Amit Shah | ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಕೋಲ್ಕತ್ತಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 
ದೇಶ

ಬಂಗಾಳದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ..ಒಬ್ಬನೇ ಒಬ್ಬ ನುಸುಳುಕೋರನನ್ನೂ ಬಿಡಲ್ಲ ಅಂದ್ರು ಅಮಿತ್​ ಷಾ | Amit Shah

ಕೊಲ್ಕತ್ತಾ: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದರೆ ರಾಜ್ಯದಲ್ಲಿನ ನುಸುಳುಕೋರರನ್ನು ಗುರುತಿಸಿ ಹೊರಹಾಕುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ( Amit Shah) ಮಂಗಳವಾರ ಭರವಸೆ ನೀಡಿದ್ದಾರೆ.
ಬಂಗಾಳದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಗೃಹ ಸಚಿವ ಷಾ, ನುಸುಳುಕೋರರು ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ರಾಷ್ಟ್ರೀಯ ಗ್ರಿಡ್ ರಚಿಸಲಾಗುವುದು ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ, ನಾವು ಬಂಗಾಳದ ಪರಂಪರೆಯನ್ನು ಪುನರುಜ್ಜೀವನಗೊಳಿಸುತ್ತೇವೆ ಮತ್ತು ಅಭಿವೃದ್ಧಿಯ ಹೊಳೆಯನ್ನೇ ಹರಿಸುತ್ತೇವೆ ಎಂದು ರಾಜ್ಯದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ. ಬಡವರ ಕಲ್ಯಾಣವೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ..

ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವನ್ನು ವಿರುದ್ಧ ವಾಗ್ದಾಳಿ ನಡೆಸಿದ ಷಾ, ಬ್ಯಾನರ್ಜಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಮತ್ತು ಭಯವು ಉತ್ತುಂಗದಲ್ಲಿದೆ, ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ, ಪ್ರಧಾನಿ ಮೋದಿ ಆರಂಭಿಸಿರುವ ಎಲ್ಲಾ ಅಭಿವೃದ್ದಿ ಯೋಜನೆಗಳು ಇಲ್ಲಿನ ಟೋಲ್ ಸಿಂಡಿಕೇಟ್‌ಗೆ ಬಲಿಯಾಗಿವೆ ಎಂದರು.
ಕಳೆದ 14 ವರ್ಷಗಳಿಂದ ಭಯ ಮತ್ತು ಭ್ರಷ್ಟಾಚಾರ ಎನ್ನುವುದು ಪಶ್ಚಿಮ ಬಂಗಾಳದಲ್ಲಿ ತುಂಬಿ ತುಳುಕುತ್ತಿದೆ, ಮುಂಬರುವ ಏಪ್ರಿಲ್ 15 ರಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ನಾವು ಬಂಗಾಳದ ಪರಂಪರೆ ಮತ್ತು ಸಂಸ್ಕೃತಿಯ ಪುನರುಜ್ಜೀವನವನ್ನು ಪ್ರಾರಂಭಿಸುತ್ತೇವೆ. ಈ ಬಂಗ ಭೂಮಿ ತುಂಬಾ ಮಹತ್ವದ್ದಾಗಿದೆ ಎಂದರು. ಸ್ವಾಮಿ ವಿವೇಕಾನಂದ, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ, ಗುರುದೇವ್ ರವೀಂದ್ರನಾಥ ಟ್ಯಾಗೋರ್ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಅವರು ಕಲ್ಪಿಸಿಕೊಂಡ ಬಂಗಾಳವನ್ನು ನಿರ್ಮಿಸಲು ನಾವು ಕೆಲಸ ಮಾಡುತ್ತೇವೆ ಎಂದು ಷಾ ಹೇಳಿದರು.

ಬಿಜೆಪಿಗೆ ಬಹುಮತ..

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದಿರುವ ಅಮಿತ್ ಷಾ, 2014 ರ ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿನ ಪಕ್ಷದ ಬೆಳವಣಿಗೆಯ ಕಥೆಯನ್ನು ಸಹ ಉಲ್ಲೇಖಿಸಿದರು.
2014 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಶೇ 17% ಮತಗಳನ್ನು ಮತ್ತು ಎರಡು ಸ್ಥಾನಗಳನ್ನು ಗಳಿಸಿತು. 2016 ರ ವಿಧಾನಸಭಾ ಚುನಾವಣೆಯಲ್ಲಿ 10% ಮತ ಮತ್ತು 3 ವಿಧಾನಸಭಾ ಸ್ಥಾನಗಳನ್ನು ಪಡೆಯಿತು. 2019 ರ ಲೋಕಸಭಾ ಚುನಾವಣೆಯಲ್ಲಿ ಶೇ 41% ಮತ ಮತ್ತು 18 ಸ್ಥಾನಗಳನ್ನು ಪಡೆಯಿತು. 2021 ರ ವಿಧಾನಸಭಾ ಚುನಾವಣೆಯಲ್ಲಿ 21% ಮತ ಮತ್ತು 77 ಸ್ಥಾನಗಳನ್ನು ಪಡೆಯಿತು.
2016 ರಲ್ಲಿ 3 ಸ್ಥಾನಗಳನ್ನು ಪಡೆದ ಪಕ್ಷವು, ಕೇವಲ ಐದು ವರ್ಷಗಳ ಅವಧಿಯಲ್ಲಿ 77 ಸ್ಥಾನಗಳನ್ನು ಪಡೆಯಿತು. ಈ ಮಧ್ಯೆ, ಕಾಂಗ್ರೆಸ್ ಶೂನ್ಯವನ್ನು ತಲುಪಿದೆ. ಕಮ್ಯುನಿಸ್ಟ್ ಮೈತ್ರಿಕೂಟ ಒಂದು ಸ್ಥಾನವನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. 2024 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ 39% ಮತ ಮತ್ತು 12 ಸ್ಥಾನಗಳನ್ನು ಗಳಿಸಿದೆ. 2026 ರಲ್ಲಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು(ಏಜೆನ್ಸೀಸ್​).