ನವದೆಹಲಿ: ಹೋಟೆಲ್, ರೆಸ್ಟೋರೆಂಟ್ಗಳಿಗೆ ಸರ್ಕಾರಿಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಇಂದು(ಆ. 01) ಖುಷಿ ಸುದ್ದಿ ನೀಡಿದ್ದು, ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್(commercial cylinder) ದರದಲ್ಲಿ 209 ರೂ.ಗಳಷ್ಟು ಇಳಿಕೆ ಮಾಡಿವೆ. ಆದರೆ ಗೃಹಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಪ್ರಸ್ತುತ ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಈ ಹೊಸ ದರ ಜಾರಿಯಾಗಿದ್ದು, ಅಲ್ಲಿನ ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಸೇರಿದಂತೆ ಕಮರ್ಷಿಯಲ್ ಬಳಕೆದಾರರಿಗೆ ವಾಣಿಜ್ಯ ಸಿಲಿಂಡರ್ ದರ ಬಿಗ್ ರಿಲೀಫ್ ನೀಡಿದೆ.
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್ ದರದಲ್ಲಿ 202 ರೂ. ಕಡಿತಗೊಳಿಸಲಾಗಿದ್ದು, ಇದರೊಂದಿಗೆ ಜುಲೈನಲ್ಲಿ 2,930 ರೂಪಾಯಿ ಇದ್ದ ಸಿಲಿಂಡರ್ ದರ ಈಗ 2,728 ರೂ.ಗೆ ಇಳಿದಿದೆ. ಅದೇ ರೀತಿ, ಕೋಲ್ಕತ್ತಾದಲ್ಲಿ 209 ರೂ. ಇಳಿಕೆಯಾಗಿ, ಸಿಲಿಂಡರ್ ದರ 2,873 ರೂ.ಗೆ ಇಳಿಕೆಯಾಗಿದೆ.
ಈ ವರ್ಷ ಭಾರೀ ಬೆಲೆ ಏರಿಕೆಯ ನಂತರ ಇದು ಸತತ ಎರಡನೇ ತಿಂಗಳು ವಾಣಿಜ್ಯ ಅನಿಲ ದರ ಇಳಿಕೆಯಾಗಿದ್ದು, ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ. ಕಳೆದ ಕೆಲ ತಿಂಗಳಿಂದ ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಾಗೂ ಜಾಗತಿಕ ಇಂಧನ ಪೂರೈಕೆ ಕೊರತೆಯಿಂದ LPG ದರದಲ್ಲಿ ಭಾರೀ ಏರಿಕೆಯಾಗಿತ್ತು.
ಫೆಬ್ರವರಿಯಿಂದ ಜೂನ್‌ವರೆಗೆ 19 ಕೆಜಿ ಸಿಲಿಂಡರ್ ಬೆಲೆ ಸುಮಾರು 1,373 ಹೆಚ್ಚಾಗಿ, 1,740ರಿಂದ 3,113 ರೂಪಾಯಿವರೆಗೆ ಏರಿಕೆಯಾಗಿತ್ತು. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿರುವ ಹಿನ್ನೆಲೆ ತೈಲ ಕಂಪನಿಗಳು ದರ ಇಳಿಕೆ ಮಾಡಿವೆ (ಏಜೆನ್ಸೀಸ್)