Abhishek Banerjee > ನೀವು ದೀದಿ ಪಾಳಯಕ್ಕೆ ಮರಳಿ, ಒಂದೇ ಗಂಟೆಯಲ್ಲಿ ರಾಜೀನಾಮೆ ಕೊಡ್ತೀನಿ; ಭಿನ್ನಮತೀಯರಿಗೆ ಅಭಿಷೇಕ್ ಓಪನ್​ ಚಾಲೆಂಜ್ 
ದೇಶ

ನೀವು ದೀದಿ ಪಾಳಯಕ್ಕೆ ಮರಳಿ, ಒಂದೇ ಗಂಟೆಯಲ್ಲಿ ರಾಜೀನಾಮೆ ಕೊಡ್ತೀನಿ; ಭಿನ್ನಮತೀಯರಿಗೆ ಅಭಿಷೇಕ್ ಓಪನ್​ ಚಾಲೆಂಜ್ | Abhishek Banerjee

ಕೋಲ್ಕತ್ತಾ: ಬಂಡಾಯ ನಾಯಕರು ಪಕ್ಷಕ್ಕೆ ಮರಳಿದರೆ ತಾವು ಕೇವಲ ಒಂದೇ ಗಂಟೆಯೊಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee ) ಸವಾಲು ಹಾಕಿದ್ದಾರೆ. ಇದೇ ವೇಳೆ ಭಿನ್ನಮತೀಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ಪಕ್ಷಾಂತರಿಗಳು ಆಡಳಿತಾರೂಢ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹೆಚ್ಚಿನ ಬಂಡಾಯ ನಾಯಕರು ತಾವು ಪಕ್ಷ ತೊರೆಯಲು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಅನುಭವಿಸಿದ ಸೋಲಿಗೆ ಅಭಿಷೇಕ್ ನಿರ್ಧಾರಗಳೇ ಕಾರಣ ಎಂದು ದೂಷಿಸಿದ್ದು, ಟಿಎಂಸಿಯಲ್ಲಿ ಹೊಸ ನಾಯಕತ್ವಕ್ಕೆ ಒತ್ತಾಯಿಸಿದ್ದಾರೆ. ಪಕ್ಷದ ಕಾರ್ಯವೈಖರಿಯ ಕುರಿತು ತಾವು ಈ ಮೊದಲೇ ಕಳವಳ ವ್ಯಕ್ತಪಡಿಸಿದ್ದರೂ, ತಮ್ಮ ಕುಂದುಕೊರತೆಗಳಿಗೆ ಯಾವುದೇ ಗಮನ ಹರಿಸದ ಕಾರಣ ತಮಗೆ ಬಂಡಾಯ ಏಳುವ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಭಿನ್ನಮತೀಯರು ಪ್ರತಿಪಾದಿಸಿದ್ದಾರೆ.

ನಿಂದಿಸುವಂತೆ ಒತ್ತಾಯಿಸಲಾಗುತ್ತಿದೆ!...

ಟಿಎಂಸಿ ಒಳಗಿನ ಬಂಡಾಯ ಮತ್ತು ಇತ್ತೀಚಿನ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ತಮ್ಮನ್ನು ಟೀಕಿಸಿದವರ ವಿರುದ್ಧ ವಾಗ್ದಾಳಿ ನಡೆಸಿದ ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿ, ಬಂಡಾಯ ನಾಯಕರು ಪೊಲೀಸರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನನ್ನನ್ನು ನಿಂದಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಹೇಳಿದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನನ್ನನ್ನು ಹೊಣೆ ಮಾಡುವುದಾದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಒಟ್ಟು 42 ಸ್ಥಾನಗಳ ಪೈಕಿ 29 ಸ್ಥಾನಗಳನ್ನು ಗೆದ್ದುಕೊಂಡಾಗ ಪಕ್ಷದ ಅತ್ಯುತ್ತಮ ಪ್ರದರ್ಶನಕ್ಕೆ ನನಗೇ ಶ್ರೇಯಸ್ಸು ನೀಡಬೇಕು ಎಂದಿದ್ದಾರೆ.

ಅಭಿಷೇಕ್​ ಹೇಳಿದ್ದೇನು...?

ನನ್ನಿಂದ ಯಾರಿಗಾದರೂ ಸಮಸ್ಯೆ ಇದ್ದರೆ, ಅವರಿಗೆ ಸವಾಲು ಹಾಕುತ್ತೇನೆ. ಸುಮಾರು 60 ಶಾಸಕರು ಮತ್ತು 20 ಸಂಸದರು ಪಕ್ಷ ತೊರೆದಿದ್ದಾರೆ, ನೀವು ಮಮತಾ ಬ್ಯಾನರ್ಜಿ ಅವರ ಬಳಿಗೆ ಮರಳಿ ಬನ್ನಿ. 24 ಗಂಟೆಗಳನ್ನು ಮರೆತುಬಿಡಿ, ನಾನು ಕೇವಲ ಒಂದು ಗಂಟೆಯೊಳಗೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತೇನೆ. ಅಭಿಷೇಕ್ ಬ್ಯಾನರ್ಜಿ ತೊರೆದರೆ ನೀವೆಲ್ಲರೂ ಮರಳಿ ಬರುತ್ತೀರಿ ಎಂದು ನೀವು ಹೇಳುತ್ತೀರಿ. ನೀವು ಮಧ್ಯಾಹ್ನ 3 ಗಂಟೆಗೆ ಹಿಂತಿರುಗಿ ಬನ್ನಿ, ನಾನು ಸಂಜೆ 4 ಗಂಟೆಯೊಳಗೆ ರಾಜೀನಾಮೆ ನೀಡುತ್ತೇನೆ ಎಂದರು
ಜಾರಿ ನಿರ್ದೇಶನಾಲಯ (ಇಡಿ) ಅಥವಾ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ನೋಟಿಸ್ ಪಡೆದಿರುವ ಭಿನ್ನಮತೀಯರು ತಾವು ಯಾವುದೇ ತಪ್ಪು ಮಾಡದಿದ್ದರೆ ತನಿಖೆಯನ್ನು ಎದುರಿಸಬೇಕು ಎಂದಿರುವ ಅಭಿಷೇಕ್​, ತಮಗೂ ಸಹ ತನಿಖಾ ಸಂಸ್ಥೆಗಳಿಂದ ಸಮನ್ಸ್ ಬಂದಿದೆ ಮತ್ತು ತಮ್ಮ ವಿರುದ್ಧ ಹಲವು ಎಫ್‌ಐಆರ್ ದಾಖಲಾಗಿದ್ದರೂ ತಾವು ಯಾರ ಮುಂದೆಯೂ ತಲೆಬಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಎಂದಿಗೂ ಓಡಿಹೋಗಿಲ್ಲ. ನಮಗೆ ಇಡಿ ಅಥವಾ ಸಿಬಿಐನಿಂದ ರಕ್ಷಣೆ ಪಡೆಯುವುದು ಮುಖ್ಯವಲ್ಲ. ನಮಗೆ ಮುಖ್ಯವಾದ ಏಕೈಕ ರಕ್ಷಣೆ ಎಂದರೆ ಜನರ ವಿಶ್ವಾಸ ಮತ್ತು ಬೆಂಬಲ. ನಾನು ಯಾರ ಮುಂದೆಯಾದರೂ ತಲೆಬಾಗಬೇಕಾಗಿ ಬಂದರೆ, ಪ್ರಜಾಪ್ರಭುತ್ವದಲ್ಲಿ ಜನರ ಮುಂದೆ ಮಾತ್ರ ತಲೆಬಾಗುತ್ತೇನೆ, ದೆಹಲಿಯಲ್ಲಿ ಕುಳಿತಿರುವ ಪ್ರಭಾವಿ ವ್ಯಕ್ತಿಗಳ ಮುಂದೆ ಎಂದಿಗೂ ತಲೆಬಾಗುವುದಿಲ್ಲ. ಇದು ನಾನು ಬದ್ಧವಾಗಿರುವ ತತ್ವ ಎಂದರು(ಏಜೆನ್ಸೀಸ್​​).