Sonam Wangchuk | ಸಂಸತ್ ಚಲೋ ಫೇಲ್ ಆದ್ರೆ ದೆವ್ವವಾಗಿ ಬರ್ತೀನಿ!. 
ದೇಶ

ಸಂಸತ್ ಚಲೋ ಫೇಲ್ ಆದ್ರೆ ದೆವ್ವವಾಗಿ ಬರ್ತೀನಿ!...ಜುಲೈ 20ರ ವರೆಗೆ ಉಪವಾಸ ಹಿಂಪಡೆಯಲ್ಲ ಎಂದ ವಾಂಗ್ಚುಕ್​ | Sonam Wangchuk

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹೋರಾಟಗಾರ ಸೋನಂ ವಾಂಗ್ಚುಕ್​ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಶುಕ್ರವಾರ 20ನೇ ದಿನಕ್ಕೆ ಕಾಲಿಟ್ಟಿದೆ. ಜುಲೈ 20 ರಂದು ಜಂತರ್ ಮಂತರ್‌ನಿಂದ ಸಂಸತ್ತಿನವರೆಗೆ ನಡೆಯಲಿರುವ ಬೃಹತ್ ಸಂಸತ್ ಚಲೋ ಜಾಥಾದಲ್ಲಿ ಸ್ವತಃ ಪಾಲ್ಗೊಳ್ಳುವುದಾಗಿ ತಿಳಿಸಿರುವ ಅವರು, ಅಲ್ಲಿಯವರೆಗೆ ತಮ್ಮ ನಿರಶನ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಂಗ್ಚುಕ್​, ನಿಮ್ಮೆಲ್ಲರೊಂದಿಗೆ ಸಂಸತ್ತಿಗೆ ಜಾಥಾ ನಡೆಸಲು ನಾನು ಜುಲೈ 20 ರವರೆಗೆ ಯಾವುದೇ ರೀತಿಯಲ್ಲಾದರೂ ಜೀವಂತವಾಗಿರುತ್ತೇನೆ. ನಮ್ಮ ಯೋಜನೆ ವಿಫಲವಾದರೆ ದೆವ್ವವಾಗಿ ಮರಳುತ್ತೇನೆ ಎಂದು ತಮ್ಮ ಬೆಂಬಲಿಗರಿಗೆ ತಿಳಿಸಿದರು.

ನಾನು ತುಂಬಾ ಗಟ್ಟಿಯಾಗಿದ್ದೇನೆ ಎಂದ ವಾಂಗ್ಚುಕ್​!...

ಶಿಕ್ಷಣ ವ್ಯವಸ್ಥೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಹೊಣೆ ಹೊತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಾಂಗ್ಚುಕ್​ ನಡೆಸುತ್ತಿರುವ ನಿರಶನ 20 ದಿನ ಪೂರೈಸಿದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಜಂತರ್ ಮಂತರ್‌ನಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆಯು ಈಗ 28ನೇ ದಿನಕ್ಕೆ ಕಾಲಿಟ್ಟಿದ್ದು, ಜುಲೈ 20 ರ ಸಂಸತ್ ಚಲೋ ಈ ಚಳವಳಿಯ ಮುಂದಿನ ಬೃಹತ್ ಹೋರಾಟವಾಗಿ ಹೊರಹೊಮ್ಮಿದೆ.
ಈ ಸಂಸತ್ ಚಲೋ ಕಾರ್ಯಕ್ರಮದಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ನೋಡಿಕೊಳ್ಳಲು ತಮ್ಮ ಶಕ್ತಿಯನ್ನು ವಿನಿಯೋಗಿಸಬೇಕು ಎಂದು ಬೆಂಬಲಿಗರಿಗೆ ಕರೆ ನೀಡಿರುವ ವಾಂಗ್ಚುಕ್​​, ನಾನು ಹೊರಗಿನಿಂದ ದುರ್ಬಲನಾಗಿ ಕಾಣಿಸಬಹುದು, ಆದರೆ ಒಳಗಿನಿಂದ ಅತ್ಯಂತ ಗಟ್ಟಿಯಾಗಿದ್ದೇನೆ. ನೀವೆಲ್ಲರೂ ಒಳಗಿನಿಂದ ಮತ್ತು ಹೊರಗಿನಿಂದ ಶಕ್ತಿಶಾಲಿಗಳಾಗಿದ್ದೀರಿ ಎಂಬ ಭರವಸೆ ನನಗಿದೆ. ಜುಲೈ 20 ರಂದು ಸಂಸತ್ತಿಗೆ ಶಾಂತಿಯುತ ಜಾಥಾ ನಡೆಸಲು ನಮಗೆ ಈ ಶಕ್ತಿಯ ಅಗತ್ಯವಿದೆ. ನಾವೆಲ್ಲರೂ ಒಟ್ಟಾಗಿ ಹೋಗಿ ಪ್ರಜಾಪ್ರಭುತ್ವದ ದೇಗುಲದಲ್ಲಿ ನಮ್ಮ ಮನವಿಯನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ಹಲವು ಬೆಂಬಲಿಗರು ಮತ್ತು ರಾಜಕೀಯ ನಾಯಕರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಮನವಿ ಮಾಡುತ್ತಿದ್ದರೂ, ಈ ಚಳವಳಿಗೆ ಕೇವಲ ಸಹಾನುಭೂತಿಗಿಂತ ಜನರ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ ಎಂದು ವಾಂಗ್ಚುಕ್​ ಪುನರುಚ್ಚರಿಸಿದ್ದಾರೆ. ಈ ವಾರದ ಆರಂಭದಲ್ಲಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದ ಅವರು, ತಮ್ಮ ಉಪವಾಸ ಹಿಂಪಡೆಯಲು ಕೋರುವ ಬದಲು ಸಂಸತ್ ಚಲೋದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು.
ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದೆ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ವಾಂಗ್ಚುಕ್​ ವಾದವಾಗಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದಿರುವ ಅವರು, ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ಅನೇಕ ಬಾರಿ ಹೇಳಿದ್ದಾರೆ.

ಮೂರನೇ ವಾರಕ್ಕೆ ಕಾಲಿಟ್ಟ ಉಪವಾಸ: ವಾಂಗ್ಚುಕ್​ ಆರೋಗ್ಯ ಕ್ಷೀಣ

ಉಪವಾಸ ಸತ್ಯಾಗ್ರಹವು ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ ವಾಂಗ್ಚುಕ್​ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸುತ್ತಿದೆ. ಗುರುವಾರ ಬಿಡುಗಡೆಯಾದ ಇತ್ತೀಚಿನ ವೈದ್ಯಕೀಯ ವರದಿಯ ಪ್ರಕಾರ, ಅವರ ತೂಕ 56.65 ಕೆಜಿಗೆ ಕುಸಿದಿದೆ. ಕಳೆದ 24 ಗಂಟೆಗಳಲ್ಲಿ 500 ಗ್ರಾಂ ಮತ್ತು ಉಪವಾಸ ಆರಂಭಿಸಿದಂದಿನಿಂದ ಒಟ್ಟು 9 ಕೆಜಿಗೂ ಹೆಚ್ಚು ತೂಕ ಕಡಿಮೆಯಾಗಿದೆ. ವೈದ್ಯರು ಅವರ ರಕ್ತದೊತ್ತಡವನ್ನು 105/61 mmHg, ರಕ್ತದ ಸಕ್ಕರೆ ಮಟ್ಟವನ್ನು 80 mg/dL ಮತ್ತು ಆಮ್ಲಜನಕದ ಸ್ಯಾಚುರೇಶನ್ ಅನ್ನು 97% ಎಂದು ದಾಖಲಿಸಿದ್ದಾರೆ. ಅವರು ಮಾನಸಿಕವಾಗಿ ಜಾಗರೂಕರಾಗಿದ್ದರೂ, ನಿರಂತರ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶವೇನು..?

ವಾಂಗ್ಚುಕ್​ ಆರೋಗ್ಯ ಕ್ಷೀಣಿಸುತ್ತಿರುವ ವಿಷಯ ದೆಹಲಿ ಹೈಕೋರ್ಟ್‌ ಅಂಗಳಕ್ಕೆ ತಲುಪಿದ್ದು, ಪ್ರತಿದಿನ ಅವರ ಆರೋಗ್ಯ ತಪಾಸಣೆ ನಡೆಸಲು ಮತ್ತು ಸ್ಥಿತಿ ಹದಗೆಟ್ಟರೆ ವೈದ್ಯಕೀಯ ನೆರವು ನೀಡಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ವಾಂಗ್ಚುಕ್​ ಸ್ಥಿತಿಯನ್ನು ಹತ್ತಿರದಿಂದ ಮೇಲ್ವಿಚಾರಣೆ ಮಾಡುವುದಾಗಿ ಸರ್ಕಾರವೂ ಕೋರ್ಟ್‌ಗೆ ತಿಳಿಸಿದೆ. ಕಳೆದ ಒಂದು ವಾರದಲ್ಲಿ ರಾಜಕಾರಣಿಗಳು, ಬರಹಗಾರರು, ನಟರು ಮತ್ತು ನಾಗರಿಕ ಸಮಾಜದ ಪ್ರಮುಖರು ಜಂತರ್ ಮಂತರ್‌ಗೆ ಭೇಟಿ ನೀಡಿ ವಾಂಗ್ಚುಕ್​​ಗೆ ಬೆಂಬಲ ಸೂಚಿಸಿದ್ದು, ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿದ್ದಾರೆ(ಏಜೆನ್ಸೀಸ್​).