Abhay Kushwaha 
ದೇಶ

ಟಿಎಂಸಿ, ಶಿವಸೇನೆ ಬೆನ್ನಲ್ಲೇ ಆರ್‌ಜೆಡಿಗೂ ಬಿಗ್ ಶಾಕ್..? ಬಿಹಾರ ಸಿಎಂ ನಿವಾಸದಲ್ಲಿ ಪ್ರತ್ಯಕ್ಷರಾದ ಸಂಸದ ಅಭಯ್ ಕುಶ್ವಾಹಾ! | Abhay Kushwaha

ಪಟನಾ: ಆರ್‌ಜೆಡಿ ಸಂಸದ ಅಭಯ್ ಕುಶ್ವಾಹಾ (Abhay Kushwaha), ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿಯನ್ನು ಅವರ ಅಧಿಕೃತ ನಿವಾಸದಲ್ಲಿ ಬುಧವಾರ ಭೇಟಿಯಾಗಿ ಮಾತುಕತೆ ನಡೆಸಿರುವುದು ಬಿಹಾರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಔರಂಗಾಬಾದ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಕುಶ್ವಾಹಾ, ಸಿಎಂ ಸಾಮ್ರಾಟ್ ಚೌಧರಿ ಅವರೊಂದಿಗೆ ನಡೆಸಿದ ಈ ಸಭೆಯ ಸಮಯ ಮತ್ತು ಉದ್ದೇಶವು ರಾಜಕೀಯ ಪಡಸಾಲೆಯಲ್ಲಿ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ.

ಇದು ಸೌಹಾರ್ದಯುತ ಭೇಟಿಯಷ್ಟೇ ಎಂದು ಆರ್‌ಜೆಡಿ ಮತ್ತು ಸಿಎಂಒ ಸ್ಪಷ್ಟನೆ

ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಈ ಭೇಟಿಯು ಕೇವಲ ಸೌಹಾರ್ದಯುತ ಭೇಟಿ ಆಗಿದ್ದು, ಇದಕ್ಕೆ ಯಾವುದೇ ರಾಜಕೀಯ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ನಡೆದ ಈ ಭೇಟಿಯು ರಾಜಕೀಯ ಸಮೀಕರಣಗಳ ಬದಲಾವಣೆಯ ವದಂತಿಗಳಿಗೆ ಪುಷ್ಟಿ ನೀಡಿದೆ.
ಮತ್ತೊಂದೆಡೆ, ಆರ್‌ಜೆಡಿ ಕೂಡ ಈ ವದಂತಿಗಳನ್ನು ತಕ್ಷಣವೇ ತಳ್ಳಿಹಾಕಿದೆ. ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಮಾತನಾಡಿ, ಸಂಸದ ಅಭಯ್ ಕುಶ್ವಾಹಾ ಅವರು ತಮ್ಮ ಔರಂಗಾಬಾದ್ ಕ್ಷೇತ್ರದ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಈ ಭೇಟಿ ಸೀಮಿತವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಪಕ್ಷಗಳಲ್ಲಿ ಬಿರುಕು: ಹೆಚ್ಚಿದ ಅನುಮಾನ!

ಆರ್‌ಜೆಡಿ ಹಾಗೂ ಸರ್ಕಾರ ಸ್ಪಷ್ಟನೆ ನೀಡಿದ್ದರೂ, ಪ್ರಸ್ತುತ ದೇಶದ ರಾಜಕೀಯ ಪರಿಸ್ಥಿತಿಯನ್ನು ಗಮನಿಸುತ್ತಿರುವ ರಾಜಕೀಯ ವಿಶ್ಲೇಷಕರು ಈ ಭೇಟಿಯನ್ನು ಸಾಮಾನ್ಯವಾಗಿ ನೋಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ವಿರೋಧ ಪಕ್ಷಗಳ ಸಂಸದರಲ್ಲಿ ಬಿರುಕು ಮೂಡುತ್ತಿರುವುದು ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ 20 ಸಂಸದರು ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದರೆ, ಮಹಾರಾಷ್ಟ್ರದಲ್ಲಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷದ 6 ಸಂಸದರು ಪಕ್ಷ ತೊರೆದಿದ್ದಾರೆ. ಈ ಎಲ್ಲಾ ಸಂಸದರು ಎನ್‌ಡಿಎಗೆ ಬೆಂಬಲ ನೀಡುವ ಸಾಧ್ಯತೆಯಿದೆ ಎಂಬ ಚರ್ಚೆಗಳ ನಡುವೆಯೇ ಆರ್‌ಜೆಡಿ ಸಂಸದರ ಈ ಭೇಟಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಅಭಯ್ ಕುಶ್ವಾಹಾ ರಾಜಕೀಯ ಹಿನ್ನೆಲೆ

ಇನ್ನು ಸಂಸದ ಅಭಯ್ ಕುಶ್ವಾಹಾ ರಾಜಕೀಯ ಹಿನ್ನೆಲೆಯೂ ಈ ಅನುಮಾನಕ್ಕೆ ಕಾರಣವಾಗಿದೆ. ಆರ್‌ಜೆಡಿ ಸೇರ್ಪಡೆಯಾಗುವ ಮೊದಲು ಅವರು ಪ್ರಸ್ತುತ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜನತಾ ದಳ ಯುನಿಟೆಡ್ (JDU) ಪಕ್ಷದಲ್ಲಿದ್ದರು(ಏಜೆನ್ಸೀಸ್​).