ಪರಿಣಾಮ ಬೀರಬಹುದು. ಸಹೋದ್ಯೋಗಿಗಳ ಸಹಾಯದಿಂದ ಇಂತಹ ಸಂದರ್ಭಗಳನ್ನು ಚೆನ್ನಾಗಿ ನಿಭಾಯಿಸಬಹುದು. ಆದರೆ, ಓರ್ವ ರೋಗಿಯನ್ನು ಕಳೆದುಕೊಂಡರೆ, ನಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ನೋವು ಆಗುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡುವುದನ್ನು ನಾವು ನೋಡಿದ್ದೇವೆ. ಹೀಗೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
- ಡಾ. ಸುಶ್ರುತ ಗೌಡ, ನರರೋಗ ಹಾಗೂ ಪಾರ್ಶ್ವವಾಯು ತಜ್ಞರು