Vaibhav Sooryavanshi | ವೈಭವ್ ಸೂರ್ಯವಂಶಿ 
ದೇಶ

ರನ್ ಹೊಡೆದವರನ್ನ ಬಿಟ್ಟು ವೈಭವ್​ಗೆ....ವಂಡರ್ ಕಿಡ್ ಪದಾರ್ಪಣೆ ಬಗ್ಗೆ ಕೋಚ್ ಖಡಕ್ ಸ್ಟೇಟ್‌ಮೆಂಟ್! | Vaibhav Sooryavanshi

Vaibhav Sooryavanshi: ಭಾರತೀಯ ಕ್ರಿಕೆಟ್‌ನಲ್ಲಿ ಸದ್ಯ ಕೇಳಿಬರುತ್ತಿರುವ ಅತಿ ದೊಡ್ಡ ಪ್ರಶ್ನೆ ಒಂದೇ, ಅದು, ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರಾ..? ಒಂದು ವೇಳೆ ಅವರು ಕಣಕ್ಕಿಳಿದರೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ದೇಶವನ್ನು ಪ್ರತಿನಿಧಿಸಿದ ಮಹಾ ದಾಖಲೆ ನಿರ್ಮಾಣವಾಗಲಿದೆ. ಆದರೆ, ಈ ವಂಡರ್ ಕಿಡ್ ಸುತ್ತ ಸೃಷ್ಟಿಯಾಗಿರುವ ಭಾರಿ ಹವಾ ಮತ್ತು ಹೈಪ್‌ಗೆ ಮಣಿದು ಮ್ಯಾನೇಜ್‌ಮೆಂಟ್ ಯಾವುದೇ ತರಾತುರಿಯ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ ಮತ್ತು ಇಂಡಿಯಾ ಎ ತಂಡದ ಪರ ಭರ್ಜರಿ ಪ್ರದರ್ಶನ ನೀಡುವ ಮೂಲಕ ವೈಭವ್ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆದರೆ, ತಂಡದ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆಯೇ ಹೊರತು, ಕೇವಲ ಪದಾರ್ಪಣೆಯ ಹಪಾಹಪಿಯಿಂದಲ್ಲ, ಅಂತಿಮ ಹನ್ನೊಂದರ ಬಳಗವನ್ನು ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ಕೋಚ್ ನಿರ್ಧರಿಸಲಿದ್ದಾರೆ ಎಂದು ಕೊಟಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಸಾಧಾರಣ ಪ್ರತಿಭೆ: ಕೊಟಕ್ ಶ್ಲಾಘನೆ

ವೈಭವ್ ಸೂರ್ಯವಂಶಿ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಿತಾಂಶು ಕೊಟಕ್, ವೈಭವ್ ಅಸಾಧಾರಣ ಪ್ರತಿಭೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಐಪಿಎಲ್‌ನಲ್ಲಿ ಜೊಫ್ರಾ ಆರ್ಚರ್ ಅವರಂತಹ ವಿಶ್ವದರ್ಜೆಯ ವೇಗಿಗಳನ್ನು ಅವರು ಎದುರಿಸಿದ ರೀತಿ ಅದ್ಭುತವಾಗಿತ್ತು. ಯಾವುದೇ ಬೌಲರ್ ಬಂದರೂ ಅವರು ಮಣಿಯುತ್ತಿಲ್ಲ. ಅವರಲ್ಲಿ ನೈಸರ್ಗಿಕ ಸಾಮರ್ಥ್ಯ ತುಂಬಿದೆ. ಈಗ ಕೇವಲ ಒಬ್ಬ ಯುವ ಆಟಗಾರನಿಗೆ ಅವಕಾಶ ನೀಡಬೇಕೆಂಬ ಕಾರಣಕ್ಕೆ, ಈಗಾಗಲೇ ರನ್ ಗಳಿಸಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಮತ್ತೊಬ್ಬ ಆಟಗಾರನನ್ನು ಕೈಬಿಡುವುದು ಸರಿಯಲ್ಲ ಎಂದು ಕೊಟಕ್ ಮ್ಯಾನೇಜ್‌ಮೆಂಟ್ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಸಹಜ ವಾತಾವರಣ ನಿರ್ಮಾಣಕ್ಕೆ ಮ್ಯಾನೇಜ್‌ಮೆಂಟ್ ಒತ್ತು

ವೈಭವ್ ವಯಸ್ಸನ್ನು ನೋಡಿ ಅವರಿಗೆ ವಿಶೇಷ ಆದ್ಯತೆ ನೀಡುವ ಬದಲು, ತಂಡದ ವಾತಾವರಣಕ್ಕೆ ಅವರು ಬೇಗನೆ ಒಗ್ಗಿಕೊಳ್ಳುವಂತೆ ಮಾಡುವುದು ಮ್ಯಾನೇಜ್‌ಮೆಂಟ್‌ನ ಮುಖ್ಯ ಉದ್ದೇಶವಾಗಿದೆ. ಬಿಸಿಸಿಐನ ಅಂಡರ್-19 ಮತ್ತು ಇಂಡಿಯಾ ಎ ವ್ಯವಸ್ಥೆಯು ಆಟಗಾರರನ್ನು ಹಿರಿಯರ ತಂಡಕ್ಕೆ ಉತ್ತಮವಾಗಿ ಸಿದ್ಧಪಡಿಸುತ್ತದೆ. ವೈಭವ್ ಬೇರೆ ತಂಡಗಳಲ್ಲಿ ಹೇಗೆ ಮುಕ್ತವಾಗಿ ಇರುತ್ತಿದ್ದರೋ, ಇಲ್ಲೂ ಹಾಗೇ ಇರಲು ತಿಳಿಸಿದ್ದೇವೆ. ಹೆಡ್ ಕೋಚ್ ಗೌತಮ್ ಗಂಭೀರ್ ಕೂಡ ಇದನ್ನೇ ಹೇಳಿದ್ದಾರೆ. ಯಾವುದೇ ಗೊಂದಲಗಳಿದ್ದರೆ ಮುಕ್ತವಾಗಿ ಹಂಚಿಕೊಳ್ಳಲು ಮತ್ತು ತಮ್ಮ ಸ್ವಾಭಾವಿಕ ಆಟವನ್ನು ಆಡಲು ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಕೊಟಕ್ ತಿಳಿಸಿದ್ದಾರೆ(ಏಜೆನ್ಸೀಸ್​​).