- ವಿಂಡ್‌ಫಾಲ್ ತೆರಿಗೆ ಇಳಿಸಿದ ಕೇಂದ್ರ ಸರ್ಕಾರ
- ಪೆಟ್ರೋಲ್ ರಫ್ತಿನ ಮೇಲಿನ ತೆರಿಗೆ ಸಂಪೂರ್ಣ ರದ್ದು
- ಆಗಸ್ಟ್ 15ರಿಂದ ಜಾರಿಗೆ ಬಂದ ಹೊಸ ದರ
ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ (ATF) ರಫ್ತಿನ ಮೇಲೆ ವಿಧಿಸುತ್ತಿದ್ದ ವಿಂಡ್‌ಫಾಲ್ ತೆರಿಗೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಆಗಸ್ಟ್ 15ರಿಂದ ಹೊಸ ತೆರಿಗೆ ದರ ಜಾರಿಗೆ ಬಂದಿದ್ದು, ಡೀಸೆಲ್ ರಫ್ತಿನ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) ಲೀಟರ್‌ಗೆ 25.50ರಿಂದ 24 ರೂಪಾಯಿಗೆ ಇಳಿಸಲಾಗಿದೆ. ವಿಮಾನ ಇಂಧನದ ಮೇಲಿನ ಸುಂಕವನ್ನು 22ರಿಂದ 19.50ರೂ. ಗೆ ಕಡಿತ ಮಾಡಲಾಗಿದೆ.
ಇನ್ನು, ಪೆಟ್ರೋಲ್ ರಫ್ತಿನ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆಗಸ್ಟ್ 3ರಂದು ಪೆಟ್ರೋಲ್ ರಫ್ತಿಗೆ ಲೀಟರ್‌ಗೆ 3.50ರೂ. ತೆರಿಗೆ ವಿಧಿಸಲಾಗಿತ್ತು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ವಿಂಡ್‌ಫಾಲ್ ತೆರಿಗೆ ಎಂದರೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದಾಗ ತೈಲ ಕಂಪನಿಗಳಿಗೆ ಹೆಚ್ಚುವರಿ ಲಾಭ ಸಿಗುತ್ತೆ. ಈ ಹೆಚ್ಚುವರಿ ಲಾಭದ ಮೇಲೆ ಸರ್ಕಾರ ವಿಧಿಸುವ ತೆರಿಗೆಯನ್ನೇ ‘ವಿಂಡ್‌ಫಾಲ್ ತೆರಿಗೆ’ ಎಂನ್ನಲಾಗುತ್ತದೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಹೆಚ್ಚಾದ ಸಂದರ್ಭದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಕೊರತೆಯಾಗದಂತೆ ನೋಡಿಕೊಳ್ಳಲು ಮತ್ತು ರಫ್ತಿನಿಂದ ಕಂಪನಿಗಳಿಗೆ ಸಿಗುವ ಹೆಚ್ಚುವರಿ ಲಾಭವನ್ನು ಕಂಟ್ರೋಲ್ ಮಾಡಲು ಸರ್ಕಾರ ಈ ತೆರಿಗೆ ಜಾರಿಗೆ ತಂದಿತ್ತು.
ಮೊದಲು ಜಾರಿಯಾಗಿದ್ದು ಯಾವಾಗ?
ಭಾರತದಲ್ಲಿ 2022ರ ಜುಲೈ 1ರಂದು ಮೊದಲ ಬಾರಿಗೆ ವಿಂಡ್‌ಫಾಲ್ ತೆರಿಗೆ ಜಾರಿಗೆ ತರಲಾಗಿತ್ತು. ದೇಶೀಯ ಕಚ್ಚಾ ತೈಲ ಉತ್ಪಾದಕರು ಮತ್ತು ಇಂಧನ ರಫ್ತುದಾರರಿಗೆ ಜಾಗತಿಕ ತೈಲ ಬೆಲೆ ಏರಿಕೆಯಿಂದ ಸಿಗುವ ಹೆಚ್ಚುವರಿ ಲಾಭದ ಮೇಲೆ ಈ ತೆರಿಗೆ ವಿಧಿಸಲಾಗುತ್ತಿತ್ತು,(ಏಜೆನ್ಸೀಸ್).