ದಕ್ಷಿಣದ ಬಾಗಿಲಿನ ಕೀಲಿಕೈ ಕೊನೆಗೂ ಬಿಜೆಪಿ ಕೈಲಿ?
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ಎಂ.ಜಿ. ರಾಮಚಂದ್ರನ್ ತಮ್ಮ ರಾಜಕೀಯ ಉತ್ಕರ್ಷಕ್ಕೆ ಪ್ರಧಾನವಾಗಿ ಅವಲಂಬಿಸಿದ್ದು ನಟನಾಗಿ ಗಳಿಸಿದ್ದ ಜನಪ್ರಿಯತೆಯನ್ನೇ. ಆದರೆ 1987ರಲ್ಲಿ ಅವರ ನಿಧನಾನಂತರ ತೆರವಾದ ನಾಯಕತ್ವ ಶೂನ್ಯತೆಯನ್ನು ತುಂಬಿ ಆಕ್ರಮಿಸಿಕೊಳ್ಳಲು ಹವಣಿಸಿದ ಡಿಎಂಕೆ ಮತ್ತು ಎಐಎಡಿಎಂಕೆಯ ಹೊಸ ನಾಯಕಿ ಜಯಲಲಿತಾ ಅವರಿಗೆ ತಮಿಳರ ಭಾವನೆಗಳನ್ನು ಕೆರಳಿಸಬಲ್ಲ ವಿಷಯಗಳು ರಾಜಕೀಯವಾಗಿ ಲಾಭಕರವಾಗಿ ಕಂಡವು. ಅಂತಹ ಅವಕಾಶದ ಸಾಧ್ಯತೆಯನ್ನು ಶ್ರೀಲಂಕಾ ತಮಿಳರ ಸಮಸ್ಯೆ ಅದಾಗಲೇ ತೋರಿಸಿಯಾಗಿತ್ತು. ಅದರೊಂದಿಗೆ ಕಾವೇರಿ ಜಲವಿವಾದವನ್ನೂ ಸೇರಿಸಿಕೊಂಡರೆ ಡಬಲ್ ಧಮಾಕಾ! ಎಂಜಿಆರ್ ಇರುವವರೆಗೆ ನೀರಿನ ಸಮಸ್ಯೆ ತಲೆದೋರಿದಾಗೆಲ್ಲಾ ಕರ್ನಾಟಕದ ಮುಖ್ಯಮಂತ್ರಿಗಳ ಜತೆ ನೇರವಾಗಿ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದರು. ಡಿಎಂಕೆ ನಾಯಕ ಕರುಣಾನಿಧಿ ನುರಿತ ರಾಜಕಾರಣಿ ನಿಜ. ಆದರೆ ದಶಕದ ಹಿಂದೆ ಹಿಡಿದ ರಾಜಕೀಯ ಗ್ರಹಣದಿಂದ ಹೊರಬರಲು ಕಾವೇರಿ ವಿವಾದವನ್ನು ಬೀದಿಗೆ ತರುವುದು ಲಾಭಕರ ಎಂದವರು ಲೆಕ್ಕಹಾಕಿದರೆ, ತಮ್ಮ ಕರ್ನಾಟಕ ಮೂಲವೇ ತಮ್ಮ ರಾಜಕೀಯ ಆಸೆಗಳಿಗೆ ಮುಳುವಾಗಬಹುದೆಂದು ಶಂಕಿಸಿದ ಜಯಲಲಿತಾ, ಕಾವೇರಿ ವಿವಾದದಲ್ಲಿ ತಾವು ಕರ್ನಾಟಕದ ವಿರುದ್ಧವಾಗಿ ನಡೆದಷ್ಟೂ ತಮಿಳರು ತಮ್ಮನ್ನು ‘ಪುರಚ್ಚಿ ತಲೈವರ್’ರ ನಿಜವಾದ ಉತ್ತರಾಧಿಕಾರಿಯೆಂದೂ, ‘ಅಣ್ಣಾಚ್ಚಿ’ಯವರ ಅಭಿಮಾನಿಗಳ ‘ಅಣ್ಣಿ’ಯೆಂದೂ, ಅಂತಿಮವಾಗಿ ತಮ್ಮನ್ನು ‘ಪುರಚ್ಚಿ ತಲೈವಿ’ಯೆಂದೂ ತಮಿಳುನಾಡಿನ ಜನತೆ ಸ್ವೀಕರಿಸಿಬಿಡುತ್ತಾರೆಂದು ಭವಿಷ್ಯ ಕಂಡರು. ಅವರ ವಿರುದ್ಧ ರಾಜಕೀಯ ರಣತಂತ್ರಗಳನ್ನು ಪೇರಿಸಲು, 1988ರ ವಿಧಾನಸಭಾ ಚುನಾವಣೆಗಳಲ್ಲಿ ದಕ್ಕಿದ ಅನಿರೀಕ್ಷಿತ ಗೆಲುವನ್ನು ಶಾಶ್ವತಗೊಳಿಸಿಕೊಳ್ಳಲು ಹೊರಟ ಕರುಣಾನಿಧಿ, ವಿ.ಪಿ. ಸಿಂಗ್ರ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಿ ಸೇರಿ, ಬೆಂಬಲಕ್ಕೆ ಪ್ರತಿಯಾಗಿ ಸಿಂಗ್ ಸರ್ಕಾರದಿಂದ ಕಾವೇರಿ ವಿವಾದವನ್ನು ಬಗೆಹರಿಸುವುದಕ್ಕಾಗಿ ಟ್ರಿಬ್ಯೂನಲ್ ರಚಿಸುವಂತೆ ಒತ್ತಾಯಿಸಿ ಯಶಸ್ವಿಯಾದರು. ಅದನ್ನವರು ಲೋಕಸಭೆ, ವಿಧಾನಸಭೆ ಹಾಗೂ ತಮಿಳುನಾಡಿನ ಬೀದಿಬೀದಿಗಳಲ್ಲಿ ಆಚರಿಸಿದ್ದು ಈಗ ಇತಿಹಾಸ.
ಕುಶಾಗ್ರಮತಿ ಜಯಲಲಿತಾ ಡಿಎಂಕೆ ತಯಾರಿಸಿದ ಔಷಧಿಯನ್ನು ಅದಕ್ಕೇ ಕುಡಿಸಲು ತಂತ್ರ ಹೂಡಿ 1991ರ ಚುನಾವಣೆಗಳಲ್ಲಿ ಗೆಲ್ಲುವಂತೆ ಕಂಡ ಕಾಂಗ್ರೆಸ್ನ ಜತೆಗೂಡಿಕೊಂಡರು. ಚುನಾವಣೆಗಳ ನಡುವೆ ಘಟಿಸಿದ ರಾಜೀವ್ ಗಾಂಧಿ ಹತ್ಯೆ ಸೃಷ್ಟಿಸಿದ ಸಂತಾಪದ ಅಲೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ಗೂ, ತಮಿಳುನಾಡಿನಲ್ಲಿ ಎಐಎಡಿಎಂಕೆಗೂ ಹೆಚ್ಚುವರಿ ಲಾಭ ತಂದದ್ದರಿಂದಾಗಿ ಎರಡೂ ಪಕ್ಷಗಳಿಗೆ ಅಧಿಕಾರ ದಕ್ಕಿತು. ತಮಿಳುನಾಡಿನಲ್ಲಿ ಜಯಲಲಿತಾ ಮುಖ್ಯಮಂತ್ರಿಯಾದರೆ ಕೇಂದ್ರದಲ್ಲಿ ನರಸಿಂಹರಾವ್ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಎರಡು ವರ್ಷಗಳ ಹಿಂದೆ ಡಿಎಂಕೆ ಆಡಿದ್ದ ಆಟವನ್ನೇ ತಾವೂ ಆರಂಭಿಸಿದರು. ಪರಿಣಾಮ - ಕಾವೇರಿ ಟ್ರಿಬ್ಯೂನಲ್ ನೀಡಿದ ಮಧ್ಯಂತರ ತೀರ್ಪನ್ನು ರಾವ್ ಸರ್ಕಾರ ತರಾತುರಿಯಲ್ಲಿ ಗೆಜೆಟ್ನಲ್ಲಿ ಪ್ರಕಟಿಸಿಬಿಟ್ಟಿತು. ಆ ‘ಗೆಲುವನ್ನು’ ಎಐಎಡಿಎಂಕೆ ಆಚರಿಸಿದ ಬಗೆಯೂ ಈಗ ಇತಿಹಾಸವೇ.
ಒಟ್ಟಿನಲ್ಲಿ ಕೇಂದ್ರದಲ್ಲಿ ಆರಂಭವಾದ ಸಮ್ಮಿಶ್ರ ರಾಜಕಾರಣವನ್ನು ತಂತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಿರ್ಣಾಯಕ ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದೆಂದು ಕರುಣಾನಿಧಿ ಮತ್ತು ಜಯಲಲಿತಾ ಇಬ್ಬರೂ ಅರಿತುಕೊಂಡದ್ದು ಹೀಗೆ. ಅಲ್ಲಿಂದೀಚೆಗೆ ಆ ಎರಡೂ ಪಕ್ಷಗಳು ಮತ್ತವುಗಳ ಸಣ್ಣಪುಟ್ಟ ಸಹಯೋಗಿಗಳು ಅದನ್ನೊಂದು ಚಾಳಿಯಾಗಿ ಬೆಳೆಸಿಕೊಂಡು, ನೈತಿಕತೆಯನ್ನು ಗಾಳಿಗೆ ತೂರಿ ಗೆದ್ದೆತ್ತಿನ ಬಾಲ ಹಿಡಿಯುವ ಪರಿಪಾಠವನ್ನು ತಂತಮ್ಮ ನೀತಿಗಳ ಅವಿಭಾಜ್ಯ ಅಂಗವನ್ನಾಗಿಸಿಕೊಂಡವು. ಈ ‘ಆಟಪಾಟ’ದಲ್ಲಿ ಡಿಎಂಕೆ ಹೆಚ್ಚು ವಿವೇಕ ತೋರಿದ್ದನ್ನು ಒಪ್ಪಿಕೊಳ್ಳಲೇಬೇಕು. ನರಸಿಂಹರಾವ್ ಸರ್ಕಾರದ ಅವಧಿಯಲ್ಲಿ ಸಿಕ್ಕಿದ ಲಾಭ ಮತ್ತು 1996ರಲ್ಲಿ ಕಳೆದುಕೊಂಡ ಅಧಿಕಾರವನ್ನು ಪುರಚ್ಚಿ ತಲೈವಿಯವರ ಜನಪ್ರಿಯತೆಯಿಂದ ಮತ್ತೆ ಗಳಿಸಿಕೊಳ್ಳುತ್ತೇವೆ ಎಂಬ ಎಐಎಡಿಎಂಕೆಯ ಆತ್ಮವಿಶ್ವಾಸ ಆ ಪಕ್ಷವನ್ನು ಅಹಂಕಾರಿಯನ್ನಾಗಿಸಿದ್ದನ್ನು 1990ರ ಉತ್ತರಾರ್ಧದಲ್ಲಿ ಕಾಣುತ್ತೇವೆ.
1998ರಲ್ಲಿ ವಾಜಪೇಯಿಯವರಿಗೆ ಲೋಕಸಭೆಯಲ್ಲಿ ಬೆಂಬಲ ನೀಡುವುದಾಗಿ ಮಾತುಕೊಟ್ಟ ಆ ಪಕ್ಷ ನಂತರ ಕಳ್ಳಾಟ ಆರಂಭಿಸಿದಾಗ ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗಡೆ ಬುದ್ಧಿಮಾತು ಹೇಳುವ ಪ್ರಯತ್ನ ಮಾಡಿದರು. ಆಗ ಅವರ ಹಿರಿತನವನ್ನೂ, ರಾಷ್ಟ್ರ ರಾಜಕಾರಣದಲ್ಲಿ ಅವರಿಗಿದ್ದ ಗೌರವದ ಸ್ಥಾನವನ್ನೂ ಗಾಳಿಗೆ ತೂರಿ ಎಐಎಡಿಎಂಕೆ ಸಂಸದರು ಲೇವಡಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆದರೆ ಅವರ ಇದೇ ನೀತಿ ರಾಷ್ಟ್ರೀಯ ಸ್ತರದಲ್ಲಿ ಅವರ ಪಕ್ಷದ ವಿಶ್ವಾಸಾರ್ಹತೆಯನ್ನು ನಿಶ್ಚಯವಾಗಿಯೂ ಕುಗ್ಗಿಸಿತು. ಅದನ್ನು ತನ್ನ ಲಾಭಕ್ಕೆ ಬಳಸಿಕೊಂಡ ಡಿಎಂಕೆ ಮೊದಲಿಗೆ ಬಿಜೆಪಿ, ನಂತರ ಕಾಂಗ್ರೆಸ್ನ ವಿಶ್ವಾಸವನ್ನು ಗಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿ ಸತತ ಒಂದೂವರೆ ದಶಕ ಕಾಲ ಕೇಂದ್ರದಲ್ಲಿ ಅಧಿಕಾರದ ಸವಿ ಉಂಡಿತು. ಜಯಲಲಿತಾ ನಿಧನದ ನಂತರ ಎಐಎಡಿಎಂಕೆಯ ಹಮ್ಮು ಸಾಕಷ್ಟು ಇಳಿದು ಅದು ವಿವೇಕ ಮೂಡಿಸಿಕೊಳ್ಳುತ್ತಿದೆ. ಅತ್ತ ಡಿಎಂಕೆ ನಾಯಕರು ತಮ್ಮ ಹಿಂದೂ-ವಿರೋಧಿ, ಬಿಜೆಪಿ-ವಿರೋಧಿ ನಿಲುವುಗಳಿಂದಾಗಿ ಕೇಂದ್ರದಿಂದ ದೂರವಾಗಿದ್ದಾರೆ. ಈ ಬೇಸಿಗೆಯಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಈ ಇತಿಹಾಸ ಮತ್ತು ವರ್ತಮಾನದ ಹಿನ್ನೆಲೆಯಲ್ಲಿ ನಾವು ಅವಲೋಕಿಸಬೇಕು.
ವಾಜಪೇಯಿ ನಾಯಕತ್ವದ ಬಿಜೆಪಿ ಮತ್ತು ಮೋದಿ ನಾಯಕತ್ವದ ಬಿಜೆಪಿ ನಡುವೆ ಹಲವು ಗಂಭೀರ ವ್ಯತ್ಯಾಸಗಳಿವೆ. ಹಾಗೆಯೇ ಕರುಣಾನಿಧಿ ನಾಯಕತ್ವದ ಡಿಎಂಕೆಯಿಂದ ಸ್ಟಾಲಿನ್ ನಾಯಕತ್ವದ ಡಿಎಂಕೆ ಬಹುದೂರ ಸಾಗಿ ಬಂದಿದೆ. ಎರಡೂ ಪಕ್ಷಗಳ ಈ ಪಯಣ ಪರಸ್ಪರ ವಿರುದ್ಧ ದಿಕ್ಕಿನದು. ಹೀಗಾಗಿ ಪ್ರಸಕ್ತ ರಾಜಕೀಯ ವಾಸ್ತವಗಳು ಕೊನೇಪಕ್ಷ ತಮಿಳುನಾಡಿನಲ್ಲಿ ತಮ್ಮನ್ನು ಅಪ್ರಸ್ತುತಗೊಳಿಸಲಾರವು ಎಂಬ ವಿಶ್ವಾಸ ಜಯಲಲಿತೋತ್ತರ ಎಐಎಡಿಎಂಕೆ ನಾಯಕವರ್ಗದಲ್ಲಿದೆ. ಜತೆಗೆ ಕಾಂಗ್ರೆಸ್ ಬಾಗಿಲು ತನಗೆ ಮುಚ್ಚಿಹೋಗಿದೆ, ತಾನು ತೇಲಿದರೂ ಮುಳುಗಿದರೂ ಬಿಜೆಪಿಯ ಜತೆಗೇ ಎಂದು ಅದು ಕಳೆದ 3-4 ವರ್ಷಗಳಲ್ಲಿ ಒಂದಕ್ಕಿಂತ ಹೆಚ್ಚು ಪಾಠಗಳ ಮೂಲಕ ಅರಿತುಕೊಂಡಿದೆ. ಜಯಲಲಿತಾ ನಿರ್ಗಮನ ಎಐಎಡಿಎಂಕೆಗೆ ತನ್ನ ನಿಜವಾದ ಸಾಮರ್ಥ್ಯವನ್ನು ದಾರುಣವಾಗಿ ಅರಿವು ಮಾಡಿಕೊಟ್ಟು, ಮೋದಿ ನಾಮಬಲದ ಮಹತ್ವವನ್ನು ಮನಗಾಣಿಸಿದೆ.
ಆದರೆ ಆ ಪಕ್ಷದ ದಯನೀಯವೆಂದೇ ಹೇಳಬಹುದಾದ ಈ ಸ್ಥಿತಿಯನ್ನು ಮೋದಿ ನೇತೃತ್ವದ ಬಿಜೆಪಿ ದುರುಪಯೋಗಪಡಿಸಿಕೊಂಡು ತನ್ನ ನಿಬಂಧನೆಗಳನ್ನು ಅದರ ಮೇಲೆ ಹೇರುತ್ತಿಲ್ಲ. ಬದಲಾಗಿ ಎಐಎಡಿಎಂಕೆಯ ಆತಂಕಗಳನ್ನು ಅರ್ಥ ಮಾಡಿಕೊಂಡು ಅವುಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಎರಡೂ ಪಕ್ಷಗಳ ತಮಿಳುನಾಡು ಉನ್ನತ ನಾಯಕವರ್ಗದ ಜಾತಿ ಸಾಮ್ಯ ತನಗೆ ಚುನಾವಣಾ ರಾಜಕಾರಣದಲ್ಲಿ ಅಹಿತಕಾರಿಯಾಗಬಹುದೆಂದು ಎಐಎಡಿಎಂಕೆ ಆತಂಕಗೊಂಡಾಗ ಬಿಜೆಪಿ ಅದರ ಶಮನಕ್ಕಾಗಿ ತನ್ನ ನಾಯಕತ್ವದಲ್ಲಿ ಬದಲಾವಣೆ ಮಾಡಿಕೊಂಡಿದೆ. ಆ ಬದಲಾವಣೆಗೆ ಹಿಂಜರಿಯದ ನಿಸ್ವಾರ್ಥ ನಾಯಕ ಅಣ್ಣಾಮಲೈ ರೂಪದಲ್ಲಿ ದೊರಕಿರುವುದು ಬಿಜೆಪಿ ತಮಿಳುನಾಡು ಘಟಕದ ಅದೃಷ್ಟವೇ ಸರಿ. ಪಕ್ಷ ಹಾಗೂ ಸಹಯೋಗಿ ಪಕ್ಷಗಳ ನಡುವಿನ ಏಕತೆ ಹಾಗೂ ಭವಿಷ್ಯದ ಮುಂದೆ ತಮ್ಮ ವೈಯಕ್ತಿಕ ಆಕಾಂಕ್ಷೆಗಳು ಹಿಂದೆ ಸರಿದರೆ ಅದು ತಮಗೆ ಸಮ್ಮತವೇ ಎಂದು ನಂಬುವ ಅಣ್ಣಾಮಲೈಯವರಂತಹ ನಾಯಕರು ಬಿಜೆಪಿಗೆ ಇತರ ಹಲವು ರಾಜ್ಯಗಳಲ್ಲೂ ಅಗತ್ಯವಿದ್ದಾರೆ ಎಂದು ಹೇಳಿದರೆ ಅದು ಕೇವಲ ಆ ಮಾಜಿ ಪೊಲೀಸ್ ಅಧಿಕಾರಿಯನ್ನು ಹೊಗಳಿದಂತಷ್ಟೇ ಆಗುವುದಿಲ್ಲ, ನಮ್ಮೆದುರಿನ ಕೆಲವು ನಿಷ್ಠುರ ವಾಸ್ತವಗಳನ್ನು ಅದು ತೆರೆದಿಡುತ್ತದೆ, ಇತರ ರಾಜ್ಯಗಳ ಕೆಲವು ಹಿರಿಯ ನಾಯಕರ ಬಣ್ಣಗಳನ್ನು ಬಯಲಾಗಿಸುತ್ತದೆ, ಇತರರಿಗೆ ಪಾಠವಾಗುತ್ತದೆ.
ತಮ್ಮ ಹಿಂದೂ-ವಿರೋಧಿ, ನಕಲಿ ಜಾತ್ಯತೀತತೆಯ ಮುಖವಾಡ ಧರಿಸಿದ ಕ್ರಿಶ್ಚಿಯನ್-ಪರ ನೀತಿಗಳಿಂದಾಗಿ ಡಿಎಂಕೆ ನಾಯಕವರ್ಗ ತಮಿಳುನಾಡಿನ ರಾಜಕಾರಣವನ್ನು ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಧ್ರುವೀಕರಣಕ್ಕೊಳಪಡಿಸಿದೆ. ಇದು ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟಕ್ಕೆ ತಕ್ಕಮಟ್ಟಿಗೆ ಅನುಕೂಲಕರವಾಗುತ್ತಿದೆಯಾದರೂ ನರೇಂದ್ರ ಮೋದಿ ಅಷ್ಟಕ್ಕೇ ತೃಪ್ತರಾಗಿಲ್ಲ. ಅವರದು ಅಭಿವೃದ್ಧಿ ಮಂತ್ರ. ಅಭಿವೃದ್ಧಿಯ ವಿಷಯದಲ್ಲಿ ಪಶ್ಚಿಮ ಬಂಗಾಳದ ಜನತೆ ಮತ್ತು ತಮಿಳುನಾಡಿನ ಜನತೆ ಸಂಪೂರ್ಣ ವಿರುದ್ಧ ಮನೋಭಾವಗಳನ್ನು ಪ್ರದರ್ಶಿಸುತ್ತಾರೆ. ಮೊದಲಿಗೆ ಕಮ್ಯೂನಿಸ್ಟರು, ನಂತರ ತೃಣಮೂಲ ಕಾಂಗ್ರೆಸ್ ಆರ್ಥಿಕ ಅಭಿವೃದ್ಧಿಯ ಪರಿಕಲ್ಪನೆಯನ್ನೇ ಪಶ್ಚಿಮ ಬಂಗಾಳದ ಜನತೆಯಿಂದ ದೂರ ತಳ್ಳಿದ್ದಾರೆ. ಆದರೆ ತಮಿಳುನಾಡಿನಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅದು ಅಭಿವೃದ್ಧಿಗೆ ಪ್ರಾಶಸ್ಱ ನೀಡುತ್ತಲೇ ಬಂದಿದೆ. ಇದು ತಮಿಳರ ಮನೋಭಾವ ಹಾಗೂ ಜೀವನಶೈಲಿಗೆ ಪೂರಕವಾಗಿಯೇ ಇದೆ. ತಮಿಳರು ಸ್ವಭಾವತಃ ಕಷ್ಟಸಹಿಷ್ಣುಗಳು ಮತ್ತು ದೈಹಿಕ ಶ್ರಮಕ್ಕೆ ಹಿಂಜರಿಯದವರು. ಅದರಿಂದಾಗಿಯೇ ಆ ರಾಜ್ಯ ಪ್ರಗತಿಯ ಹಾದಿಯಲ್ಲಿ ಎಂದೂ ಹಿಂದೆ ನೋಡಿಲ್ಲ.
ಕಳೆದ ಐದಾರು ದಶಕಗಳಲ್ಲೇ ಸಾಮಾನ್ಯ ತಮಿಳರ ಜೀವನಮಟ್ಟ ಗಣನೀಯವಾಗಿ ಉತ್ತಮಗೊಳ್ಳುತ್ತಲೇ ಹೋಗುತ್ತಿರುವುದನ್ನು ನಿರಾಕರಿಸಲಾಗದು. ಒಂದು ಉದಾಹರಣೆ ನೀಡುವುದಾದರೆ, ಕೇವಲ ಮೂರು ದಶಕಗಳ ಹಿಂದೆ ದಕ್ಷಿಣದಿಂದ ಉತ್ತರ ಹಾಗೂ ಪೂರ್ವಕ್ಕೆ ಹೋಗುವ ರೈಲುಗಳಲ್ಲಿ ಊಟ ತಿಂಡಿ ಪರಿಚಾರಕರು ತಮಿಳರೇ ಆಗಿರುತ್ತಿದ್ದರು. ಆದರಿಂದು ಸಾಮಾನ್ಯ ತಮಿಳರು ಆ ನೌಕರಿಗಳಿಂದ ಮೇಲುಮೇಲಕ್ಕೆ ಏರಿಹೋಗಿದ್ದಾರೆ, ಹಿಂದೆ ಅವರು ಮಾಡುತ್ತಿದ್ದ ಕೆಲಸಗಳನ್ನು ಇಂದು ಬಿಹಾರ ಮತ್ತು ಜಾರ್ಖಂಡ್ನ ಜನ ಮಾಡುತ್ತಿದ್ದಾರೆ! ಅಷ್ಟೇ ಅಲ್ಲ, ಇಂದು ಅವರು ತಮಿಳುನಾಡಿನಲ್ಲೇ ದೈಹಿಕ ಶ್ರಮದ ಮೂಲಕ ತಮಿಳರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇದರರ್ಥ ತಮಿಳುನಾಡು ಆರ್ಥಿಕ ಪ್ರಗತಿ, ಉದ್ಯೋಗಾವಕಾಶ ಮತ್ತು ಜೀವನಮಟ್ಟದ ಸುಧಾರಣೆಯಲ್ಲಿ ಇತರ ಅದೆಷ್ಟೋ ರಾಜ್ಯಗಳಿಗಿಂತ ಮೇಲ್ಮಟ್ಟದಲ್ಲಿದೆ. ಪ್ರಧಾನಿ ಮೋದಿ ಇದನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ.
ಪ್ರತಿ ಕೇಂದ್ರೀಯ ಬಜೆಟ್ನಲ್ಲೂ ತಮಿಳುನಾಡಿಗೆ ಲಭ್ಯವಾಗುವ ಹಣ ಅಧಿಕವಾಗುತ್ತಲೇ ಸಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ, ಒಂದು ಉದಾಹರಣೆಯಾಗಿ ರೈಲ್ವೇ ಇಲಾಖೆಯಲ್ಲಿ ಅಭಿವೃದ್ಧಿ ಯೋಜನೆಗಾಗಿ ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿ ವಿನಿಯೋಗಿಸುವ ಮೊತ್ತವನ್ನು ನೋಡಬಹುದು. ಈ ವರ್ಷದ ಕೇಂದ್ರ ಬಜೆಟ್ನಲ್ಲಿ ತಮಿಳುನಾಡಿನಲ್ಲಿ ರೈಲ್ವೇ ಅಭಿವೃದ್ಧಿಗಾಗಿ ಮೀಸಲಾಗಿಟ್ಟಿರುವ ಮೊತ್ತ 7,811 ಕೋಟಿ ರೂ.; ಇದು ಡಿಎಂಕೆ ಭಾಗಿಯಾಗಿದ್ದ ಯುಪಿಎ ಸರ್ಕಾರ ನೀಡುತ್ತಿದ್ದ ಮೊತ್ತಕ್ಕಿಂತ ಒಂಬತ್ತು ಪಟ್ಟು ಅಧಿಕ! ಅಭಿವೃದ್ಧಿ ಮಂತ್ರದೊಂದಿಗೆ ತಮಿಳರ ಕಿವಿಗೆ ಅತಿ ಹೆಚ್ಚೇ ಇಂಪಾದ ಮಂತ್ರವೆಂದರೆ ಅವರ ಭಾಷೆ. ವರ್ಷವರ್ಷವೂ ಕಾಶಿ ತಮಿಳ್ ಸಂಗಮಂ ಮೂಲಕ ಕೇಂದ್ರ ನೀಡುತ್ತಿರುವ ಪೋ›ತ್ಸಾಹ ಹಾಗೂ ದೇಶದ ಇತರೆಡೆ ತಮಿಳು ಭಾಷೆಯ ಕಲಿಕೆಗೆ ನೀಡುತ್ತಿರುವ ಪ್ರಾಶಸ್ಱ ತಮಿಳರ ಮನಸ್ಸಿನಲ್ಲಿ ‘ಉತ್ತರ’ದ ಮೇಲಿನ ವಿಶ್ವಾಸವನ್ನು ನಿಧಾನವಾಗಿಯಾದರೂ ವೃದ್ಧಿಸುವುದರಲ್ಲಿ ಸಂಶಯವಿಲ್ಲ.
ಇದೆಲ್ಲವೂ ಈ ಬಾರಿಯ ಚುನಾವಣೆಗಳಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟವನ್ನು ಅಧಿಕಾರಕ್ಕೇರಿಸಿಯೇ ಬಿಡುತ್ತವೆ ಎಂದಲ್ಲ. ಆದರೆ ಮೈತ್ರಿಕೂಟದ ಗಳಿಕೆ ಏರುವುದಂತೂ ನಿಜ. ಅಲ್ಲಿಗೆ ದಕ್ಷಿಣದಲ್ಲಿ ಬದಲಾವಣೆಯ ಬಾಗಿಲು ತೆರೆದುಕೊಂಡಂತೆ. (ಮುಕ್ತಾಯ)