Maharashtra Politics | ಕಾಂಗ್ರೆಸ್ ಬೇಡ, ಎನ್‌ಡಿಎ ಸಾಕು ಅಂದ್ರಾ ಪವಾರ್ ಬಣದ ಶಾಸಕರು..? 
ದೇಶ

ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಬಿಗ್​ ಟ್ವಿಸ್ಟ್!.. ಕಾಂಗ್ರೆಸ್ ಬೇಡ, ಎನ್‌ಡಿಎ ಬೇಕು ಅಂದ್ರಾ ಶರದ್ ಬಣದ ಶಾಸಕರು..? | Maharashtra Politics

ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ (Maharashtra Politics) ಮತ್ತೊಮ್ಮೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷದ ಭವಿಷ್ಯದ ಕುರಿತು ಭಾರಿ ಊಹಾಪೋಹಗಳು ಸೃಷ್ಟಿಯಾಗಿವೆ. ಕಾಂಗ್ರೆಸ್ ಪಕ್ಷದೊಂದಿಗೆ ಎನ್‌ಸಿಪಿ ವಿಲೀನಗೊಳ್ಳುವ ಪ್ರಸ್ತಾವನೆಗೆ ಹಿನ್ನಡೆಯಾದ ಬೆನ್ನಲ್ಲೇ, ಶರದ್ ಬಣವು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದೊಂದಿಗೆ ಕೈಜೋಡಿಸಲಿದೆ ಎಂಬ ಚರ್ಚೆಗಳು ಜೋರಾಗಿವೆ.
ಎನ್‌ಸಿಪಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಕುರಿತು ಶರದ್ ಪವಾರ್ ಬಣವು ಎರಡು ಬಾರಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಸಂಪರ್ಕಿಸಿತ್ತು. 2024ರ ಅಂತ್ಯದಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನವೇ ಈ ವಿಲೀನದ ಬಗ್ಗೆ ಮಾತುಕತೆಗಳು ನಡೆದಿದ್ದರೂ, ಚುನಾವಣಾ ಪ್ರಚಾರದ ಕಾರಣದಿಂದಾಗಿ ಅದನ್ನು ಮುಂದೂಡಲಾಗಿತ್ತು ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ ಕಾಂಗ್ರೆಸ್​ನ ಹಿರಿಯ ನಾಯಕಿ ಸೋನಿಯಾ ಗಾಂಧಿ, ಈ ಪ್ರಸ್ತಾವನೆಯ ಬಗ್ಗೆ ಚರ್ಚಿಸುವಂತೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಚಿಸಿದ್ದರು. ಅದರಂತೆ ಹೈಕಮಾಂಡ್ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿದಾಗ, ರಾಜ್ಯದ ಬಹುತೇಕ ನಾಯಕರು ಎನ್‌ಸಿಪಿ ವಿಲೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಾಗಿ ಸದ್ಯಕ್ಕೆ ವಿಲೀನ ಪ್ರಸ್ತಾವನೆಗೆ ಹಿನ್ನಡೆಯುಂಟಾಗಿದೆ.

ಮೈತ್ರಿಕೂಟದಲ್ಲಿ ಬಂಡಾಯದ ಭೀತಿ: ಉದ್ಧವ್ ಠಾಕ್ರೆ ಅಸಮಾಧಾನ

ಈ ಹಿನ್ನಡೆಯು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಒಗ್ಗಟ್ಟನ್ನೇ ಪ್ರಶ್ನಿಸುವಂತೆ ಮಾಡಿದ್ದು, ಇತ್ತೀಚೆಗೆ ಶಿವಸೇನೆಯ ಉದ್ಧವ್​ ಬಣದ ಆರು ಸಂಸದರು ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆಯಾಗುವ ಮೂಲಕ ಉದ್ಧವ್​ಗೆ ಭಾರಿ ಆಘಾತ ನೀಡಿದ್ದರು. ಮುಂಬೈನಲ್ಲಿ ನಡೆದ ಎಂವಿಎ ಮೈತ್ರಿಕೂಟದ ಇತ್ತೀಚಿನ ಸಭೆಯಲ್ಲಿ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಒಗ್ಗಟ್ಟಿನ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ನಾವು ಒಟ್ಟಾಗಿದ್ದೇವೆ ಎಂದು ಕೇವಲ ಹೇಳಿಕೊಳ್ಳುತ್ತಿದ್ದೇವಷ್ಟೆ, ಆದರೆ ನಿಜವಾಗಿಯೂ ನಾವು ಒಟ್ಟಾಗಿದ್ದೇವಾ..? ಎಂದು ಅವರು ಮೈತ್ರಿ ನಾಯಕರನ್ನು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ, ತನ್ನ ಶಾಸಕರು ಮತ್ತು ಸಂಸದರನ್ನು ಒಟ್ಟಾಗಿ ಇಡಲು ಶರದ್ ಪವಾರ್ ಇತರ ರಾಜಕೀಯ ಆಯ್ಕೆಗಳನ್ನು ಹುಡುಕುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸುಪ್ರಿಯಾ ಸುಳೆಗೆ ಕೇಂದ್ರ ಸಚಿವ ಸ್ಥಾನ..?

ಕಾಂಗ್ರೆಸ್ ವಿಲೀನ ಮಾತುಕತೆ ಹಳಿ ತಪ್ಪುತ್ತಿದ್ದಂತೆ, ಎನ್‌ಸಿಪಿ ಪಕ್ಷದ ಕೆಲವು ಸಂಸದರು ಮತ್ತು ಶಾಸಕರು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಅಥವಾ ನೇರವಾಗಿ ಮೈತ್ರಿ ಸೇರಲು ಯೋಚಿಸುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಒಂದು ವೇಳೆ ಎನ್‌ಡಿಎ ಸೇರಿದರೆ ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ ಕೆಲವು ಹಿರಿಯ ನಾಯಕರಿಗೆ ಕೇಂದ್ರ ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗುತ್ತದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಆದರೆ, ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಈ ಎಲ್ಲಾ ವರದಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇವು ಆಧಾರರಹಿತ ವದಂತಿಗಳಷ್ಟೆ ಎಂದಿದ್ದಾರೆ. ತಮ್ಮ ಪಕ್ಷವು ಕಾಂಗ್ರೆಸ್ ಜೊತೆ ವಿಲೀನವಾಗುವ, ಎನ್‌ಡಿಎ ಸೇರುವ ಅಥವಾ ಹೊರಗಿನಿಂದ ಬೆಂಬಲ ನೀಡುವ ಯಾವುದೇ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆಯ ಕುರಿತು ಮಾತನಾಡಿರುವ ಕಾಂಗ್ರೆಸ್ ಮುಖಂಡ ,ಮಾಜಿ ಸಚಿವ ಅಮಿತ್ ದೇಶ್‌ಮುಖ್, ಇವೆಲ್ಲವೂ ಕೇವಲ ಊಹಾಪೋಹಗಳಾಗಿದ್ದು, ಅಧಿಕೃತ ಪ್ರಕಟಣೆಯಾಗುವವರೆಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಶರದ್ ಪವಾರ್ ಅವರು ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿರುತ್ತಾರೆ ಮತ್ತು ರಾಜ್ಯದಲ್ಲಿ ಅಘಾಡಿ ಹಾಗೂ ರಾಷ್ಟ್ರಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟದಲ್ಲೇ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಇತ್ತ ಬಿಜೆಪಿ ನಾಯಕ ಸುಧೀರ್ ಮುಂಗಂಟಿವಾರ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದು, ಕಾಂಗ್ರೆಸ್ ಈಗ ಮುಳುಗುತ್ತಿರುವ ಹಡಗು. ದೇಶದ ಹಿತದೃಷ್ಟಿಯಿಂದ ಶರದ್ ಪವಾರ್ ಅವರ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಬರಲು ಬಯಸಿದರೆ, ಅವರನ್ನು ಮುಕ್ತವಾಗಿ ಸ್ವಾಗತಿಸಲಾಗುವುದು ಎಂದು ಹೇಳಿದ್ದಾರೆ(ಏಜೆನ್ಸೀಸ್​​).