ಪ್ರಧಾನಿ ನರೇಂದ್ರ ಮೋದಿ  
ದೇಶ

ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಮುಹೂರ್ತ ಫಿಕ್ಸ್​ ಆಯ್ತಾ? ಸಚಿವರಿಗೆಲ್ಲಾ ವಿದೇಶ ಪ್ರವಾಸ ರದ್ದು ಮಾಡುವಂತೆ ನಮೋ ಸೂಚನೆ! | Parliament Winter Session

ನವದೆಹಲಿ: ಸಂಸತ್ತಿನ ಮುಂಬರುವ ಅಧಿವೇಶನಕ್ಕಾಗಿ (Parliament Winter Session) ಡಿಸೆಂಬರ್ 15ರೊಳಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಮತ್ತು ಅಲ್ಲಿಯವರೆಗೆ ವಿದೇಶ ಪ್ರವಾಸಗಳನ್ನು ತಪ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, ಮುಂಬರುವ ಅಧಿವೇಶನವು ಅತ್ಯಂತ ಮಹತ್ವದ ಶಾಸಕಾಂಗ ಮತ್ತು ರಾಜಕೀಯ ಹೋರಾಟಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಅಧಿವೇಶನದ ದಿನಾಂಕ ಮತ್ತು ಅವಧಿಯ ಕುರಿತು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆ ಪಕ್ಕಾನಾ?

ಚಳಿಗಾಲದ ಅಧಿವೇಶನ ಕರೆಯಲು ವಿಳಂಬವಾಗುತ್ತಿರುವ ಕುರಿತು ವಿರೋಧ ಪಕ್ಷಗಳು ನಿರಂತರವಾಗಿ ಪ್ರಶ್ನಿಸುತ್ತಿರುವ ಬೆನ್ನಲ್ಲೇ ಸರ್ಕಾರದ ಈ ಸಿದ್ಧತೆಗಳು ಗಮನ ಸೆಳೆದಿವೆ. ಆಗಸ್ಟ್ 13ರಂದು ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ನಿನ್ನೆ ರಾತ್ರಿಯವರೆಗೆ 103 ದಿನಗಳು ಕಳೆದಿದ್ದರೂ, ಮುಂಗಾರು ಅಧಿವೇಶನವನ್ನು ಇನ್ನೂ ಔಪಚಾರಿಕವಾಗಿ ಮುಕ್ತಾಯಗೊಳಿಸಲಾಗಿಲ್ಲ. ಈ ವಿಳಂಬದ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನದ ಬಗ್ಗೆಯೂ ಊಹಾಪೋಹಗಳು ಎದ್ದಿವೆ. ವಿಶೇಷವಾಗಿ ಕ್ಷೇತ್ರಗಳ ಪುನರ್ವಿಂಗಡಣೆ ಮತ್ತು ಅದಕ್ಕೆ ಸಂಬಂಧಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ಕಾರ ಮಂಡಿಸಲಿದೆಯೇ ಎಂಬ ಕುತೂಹಲ ಮೂಡಿದೆ.

ಪ್ರಸ್ತಾವಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವುದು ಸರ್ಕಾರಕ್ಕೆ ಸಂಖ್ಯಾಬಲದ ಸವಾಲಾಗಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಮಸೂದೆ ಪಾಸಾಗಲು ಮೂರನೇ ಎರಡರಷ್ಟು ಅಂದರೆ 361 ಮತಗಳ ಅಗತ್ಯವಿದೆ. ಪ್ರಸ್ತುತ ಮೂರು ಸ್ಥಾನಗಳು ಖಾಲಿ ಇರುವುದರಿಂದ ಸದನದ ಬಲ 540 ಆಗಿದೆ. ಆಡಳಿತಾರೂಢ ಎನ್‌ಡಿಎ 320 ಸಂಸದರನ್ನು ಹೊಂದಿದ್ದು, ಅಗತ್ಯ ಬಹುಮತ ತಲುಪಲು ವಿರೋಧ ಪಕ್ಷಗಳ ಬೆಂಬಲ ಅನಿವಾರ್ಯವಾಗಿದೆ.

ಕಳೆದ ಏಪ್ರಿಲ್ 17ರಂದು ನಡೆದ ವಿಶೇಷ ಅಧಿವೇಶನದಲ್ಲಿ ಸಂವಿಧಾನ (131ನೇ ತಿದ್ದುಪಡಿ) ಮಸೂದೆ, 2026 ಅಗತ್ಯ ಬೆಂಬಲ ಸಿಗದೆ ಸೋಲು ಕಂಡಿತ್ತು. ಆದರೆ, ಆ ಬಳಿಕ 20 ಬಂಡಾಯ ಟಿಎಂಸಿ ಸಂಸದರು ಎನ್‌ಸಿಪಿಐ ಜೊತೆ ವಿಲೀನಗೊಂಡು ಎನ್‌ಡಿಎಗೆ ಬೆಂಬಲ ಸೂಚಿಸಿದ್ದಾರೆ ಮತ್ತು 6 ಶಿವಸೇನೆ ಸಂಸದರು ಏಕನಾಥ್ ಶಿಂಧೆ ಬಣ ಸೇರಿದ್ದಾರೆ. ಇದರಿಂದ ಸರ್ಕಾರದ ಬಲ ಹೆಚ್ಚಾಗಿದ್ದರೂ, ಇನ್ನೂ ಹೆಚ್ಚುವರಿ ಮತಗಳ ಅಗತ್ಯವಿದೆ. ಈ ಸಂಖ್ಯಾಬಲದ ಆಟದಲ್ಲಿ 22 ಸಂಸದರನ್ನು ಹೊಂದಿರುವ ಡಿಎಂಕೆ ಮತ್ತು 8 ಸಂಸದರನ್ನು ಹೊಂದಿರುವ ಎನ್‌ಸಿಪಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.

ವಿಪಕ್ಷಗಳ ಚಿಂತನೆ ಹೀಗಿದೆ!

ಇನ್ನೊಂದೆಡೆ, ಮತದಾರರ ಪಟ್ಟಿಯ ಪರಿಷ್ಕರಣೆ ವಿರೋಧಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯ ವಿಷಯವನ್ನು ಸಂಸತ್ತಿನಲ್ಲೂ ಪ್ರಸ್ತಾಪಿಸಲು ವಿಪಕ್ಷಗಳು ಸಜ್ಜಾಗಿರುವುದರಿಂದ ಅಧಿವೇಶನವು ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಸದನ ಸುಗಮವಾಗಿ ನಡೆದರೆ ಮಾತ್ರ ಸಂವಿಧಾನ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆ ಮತ್ತು ಮತದಾನ ಸಾಧ್ಯ ಎಂದು ಆಡಳಿತ ಪಕ್ಷದ ಸಂಸದರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಅಸ್ತಿತ್ವದಲ್ಲಿರುವ ಅಧಿವೇಶನವನ್ನು ವಿಸ್ತರಿಸಲು ಕನಿಷ್ಠ 2 ದಿನಗಳ ನೋಟಿಸ್ ಮತ್ತು ಹೊಸ ಅಧಿವೇಶನ ಕರೆಯಲು ಕನಿಷ್ಠ 14 ದಿನಗಳ ನೋಟಿಸ್ ಅಗತ್ಯವಿದೆ.

ಕ್ಷೇತ್ರ ಪುನರ್ವಿಂಗಡಣೆಯಿಂದ ತಮ್ಮ ಪ್ರಾತಿನಿಧ್ಯಕ್ಕೆ ಧಕ್ಕೆಯಾಗಬಹುದು ಎಂಬ ದಕ್ಷಿಣ ಭಾರತದ ರಾಜ್ಯಗಳ ಆತಂಕವನ್ನು ದೂರ ಮಾಡಲು, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇಕಡಾ 50ರಷ್ಟು ಹೆಚ್ಚಿಸುವ ಸೂತ್ರವನ್ನು ಸರ್ಕಾರ ಪರಿಶೀಲಿಸುತ್ತಿದೆ ಎನ್ನಲಾಗಿದೆ. 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವಿನ ಪ್ರಸ್ತುತ ಸ್ಥಾನಗಳ ಹಂಚಿಕೆಯ ಅನುಪಾತವನ್ನು ಉಳಿಸಿಕೊಳ್ಳುವ ಪ್ರಸ್ತಾವನೆಯೂ ಇದರಲ್ಲಿದೆ. ಒಟ್ಟಾರೆಯಾಗಿ, ಮುಂಬರುವ ಚಳಿಗಾಲದ ಅಧಿವೇಶನವು ಕೇಂದ್ರ ಸರ್ಕಾರಕ್ಕೆ ದೊಡ್ಡ ಅಗ್ನಿಪರೀಕ್ಷೆಯಾಗಲಿದೆ(ಏಜೆನ್ಸೀಸ್​).